ADVERTISEMENT

ಹೂಡಿ: ಮೂಲಸೌಕರ್ಯಗಳೇ ಇಲ್ಲ ಬಿಡಿ !

ನೀರಿಗಾಗಿ 2 ಕಿ.ಮೀ. ನಡಿಗೆ * ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರ

ಗುರು ಪಿ.ಎಸ್‌
Published 2 ನವೆಂಬರ್ 2019, 21:36 IST
Last Updated 2 ನವೆಂಬರ್ 2019, 21:36 IST
ಹೂಡಿ ವಾರ್ಡ್‌ನಲ್ಲಿನ ಮುಖ್ಯ ರಸ್ತೆಯ ದುಸ್ಥಿತಿ
ಹೂಡಿ ವಾರ್ಡ್‌ನಲ್ಲಿನ ಮುಖ್ಯ ರಸ್ತೆಯ ದುಸ್ಥಿತಿ   

ಬೆಂಗಳೂರು: ‘ನಮ್ಮ ಬಡಾವಣೆ ಎಂದರೆ ಅಧಿಕಾರಿಗಳಿಗೆ ಅಲರ್ಜಿ. ಹಲವು ವರ್ಷಗಳಿಂದ ಇತ್ತ ಯಾವ ಅಧಿಕಾರಿಯೂ ತಲೆಹಾಕಿಲ್ಲ. ಹದಗೆಟ್ಟ ರಸ್ತೆಗಳು, ಎಲ್ಲೆಂದರಲ್ಲಿ ಕಾಣುವ ಕಸದ ರಾಶಿ ನೋಡಿದರೆ ನಾವು ಬೆಂಗಳೂರಿನಲ್ಲಿದ್ದೇವೆಯೋ, ಯಾವುದೋ ಕುಗ್ರಾಮದಲ್ಲಿದ್ದೇವೆಯೋ ಎಂಬ ಅನುಮಾನ ಬರುತ್ತದೆ...’

ಮಹದೇವಪುರ ವಿಧಾನಸಭಾ ಕ್ಷೇತ್ರದ ಹೂಡಿ ವಾರ್ಡ್‌ನ ಬಡಾವಣೆಗಳ ನಿವಾಸಿಗಳು ಈ ರೀತಿ ಬೇಸರ ತೋಡಿಕೊಳ್ಳುತ್ತಾರೆ. ಬಿಬಿಎಂಪಿ ವ್ಯಾಪ್ತಿಗೆ ಸೇರಿ ವರ್ಷಗಳೇ ಕಳೆದರೂ ಮೂಲಸೌಕರ್ಯ ಗಳಿಂದ ಈ ವಾರ್ಡ್‌ ದೂರವೇ ಉಳಿದಿದೆ. ಕುಡಿಯುವ ನೀರಿಗಾಗಿ 2 ಕಿ.ಮೀ. ನಡೆಯಬೇಕಾದ ಪರಿಸ್ಥಿತಿ ಸ್ಥಳೀಯರದ್ದು.

‘ಕಾವೇರಿ ನೀರು ಪೂರೈಸಲು ಪೈಪ್‌ಲೈನ್‌ ಅಳವಡಿಕೆಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಕೆಲವು ಕಡೆ ಪೈಪ್‌ಗಳನ್ನು ಹಾಕಿದ್ದರೂ ರಸ್ತೆಯನ್ನು ದುರಸ್ತಿ ಪಡಿಸದೆ ಹಾಗೆಯೇ ಬಿಡಲಾಗಿದೆ. ಮಳೆ ಬಂದರೆ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತವೆ. ಆಗ ವಾಹನ ಚಲಾಯಿಸುವುದೇ ಸವಾಲು’ ಎಂದು ಹೂಡಿಯ ಕಿರಣ್‌ಕುಮಾರ್‌ ದೂರಿದರು.

ADVERTISEMENT

‘ಕಾವೇರಿ ನೀರು ಇನ್ನೂ ಪೂರೈಕೆಯಾಗದ ಕಾರಣ, ಕೊಳವೆಬಾವಿಗಳನ್ನೇ ಆಶ್ರಯಿಸಬೇಕಾಗಿದೆ. ಆದರೆ, ಅಂತರ್ಜಲ ಬತ್ತಿ ಹೋಗಿರುವುದರಿಂದ ಕೊಳವೆ ಬಾವಿಗಳಲ್ಲಿಯೂ ನೀರು ಬರುತ್ತಿಲ್ಲ’ ಎಂದು ಗೃಹಿಣಿ ನಾಗವೇಣಿ ಎಂ. ಪಾಟೀಲ ಹೇಳಿದರು.

