ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗೆ ಹೆಸರಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಕಳೆದ ಒಂದು ವರ್ಷದಲ್ಲಿ ನಾಲ್ವರು ನಿರ್ದೇಶಕರನ್ನು ಕಂಡಿದ್ದು, ಪೂರ್ಣಾವಧಿ ನಿರ್ದೇಶಕರ ನೇಮಕಾತಿ ನಡೆಯದಿದ್ದರಿಂದ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.
ಈ ಸಂಸ್ಥೆಗೆ ಕಳೆದ ಒಂದು ವರ್ಷದಿಂದ ಪೂರ್ಣಾವಧಿ ನಿರ್ದೇಶಕರಿಲ್ಲ. 2022ರ ಅಕ್ಟೋಬರ್ 17ರಂದು ನಿರ್ದೇಶಕರಾಗಿ ನೇಮಕಗೊಂಡಿದ್ದ ರೇಡಿಯೇಷನ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ವಿ.ಲೋಕೇಶ್ ಅವರನ್ನು ಅಧಿಕಾರ ದುರ್ಬಳಕೆ, ಅಕ್ರಮ ಸೇವಾ ಬಡ್ತಿ, ವೈದ್ಯಕೀಯ ನಿರ್ಲಕ್ಷ್ಯ ಸೇರಿ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ 2024ರ ಫೆಬ್ರುವರಿಯಲ್ಲಿ ಅಮಾನತು ಮಾಡಲಾಗಿತ್ತು.
ಬಳಿಕ ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಸೈಯದ್ ಅಲ್ತಾಫ್ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ತಾಂತ್ರಿಕ ಕಾರಣದಿಂದ ತೆರವಾದ ಈ ಸ್ಥಾನಕ್ಕೆ ಡಾ. ತೇಜಸ್ವಿನಿ ಬಿ. ಅವರ ನೇಮಕಾತಿ ನಡೆದಿತ್ತು. ನಂತರದ ಮೂರು ತಿಂಗಳ ಅವಧಿಯಲ್ಲಿಯೇ ಡಾ. ರವಿ ಅರ್ಜುನ್ ಅವರು ಪ್ರಭಾರ ನಿರ್ದೇಶಕರಾಗಿ ನೇಮಕಗೊಂಡಿದ್ದು, ಅವರು ಇದೇ ತಿಂಗಳು ನಿವೃತ್ತಿ ಹೊಂದಲಿದ್ದಾರೆ. ಪೂರ್ಣಾವಧಿ ನಿರ್ದೇಶಕರಿಲ್ಲದ ಪರಿಣಾಮ ಔಷಧ ಖರೀದಿ ಸೇರಿ ವಿವಿಧ ಟೆಂಡರ್ ಪ್ರಕ್ರಿಯೆಗಳು ಕುಂಟುತ್ತಾ ಸಾಗುತ್ತಿವೆ.
ಸಂಸ್ಥೆಯು ಕ್ಯಾನ್ಸರ್ ಚಿಕಿತ್ಸೆಯ ಜತೆಗೆ ಶಿಕ್ಷಣ, ಸಂಶೋಧನೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಕೊಂಡಿದೆ. ಇಲ್ಲಿನ ಹೊಂಬೇಗೌಡ ನಗರದಲ್ಲಿರುವ ಸಂಸ್ಥೆಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಸಂಸ್ಥೆಯ ದಾಖಲಾತಿ ಪ್ರಕಾರ ಶೇ 50ರಷ್ಟು ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗೆ ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬರುತ್ತಿದ್ದಾರೆ. ಶೇ 14.3 ರಷ್ಟು ಮಂದಿಗೆ ಮಾತ್ರ ಮೊದಲ ಹಾಗೂ ಎರಡನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ.
ಎರಡು ಜವಾಬ್ದಾರಿ:
ಐಎಎಸ್ ಅಧಿಕಾರಿ ಅರುಂಧತಿ ಚಂದ್ರಶೇಖರ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ಈ ಸಂಸ್ಥೆಯ ಆಡಳಿತ ಸುಧಾರಣೆಗೆ ಹಾಗೂ ಕಾರ್ಯಚಟುವಟಿಕೆಗಳ ನಿರ್ವಹಣೆಗೆ 2024ರ ಫೆಬ್ರುವರಿಯಲ್ಲಿ ಐಎಎಸ್ ಅಧಿಕಾರಿ ಎನ್. ಮಂಜುಶ್ರೀ ಅವರನ್ನು ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ನಿಗದಿತ ಅವಧಿ ಮುಕ್ತಾಯವಾದ ಬಳಿಕ ವೈದ್ಯಕೀಯ ಶಿಕ್ಷಣ ಇಲಾಖೆಯು ಆಡಳಿತಾಧಿಕಾರಿಯ ಕಾರ್ಯಾವಧಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಕೋರಿತ್ತು. ಅದರಂತೆ ಎನ್. ಮಂಜುಶ್ರೀ ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ನವೀನ್ ಭಟ್ ಅವರನ್ನು 2024ರ ಸೆಪ್ಟೆಂಬರ್‌ನಲ್ಲಿ ನೇಮಿಸಲಾಗಿದೆ.
