ಬೆಂಗಳೂರು: ಹೊಸದಾಗಿ ಸಲೂನ್ ಆ್ಯಂಡ್ ಸ್ಪಾ ಆರಂಭಿಸಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ್ದ ಆರೋಪದ ಅಡಿ ಮೂವರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಿಶಾ ಅಲಿಯಾಸ್ ಸ್ಮಿತಾ (32), ಅವರ ಸ್ನೇಹಿತೆ ಕಾವ್ಯಾ (25) ಹಾಗೂ ಮೊಹಮ್ಮದ್ (40) ಬಂಧಿತರು.
‘ಹಲ್ಲೆಗೆ ಒಳಗಾದ ಸಂಜು ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
ಕೊಡಿಗೆಹಳ್ಳಿ ಸಮೀಪದಲ್ಲಿ ನಿಶಾ ಅವರು ಸ್ಪಾ ನಡೆಸುತ್ತಿದ್ದರು. ಅದೇ ಸ್ಪಾದಲ್ಲಿ ಸಂಜು ಅವರು ಕೆಲವು ವರ್ಷದಿಂದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕೆಲಸ ಬಿಟ್ಟು ಸ್ವಂತ ಸ್ಪಾ ತೆರೆದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ನಿಶಾ ಅವರು ತನ್ನ ಸಹಚರರಾದ ಕಾವ್ಯಾ, ಮೊಹಮ್ಮದ್ ಅವರ ಜೊತೆಗೆ ಸೇರಿಕೊಂಡು ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಭುವನೇಶ್ವರಿ ನಗರ ಮುಖ್ಯ ರಸ್ತೆಯಲ್ಲಿರುವ ಸ್ಪಾಕ್ಕೆ ನುಗ್ಗಿ ಸಂಜು ಅವರನ್ನು ಬೆದರಿಸಿದ್ದರು. ಅದಾದ ಮೇಲೆ ಅಪಹರಿಸಿ ದಾಸರಹಳ್ಳಿ ಮುಖ್ಯ ರಸ್ತೆಯ ಮೂಲಕ ಜಕ್ಕೂರು ಕಡೆಗೆ ಕರೆದೊಯ್ದು, ಹಲ್ಲೆ ನಡೆಸಿದ್ದರು. ಅಲ್ಲದೇ, ಪೆಟ್ರೋಲ್ ಹಾಕಿ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದರು. ನಂತರ, ಅಮೃತ ನಗರದ ಶಾರದಾ ಸ್ಕೂಲ್ ಬಳಿ ಬಿಟ್ಟು ತೆರಳಿದ್ದರು. ಸಂಜು ನೀಡಿದ ದೂರು ಆಧರಿಸಿ ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾವ್ಯಾ ಸಿಗರೇಟ್ ಸೇದುತ್ತಾ ಸಂಜು ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಸಲೂನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಾವ್ಯಾ ಜತೆ ಸ್ಮಿತಾ ಸಹಚರರು ಸಹ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಯುವತಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.