‘ಒಂದು ಟ್ಯಾಂಕರ್‌ ನೀರಿಗೆ ₹450 ಕೇಳುತ್ತಾರೆ. 5 ಸಾವಿರ ಲೀಟರ್‌ ನೀರು ಇರುತ್ತದೆ. ಅಲ್ಲದೆ, ಬಿಬಿಎಂಪಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 20 ಲೀಟರ್ ನೀರು ₹5ಗೆ ದೊರೆಯುತ್ತಿದೆ. ಇಂತಹ ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಖಾಸಗಿಯವರ ಸಹಭಾಗಿತ್ವದಡಿ ಬಿಬಿಎಂಪಿಯ ಜಾಗದಲ್ಲಿ ‘ಡಾಕ್ಟರ್‌ ವಾಟರ್‌’ ಘಟಕಗಳನ್ನು ನಿರ್ಮಿಸಿದ್ದು, ಒಂದು ಕ್ಯಾನ್‌ಗೆ ₹10 ನೀಡಬೇಕು. ಈ ಘಟಕಗಳಿಗೆ ಹೋಗಲು 2 ಕಿ.ಮೀ. ನಡೆಯಬೇಕು’ ಎಂದು ವಾರಾಣಸಿ ಮುಖ್ಯರಸ್ತೆಯ ನಿವಾಸಿ ಶೋಭಾ ಹೇಳಿದರು.

‘ಹದಗೆಟ್ಟ ರಸ್ತೆ ದುರಸ್ತಿ, ಕುಡಿಯುವ ನೀರು ಹಾಗೂ ಸಮರ್ಪಕ ಕಸ ವಿಲೇವಾರಿಗೆ ಒತ್ತಾಯಿಸಿ ಮನವಿ ಪತ್ರವನ್ನು ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಹಾಗೂ ಅಧಿಕಾರಿಗಳಿಗೆ ನೀಡಿದ್ದೆವು. ಆದರೆ, ಈವರೆಗೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಒಂದೊಂದು ಬಡಾವಣೆಯಲ್ಲೂ ಸುಮಾರು 40 ಸಾವಿರದಿಂದ 50 ಸಾವಿರ ಜನ ನೆಲೆಸಿದ್ದಾರೆ. ಆದರೆ, ಇಲ್ಲಿ ಸಮರ್ಪಕವಾದ ಬಸ್‌ ಸೌಲಭ್ಯವನ್ನು ಇನ್ನೂ ಕಲ್ಪಿಸಿಲ್ಲ’ ಎಂದು ನಾರಾಯಣಸ್ವಾಮಿ ದೂರಿದರು.

‘ಸಮಸ್ಯೆಗೆ ಪರಿಹಾರ ಶೀಘ್ರ’
‘ವಾರಾಣಸಿ ಮುಖ್ಯರಸ್ತೆಯ ಕನಕನಗರ ಸುತ್ತ–ಮುತ್ತಲಿನ ಪ್ರದೇಶದಲ್ಲಿ ಮೊದಲು 150 ಮನೆಗಳು ಇದ್ದವು. ಈಗ 4 ಸಾವಿರಕ್ಕೂ ಹೆಚ್ಚು ಮನೆಗಳು ತಲೆ ಎತ್ತಿವೆ. ಹೀಗಾಗಿ, ತಾತ್ಕಾಲಿಕವಾಗಿ ಸಮಸ್ಯೆ ಉದ್ಭವಿಸಿದ್ದರೂ, ನಂತರ ಎಲ್ಲವನ್ನೂ ಸರಿಪಡಿಸಲಾಗುವುದು’ ಎಂದು ಹೂಡಿ ವಾರ್ಡ್‌ನ ಪಾಲಿಕೆ ಸದಸ್ಯ ಹರಿಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರಿನ ಸಮಸ್ಯೆ ನೀಗಲು ಕೊಳವೆಬಾವಿಗಳನ್ನು ಕೊರೆಸಬಹುದು. ಆದರೆ, ಸಂಪರ್ಕ ಒದಗಿಸಲು ಪೈಪ್‌ಲೈನ್‌ ಅಳವಡಿಸಿಲ್ಲ. ಈ ಕಾಮಗಾರಿ ಮುಗಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಎಲ್ಲ ಕಾಮಗಾರಿಗಳು ಮುಗಿದ ನಂತರ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು’ ಎಂದರು.

*
ಕುಡಿಯಲು ನೀರಿಲ್ಲ. ಒಂದು ಟ್ಯಾಂಕರ್‌ ನೀರಿಗೆ ಈಗ ₹450ಗೆ ಕೊಡಬೇಕು. ಬೇಸಿಗೆ ವೇಳೆಯಲ್ಲಿ ₹700–₹750 ಕೇಳುತ್ತಾರೆ. ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಿಲ್ಲ.
-ರಾಜೇಶ್‌, ಹೂಡಿ ವಾರ್ಡ್‌ ನಿವಾಸಿ

*
ವಾರಾಣಸಿ ಮುಖ್ಯರಸ್ತೆಯಲ್ಲಿರುವ ಎಸ್‌ಎಂಆರ್‌ ಲೇಔಟ್‌ಗೆ 10 ವರ್ಷಗಳಿಂದ ಅಧಿಕಾರಿಗಳು ಕಾಲಿಟ್ಟಿಲ್ಲ. ಹದಗೆಟ್ಟ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಕೇಳುವವರೇ ಇಲ್ಲ.
-ನಾರಾಯಣಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.