ADVERTISEMENT

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ವೃದ್ಧೆ ಹತ್ಯೆ

* ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣ * ಪ್ಲಂಬರ್ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 22:36 IST
Last Updated 2 ಜೂನ್ 2023, 22:36 IST
ಕಮಲಾ
ಕಮಲಾ   

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವೃದ್ಧೆ ಕಮಲಾ (82) ಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಲಗ್ಗೆರೆ ಎಲ್‌.ಜಿ. ರಾಮಣ್ಣ ಬಡಾವಣೆಯ ಆರ್‌. ಅಶೋಕ (40), ಲಗ್ಗೆರೆ ಕೆಂಪೇಗೌಡ ನಗರದ ಸಿ.ಎಂ. ಸಿದ್ದರಾಜು (34) ಹಾಗೂ ಕಾಮಾಕ್ಷಿಪಾಳ್ಯದ ಸಣ್ಣಕಿ ಬಯಲು ನಿವಾಸಿ ಅಂಜನಮೂರ್ತಿ (33) ಬಂಧಿತರು. ಮೂವರು ಸೇರಿಕೊಂಡು ಮೇ 27ರಂದು ಸಂಜೆ ಕಮಲಾ ಅವರನ್ನು ಕೊಂದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಕಮಲಾ ಅವರ ಕೈ– ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಆರೋಪಿಗಳು ಕೊಲೆ ಮಾಡಿದ್ದರು.  ಬೆಂಗಳೂರು ತೊರೆದು ಬೇರೆ ನಗರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ’ ಎಂದು ತಿಳಿಸಿದರು.

ADVERTISEMENT

ಕ್ರಿಕೆಟ್ ಬೆಟ್ಟಿಂಗ್‌ನಿಂದ ಸಾಲ: ‘ಆರೋಪಿ ಅಶೋಕ, ಪ್ಲಂಬರ್ ಆಗಿದ್ದ. ಆಟೊ ಚಾಲಕ ಅಂಜನ್‌ಮೂರ್ತಿ ಹಾಗೂ ಕಾರ್ಮಿಕ ಸಿದ್ದರಾಜು ಸ್ನೇಹಿತರಾಗಿದ್ದರು. ಐಪಿಎಲ್ ಟಿ–20 ಕ್ರಿಕೆಟ್ ಪಂದ್ಯಾವಳಿ ವೇಳೆ ಮೂವರು ವಿಪರೀತ ಬೆಟ್ಟಿಂಗ್ ಕಟ್ಟುತ್ತಿದ್ದರು. ಇದಕ್ಕಾಗಿ ಹಲವರ ಬಳಿ ಸಾಲ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕ್ರಿಕೆಟ್ ಪಂದ್ಯಗಳ ಸೋಲು–ಗೆಲುವು ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡಿದ್ದರು. ಸಾಲ ನೀಡಿದ್ದ ಜನ, ಹಣ ವಾಪಸು ನೀಡುವಂತೆ ಒತ್ತಾಯಿಸುತ್ತಿದ್ದರು. ಕೆಲಸದಿಂದ ಬರುವ ಹಣದಲ್ಲಿ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಅದೇ ಕಾರಣಕ್ಕೆ ಆರೋಪಿಗಳು, ಚಿನ್ನಾಭರಣ ಕಳ್ಳತನ ಮಾಡಲು ಸಂಚು ರೂಪಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

ವೃದ್ಧೆ ಮನೆಯಲ್ಲಿ ಪ್ಲಂಬರ್ ಕೆಲಸ : ‘ಪಶ್ಚಿಮ ಕಾರ್ಡ್ ರಸ್ತೆಗೆ ಹೊಂದಿಕೊಂಡಿರುವ 2ನೇ ಹಂತದ 12ನೇ ಅಡ್ಡರಸ್ತೆಯ ಮನೆಯಲ್ಲಿ ವೃದ್ಧೆ ಕಮಲಾ ನೆಲೆಸಿದ್ದರು. ಪತಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಮಕ್ಕಳು ಪ್ರತ್ಯೇಕವಾಗಿ ಬೇರೆಡೆ ವಾಸವಿದ್ದರು. ಅಶೋಕ, ತಿಂಗಳ ಹಿಂದೆಯಷ್ಟೇ ಕಮಲಾ ಮನೆಗೆ ಪ್ಲಂಬರ್ ಕೆಲಸಕ್ಕೆ ಹೋಗಿದ್ದ. ಇಡೀ ದಿನ ಮನೆಯಲ್ಲಿ ಅಶೋಕ, ವೃದ್ಧೆ ಧರಿಸಿದ್ದ ಚಿನ್ನಾಭರಣ ಗಮನಿಸಿದ್ದ’ ಎಂದು ಪೊಲೀಸರು ಹೇಳಿದರು.