ನವೀನ್ ಭಟ್ ಅವರು ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ನಿರ್ದೇಶಕರೂ ಆಗಿದ್ದು, ಎರಡು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಇದರಿಂದಾಗಿ ಅವರಿಗೆ ಕಾರ್ಯಚಟುವಟಿಕೆಗಳ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎನ್ನುತ್ತಾರೆ ಸಂಸ್ಥೆಯ ಸಿಬ್ಬಂದಿ.
‘ನಿರ್ದೇಶಕರಾಗಿ ನೇಮಕಗೊಂಡವರಿಗೆ ಸಂಸ್ಥೆಯ ಆಡಳಿತದ ಬಗ್ಗೆ ತಿಳಿದುಕೊಳ್ಳಲು ಕೆಲವು ತಿಂಗಳು ಬೇಕಾಗುತ್ತವೆ. ಆದರೆ, ಪೂರ್ಣಾವಧಿ ನಿರ್ದೇಶಕರ ನೇಮಕಾತಿ ಪ್ರಕ್ರಿಯೆ ನಡೆಯದಿದ್ದರಿಂದ, ಸಂಸ್ಥೆಯ ಆಡಳಿತ ಯಂತ್ರ ಕುಸಿದಿದೆ. ಪ್ರಭಾರ ನಿರ್ದೇಶಕರಿಗೆ ವಿವಿಧ ಟೆಂಡರ್ ಪ್ರಕ್ರಿಯೆಗಳನ್ನು ನಡೆಸುವ ಅಧಿಕಾರ ಇಲ್ಲದಿರುವುದರಿಂದ ಔಷಧ ಕೊರತೆ ಸಮಸ್ಯೆಯು ತಲೆದೋರಿದೆ’ ಎಂದು ಸಂಸ್ಥೆಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಅಂಕಿ–ಅಂಶಗಳು
863: ರೋಗಿಗಳ ಚಿಕಿತ್ಸೆಗೆ ಸಂಸ್ಥೆ ಹೊಂದಿರುವ ಬೆಡ್‌ಗಳು
1,767: ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ
1,400: ನಿತ್ಯ ಭೇಟಿ ನೀಡುವ ಸರಾಸರಿ ಹೊರರೋಗಿಗಳು
3 ಲಕ್ಷ: ಸಂಸ್ಥೆಯಲ್ಲಿ ಪ್ರತಿವರ್ಷ ಚಿಕಿತ್ಸೆ ಪಡೆದುಕೊಳ್ಳುವವರು
ಸದ್ಯ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಆಡಳಿತಾಧಿಕಾರಿ ನಿರ್ವಹಿಸುತ್ತಿದ್ದಾರೆ. ಪೂರ್ಣಾವಧಿ ನಿರ್ದೇಶಕರ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿಯೇ ನಡೆಯಲಿದೆಡಾ. ಸುಜಾತಾ ರಾಥೋಡ್ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ
ಹೊರರೋಗಿಗಳ ಸಂಖ್ಯೆ ಹೆಚ್ಚಳ
ಕ್ಯಾನ್ಸರ್ ಚಿಕಿತ್ಸೆಗಾಗಿ ಸಂಸ್ಥೆಗೆ ಸ್ಥಳೀಯರ ಜತೆಗೆ ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ (ಸಿಎಸ್ಆರ್) ನೆರವಿನಿಂದ ಅತ್ಯಾಧುನಿಕ ಸೌಲಭ್ಯ ಹೊಂದಿದ ಹೊರರೋಗಿ ಘಟಕ (ಒಪಿಡಿ) ಹಾಗೂ ವಿವಿಧ ಚಿಕಿತ್ಸಾ ಘಟಕಗಳು ಸಂಸ್ಥೆಗೆ ಇತ್ತೀಚಿನ ವರ್ಷಗಳಲ್ಲಿ ಸೇರ್ಪಡೆಗೊಂಡಿವೆ. ಇದರಿಂದಾಗಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆಯೂ ಏರಿಕೆ ಕಂಡಿದ್ದು ಪ್ರತಿ ನಿತ್ಯ ಹೊರರೋಗಿಗಳ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ. ಪೂರ್ಣಾವಧಿ ನಿರ್ದೇಶಕರಿಲ್ಲದ ಪರಿಣಾಮ ಅಗತ್ಯ ಪ್ರಮಾಣದಲ್ಲಿ ವೈದ್ಯರ ಜತೆಗೆ ಸಿಬ್ಬಂದಿಯೂ ಇಲ್ಲದಿರುವುದರಿಂದ ರೋಗಿಗಳ ನಿರ್ವಹಣೆ ಸಂಸ್ಥೆಗೆ ಸವಾಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.