
ಬೆಂಗಳೂರು: ಮುಖಕ್ಕೆ ಮಾಸ್ಕ್ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮಾಲೀಕನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸೋಲದೇವನಹಳ್ಳಿ ನಿವಾಸಿ ಡಿ.ರಾಜಾ (43) ಎಂಬಾತನನ್ನು ಬಂಧಿಸಿ, ₹1.84 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಈತನ ಬಂಧನದಿಂದ ನಗರದ ಎರಡು ಠಾಣೆಗಳಲ್ಲಿ ದಾಖಲಾಗಿದ್ದ ನಾಲ್ಕು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
‘ದಾವಣಗೆರೆ ಹಾಗೂ ನಗರದಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ರಾಜಾ, ಕೆಲ ವರ್ಷಗಳಿಂದ ಸೋಲದೇವನಹಳ್ಳಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾನೆ. ಜೂಜಾಟದಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ಈತ, ಕೊರೊನಾ ವೇಳೆ ಟ್ರಾವೆಲ್ಸ್‌ನಲ್ಲಿ ಭಾರಿ ನಷ್ಟ ಉಂಟಾಗಿದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ನಾಲ್ಕು ವರ್ಷಗಳಿಂದ ನಗರದಲ್ಲಿ ಆಟೊ ಚಾಲನೆ ಮಾಡಿಕೊಂಡಿದ್ದ. ಆದರೆ, ತನ್ನ ದುಶ್ಚಟಗಳಿಗೆ ಹಣ ಹೊಂದಿಸಲು ಕಳೆದೊಂದು ವರ್ಷದಿಂದ ಕಳ್ಳತನ ಹಾದಿ ಹಿಡಿದಿದ್ದ’ ಎಂದು ಪೊಲೀಸರು ತಿಳಿಸಿದರು.
ಎನ್‌ಜಿಇಎಫ್ ಲೇಔಟ್ ನಿವಾಸಿ, ಹೋಟೆಲ್ ಉದ್ಯಮಿ ಉದಯನಾಯಕ್ ಅವರು 2025ರ ಅಕ್ಟೋಬರ್ 18ರಂದು ಕುಂದಾಪುರಕ್ಕೆ ಕುಟುಂಬ ಸಮೇತ ಹೋಗಿದ್ದರು. ಅವರು ವಾಪಸ್ ಬಂದಾಗ ಮನೆ ಬಾಗಿಲನ್ನು ಮೀಟಿ, ಯಾರೋ ಒಳಗೆ ಹೋಗಿದ್ದರು. ಕೊಠಡಿಯ ಬೀರುವಿನಲ್ಲಿದ್ದ ಸುಮಾರು 783 ಗ್ರಾಂ ಚಿನ್ನಾಭರಣಗಳು ಹಾಗೂ ₹8 ಲಕ್ಷ ನಗದು ಕಳವಾಗಿದ್ದವು. ಈ ಬಗ್ಗೆ ಅವರು ದೂರು ನೀಡಿದ್ದರು ಎಂದರು.
ಬಾತ್ಮೀದಾರರ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಜತೆಗೆ ಕಳವು ಚಿನ್ನಾಭರಣಗಳನ್ನು ಕಮಗೊಂಡನಹಳ್ಳಿ, ಅಬ್ಬಿಗೆರೆ, ಎಚ್‌ಎಂಟಿ ಲೇಔಟ್‌ನಲ್ಲಿರುವ ಆಭರಣ ಅಂಗಡಿಗಳಲ್ಲಿ ಹಾಗೂ ಅಬ್ಬಿಗೆರೆ ಜಾಲಹಳ್ಳಿ, ಗೋವಾದಲ್ಲಿ ವಾಸವಿರುವ ವ್ಯಕ್ತಿ ಸೇರಿ ನಾಲ್ವರಿಗೆ ಚಿನ್ನಾಭರಣ ಮಾರಾಟ ಮಾಡಿರುವುದಾಗಿ ತಿಳಿಸಿದ್ದ. ನಂತರ ಆರೋಪಿ ನೀಡಿದ ಮಾಹಿತಿಯಂತೆ ಮೂರು ಆಭರಣ ಅಂಗಡಿ ಹಾಗೂ ನಾಲ್ವರು ವ್ಯಕ್ತಿಗಳಿಂದ ಒಟ್ಟು 1 ಕೆ.ಜಿ. 232 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನ ಹಾಗೂ ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ತನ್ನ ಗುರುತು ಮರೆಮಾಚಲು ಮುಖಕ್ಕೆ ಮಾಸ್ಕ್, ಕೈಗವಸು ಹಾಕಿಕೊಂಡು ಮನೆಗಳ ಬೀಗ ಮುರಿದು ಮನೆಯೊಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಜತೆಗೆ ರೈಲ್ವೆ ಟ್ರ್ಯಾಕ್ ಸಮೀಪದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿರುವುದು ಪತ್ತೆಯಾಗಿದೆ. ಚಿನ್ನಾಭರಣ ಮಾರಿದ ಹಣದಲ್ಲಿ ಗೋವಾದಲ್ಲಿ ಮೋಜು-ಮಸ್ತಿಗೆ ಹಣ ಬಳಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.