ಬಾಡಿಗೆ ಕೇಳುವ ನೆಪದಲ್ಲಿ ನುಗ್ಗಿದ್ದರು: ‘ಕಮಲಾ ಅವರ ಮನೆಯಲ್ಲಿ ಕಳ್ಳತನ ಮಾಡಲು ಅಶೋಕ, ಅಂಜನಮೂರ್ತಿ ಹಾಗೂ ಸಿದ್ದರಾಜುಗೆ ಮೇ 27ರಂದು ಸಂಜೆ ಮನೆ ಬಳಿ ಹೋಗಿದ್ದರು. ಅಂಜನಮೂರ್ತಿ ಹಾಗೂ ಸಿದ್ದರಾಜು ಮಾತ್ರ ವೃದ್ಧೆ ಬಳಿ ತೆರಳಿದ್ದರು. ಅಶೋಕ ದೂರದಲ್ಲಿ ನಿಂತುಕೊಂಡಿದ್ದ’ ಎಂದರು. 

‘ಬಿಸ್ಕತ್ ಮಾರಾಟ ಏಜೆನ್ಸಿ ನಡೆಸುತ್ತಿದ್ದೇವೆ. ಬಿಸ್ಕತ್ ಬಾಕ್ಸ್‌ಗಳನ್ನು ಸಂಗ್ರಹಿಸಲು ಮನೆ ಬೇಕಿದೆ. ನಿಮ್ಮ ಮನೆ ನೀಡಿದರೆ, ಹೆಚ್ಚು ಬಾಡಿಗೆ ಕೊಡುತ್ತೇವೆ’ ಎಂದು ಆರೋಪಿಗಳು ಹೇಳಿದ್ದರು. ಅವರನ್ನು ನಂಬಿದ್ದ ವೃದ್ಧೆ, ಬಾಡಿಗೆ ನೀಡುವುದಾಗಿ ಹೇಳಿದ್ದರು. ವಾಪಸು ಹೋಗಿದ್ದ ಆರೋಪಿಗಳು, ಕೆಲ ಹೊತ್ತಿನ ನಂತರ ಪುನಃ ಮನೆಗೆ ಬಂದಿದ್ದರು. ಅಶೋಕ ಸಹ ಜೊತೆಗಿದ್ದ.’

‘ಮನೆಯೊಳಗೆ ನುಗ್ಗಿದ್ದ ಮೂವರು, ವೃದ್ಧೆ ಮೇಲೆ ಹಲ್ಲೆ ಮಾಡಿದ್ದರು. ಕೈ–ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಂದಿದ್ದರು. ನಂತರ, ಅವರ ಬಳಿಯ ಎರಡು ಚಿನ್ನದ ಸರ ಹಾಗೂ ಚಿನ್ನದ ಬಳೆಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

ಆಭರಣ ಮಾರಿ ಸಾಲಗಾರರಿಗೆ ಹಣ: ‘ಚಿನ್ನಾಭರಣವನ್ನು ಮಾರಾಟ ಮಾಡಿದ್ದ ಆರೋಪಿಗಳು, ಬಂದ ಹಣವನ್ನು ಹಂಚಿಕೊಂಡಿದ್ದರು. ನಂತರ, ಸಾಲ ತೀರಿಸಿದ್ದರು. ಸ್ವಲ್ಪ ಹಣ ಉಳಿದಿದ್ದು, ಅದನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು’ ಎಂದರು.

‘ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ವೃದ್ಧೆ ಮೃತಪಟ್ಟ ವಿಷಯ ತಮಗೆ ಗೊತ್ತಿರಲಿಲ್ಲವೆಂದು ಆರೋಪಿಗಳು ಹೇಳಿಕೆ ನೀಡುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ಅಶೋಕ
ಅಂಜನಮೂರ್ತಿ
ಸಿದ್ದರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.