ಸಾಂದರ್ಭಿಕ ಚಿತ್ರ
ಬೆಂಗಳೂರು: ಹಾಸನ ಜಂಕ್ಷನ್ ರೈಲ್ವೆ ಯಾರ್ಡ್ ಮರುನಿರ್ಮಾಣ ಕಾಮಗಾರಿಯನ್ನು ಕುಕ್ಕೆಸುಬ್ರಹ್ಮಣ್ಯದಲ್ಲಿ ನಡೆಯಲಿರುವ ‘ಸುಬ್ರಹ್ಮಣ್ಯ ಷಷ್ಠಿ’ಯ ಬಳಿಕ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಶಂಕರ್ ಗುಹ ದ್ವಾರಕನಾಥ್ ರೈಲ್ವೆ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಈ ಅವಧಿಯಲ್ಲಿ ಕಾಮಗಾರಿಗಾಗಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿದರೆ ಭಕ್ತರಿಗೆ ತೊಂದರೆಯಾಗಲಿದೆ. ಆದ್ದರಿಂದ ಕಾಮಗಾರಿಯನ್ನು ಮುಂದೂಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಯಾರ್ಡ್ ಮರುನಿರ್ಮಾಣಕ್ಕಾಗಿ ಡಿ.14ರಿಂದ 22ರ ವರೆಗೆ 20 ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. 8 ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ. 2 ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದರು.
ಡಿ.18ರಂದು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ನಡೆಯಲಿದೆ. ದೇಶ ಮತ್ತು ರಾಜ್ಯದ ವಿವಿಧ ಪ್ರದೇಶಗಳ ಲಕ್ಷಾಂತರ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಷಷ್ಠಿ ಸಮಯದಲ್ಲಿ ರೈಲು ಸಂಚಾರ ಇಲ್ಲದಿದ್ದರೆ ಭಕ್ತರಿಗೆ ಸುಬ್ರಹ್ಮಣ್ಯಕ್ಕೆ ತೆರಳಲು ಅನನುಕೂಲವಾಗಲಿದೆ. ಇದನ್ನು ತಪ್ಪಿಸಲು ಕಾಮಗಾರಿಯನ್ನು ಮುಂದೂಡಬೇಕು. ಡಿ. 20ರ ನಂತರ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಶಂಕರ್ ಗುಹ ದ್ವಾರಕನಾಥ್ ಒತ್ತಾಯಿಸಿದ್ದಾರೆ.
ಬಸ್ ಪ್ರಮಾಣ ಹೆಚ್ಚಿಸಿ: ಸುಬ್ರಹ್ಮಣ್ಯ ಷಷ್ಠಿ ಸಮಯದಲ್ಲಿ ಭಕ್ತರಿಗೆ ಸಂಚರಿಸಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಸಹಿತ ವಿವಿಧ ನಿಗಮಗಳ ಬಸ್‌ಗಳ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸಾರಿಗೆ ಸಚಿವರಿಗೂ ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.