ADVERTISEMENT

ಮೆಟ್ರೊ ನಿಲ್ದಾಣಕ್ಕೆ ಸಾಹಿತಿ, ಹೋರಾಟಗಾರರ ಹೆಸರಿಡಿ: ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ಗೊರೂರು ಸಂಸ್ಮರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 14:32 IST
Last Updated 6 ಸೆಪ್ಟೆಂಬರ್ 2025, 14:32 IST
<div class="paragraphs"><p>ಸಮಾರಂಭದಲ್ಲಿ ಹಂಪ ನಾಗರಾಜಯ್ಯ ಅವರಿಗೆ ‘ಗೊರೂರು ಪ್ರಶಸ್ತಿ’ ನೀಡಿ ಗೌರವಿಸಲಾಯಿತು. </p></div>

ಸಮಾರಂಭದಲ್ಲಿ ಹಂಪ ನಾಗರಾಜಯ್ಯ ಅವರಿಗೆ ‘ಗೊರೂರು ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮೆಟ್ರೊ ನಿಲ್ದಾಣಗಳಿಗೆ ಸಾಹಿತಿಗಳು ಹಾಗೂ ಕನ್ನಡ ಪರ ಹೋರಾಟಗಾರರ ಹೆಸರಿಡಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ಸರ್ಕಾರಕ್ಕೆ ಆಗ್ರಹಿಸಿದರು. 

ADVERTISEMENT

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಡಾ.ಗೊರೂರು ಸಾಹಿತ್ಯ ಪ್ರತಿಷ್ಠಾನ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗೊರೂರು ಸ್ಮರಣೆ ಸಮಾರಂಭದಲ್ಲಿ ಸಾಹಿತಿ ಹಂಪ ನಾಗರಾಜಯ್ಯ ಹಾಗೂ ಮರಣೋತ್ತರವಾಗಿ ಆಯ್ಕೆಯಾಗಿದ್ದ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಪರವಾಗಿ ಪುತ್ರ ಸುಧೀರ್ ಅವರಿಗೆ ‘ಗೊರೂರು ಪ್ರಶಸ್ತಿ’ ಪ್ರದಾನ ಮಾಡಲಾಯಿತು.  

ಈ ವೇಳೆ ಮಾತನಾಡಿದ ಮುಕುಂದರಾಜ್, ‘ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಎಲ್ಲ ಕಾಲಕ್ಕೂ ಸಲ್ಲುವ ಲೇಖಕರು. ಅವರನ್ನು ಮರೆತರೆ ಗಾಂಧೀಜಿ ಅವರನ್ನು ಮರೆತಂತೆ. ಗೊರೂರು ಅವರ ಹೆಸರನ್ನು ಮೆಟ್ರೊ ನಿಲ್ದಾಣಕ್ಕೆ ಇಡುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಚಲನಚಿತ್ರ ನಟರಿಗಿಂತ ದೊಡ್ಡ ಮಾದರಿ ಕನ್ನಡದ ಲೇಖಕರು, ಕನ್ನಡ ಪರ ಹೋರಾಟಗಾರರು. ಯುವಜನರಿಗೆ ಅವರ ಬಗ್ಗೆ ತಿಳಿಸಬೇಕಿದೆ. ಆದ್ದರಿಂದ ಮೆಟ್ರೊ ನಿಲ್ದಾಣಗಳಿಗೆ ಪ್ರಮುಖ ಸಾಹಿತಿಗಳು ಹಾಗೂ ಕನ್ನಡ ಪರ ಹೋರಾಟಗಾರರ ಹೆಸರಿಡಲು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

‘ಇತ್ತೀಚಿನ ವರ್ಷಗಳಲ್ಲಿ ಗಾಂಧೀಜಿ ಅಲಕ್ಷ್ಯಕ್ಕೆ ಒಳಗಾಗಿದ್ದಾರೆ. ಅವರು ನೀಡಿದ ಮೌಲ್ಯಗಳನ್ನು ಕಳೆದುಕೊಂಡಲ್ಲಿ ಈ ದೇಶಕ್ಕೆ ಭವಿಷ್ಯ ಇರುವುದಿಲ್ಲ. ರಾಜಕಾರಣಿಗಳೂ ಗಾಂಧಿ ಮೌಲ್ಯಗಳಿಂದ ದೂರವಾಗಿರುವುದರಿಂದಲೇ ರಾಜಕೀಯ ಪರಿಸ್ಥಿತಿ ಹದಗೆಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಸಾಹಿತಿ ಹಂಪ ನಾಗರಾಜಯ್ಯ, ‘ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸೊಬಗು, ಸೊಗಡು ತಂದುಕೊಟ್ಟವರು ಗೊರೂರು. ಗ್ರಾಮೀಣ ಜೀವನದ ಸೊಗಡು ತಿಳಿಯಲು ಅವರ ಪುಸ್ತಕ ಸಹಕಾರಿ’ ಎಂದು ಹೇಳಿದರು. 

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪುತ್ರಿ ವಾಸಂತಿ ