ADVERTISEMENT

ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ

ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣ, ವಿವಿಧ ಬಗೆಯ ಕಡಲೆಕಾಯಿಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 14:38 IST
Last Updated 2 ಡಿಸೆಂಬರ್ 2023, 14:38 IST
ಮಲ್ಲೇಶ್ವರದಲ್ಲಿ ಶನಿವಾರ ಆರಂಭವಾದ ಪರಿಷೆಯಲ್ಲಿ ಮಕ್ಕಳು ಕಡಲೆಕಾಯಿ ತೆಗೆದುಕೊಂಡರು –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಮಲ್ಲೇಶ್ವರದಲ್ಲಿ ಶನಿವಾರ ಆರಂಭವಾದ ಪರಿಷೆಯಲ್ಲಿ ಮಕ್ಕಳು ಕಡಲೆಕಾಯಿ ತೆಗೆದುಕೊಂಡರು –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಕಾಡುಮಲ್ಲೇಶ್ವರ ಗೆಳೆಯರ ಬಳಗವು ಮಲ್ಲೇಶ್ವರದಲ್ಲಿ ಆಯೋಜಿಸಿರುವ 7ನೇ ವರ್ಷದ ಕಡಲೆಕಾಯಿ ಪರಿಷೆಗೆ ಶನಿವಾರ ಚಾಲನೆ ನೀಡಲಾಯಿತು. ಸೋಮವಾರದವರೆಗೆ ಪರಿಷೆ ನಡೆಯಲಿದೆ. ಮಲ್ಲೇಶ್ವರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ದೇಗುಲ ಸುತ್ತಲಿನ ರಸ್ತೆಗಳು ತಳಿರು ತೋರಣಗಳಿಂದ ಅಲಂಕೃತವಾಗಿವೆ. ಗಂಗಮ್ಮ, ನರಸಿಂಹಸ್ವಾಮಿ ದೇವಾಲಯ, ಕಾಡುಮಲ್ಲಿಕಾರ್ಜುನ ದೇವಸ್ಥಾನಗಳನ್ನು ಕಡಲೆಕಾಯಿಗಳಿಂದಲೇ ಅಲಂಕಾರ ಮಾಡಲಾಗಿದೆ. 20 ಅಡಿ ಉದ್ದ ಮತ್ತು 20 ಅಡಿ ಅಗಲದ ನಂದಿಯ ಪ್ರತಿಕೃತಿಯನ್ನು 800 ಕೆ.ಜಿ ಕಡಲೆಕಾಯಿಗಳಿಂದ ಅಲಂಕರಿಸಲಾಗಿದ್ದು, ಯುವಕರು ಅದರ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ವಿವಿಧ ತಳಿಗಳ ಕಡಲೆಕಾಯಿಗಳ ರಾಶಿಗಳ ಸಾಲು, ಹಲವು ಬಗೆಯ ತಿಂಡಿ–ತಿನಿಸುಗಳು, ಆಟಿಕೆಗಳು, ಆಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳು ಆರಂಭವಾಗಿವೆ. 

ಪರಿಷೆಯನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು ವಿವಿಧ ಸಂಘಟನೆಗಳ ಸದಸ್ಯರು ಜಾಗೃತಿ ಮೂಡಿಸುವುದರ ಜೊತೆಗೆ ಉಚಿತವಾಗಿ ಪೇಪರ್ ಮತ್ತು ಬಟ್ಟೆಯ ಕೈಚೀಲಗಳನ್ನು ವಿತರಿಸುತ್ತಿದ್ದರು.

ADVERTISEMENT

ಹೊರ ರಾಜ್ಯದ ಶೇಂಗಾ:

ತಮಿಳುನಾಡು, ಆಂಧ್ರ ಪ್ರದೇಶದ ವಿವಿಧೆಡೆಯಿಂದಲೂ ಹಾಲ್ಗಡಲೆ, ಕೆಂಪುಕಡಲೆ ಸೇರಿ ಎರಡು, ಮೂರು ಹಾಗೂ ನಾಲ್ಕು ಬೀಜದ ನಾಟಿ, ಹೈಬ್ರಿಡ್ ತಳಿಗಳ ಕಡಲೆಕಾಯಿಗಳು ಬಂದಿವೆ. ಒಂದು ಸೇರಿಗೆ ₹40 ಹಾಗೂ ₹50 ರಂತೆ ಮಾರಾಟ ಮಾಡಲಾಗುತ್ತಿದೆ.

ಪರಿಷೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಾಸಕ ಮುನಿರತ್ನ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಚಾಲನೆ ನೀಡಿದರು. ಕಾಂಗ್ರೆಸ್‌ ಮುಖಂಡ ಅನೂಪ್ ಅಯ್ಯಂಗಾರ್ ಇದ್ದರು.

ಮರಗಳ ಕ್ಯೂಆರ್‌ ಕೋ‌ಡ್‌:

‘ಸಂಪಿಗೆ ರಸ್ತೆಯ ಗತ ವೈಭವವನ್ನು ಮರುಸ್ಥಾಪಿಸಲು ಸಂಪಿಗೆ ರಸ್ತೆಯಲ್ಲಿ ಈ ಬಾರಿ 50ಕ್ಕೂ ಅಧಿಕ ಸಂಪಿಗೆ ಗಿಡಗಳನ್ನು ನೆಡಲಾಗಿದೆ. ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ನೆಡಲಾಗಿರುವ ಸಸಿಗಳನ್ನು ಸಂರಕ್ಷಣೆಯ ಮಾಡಲು ಪ್ರತಿಯೊಂದು ಗಿಡಕ್ಕೆ ಕ್ಯೂಆರ್‌ ಕೋಡ್‌ ಹಾಕಿ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.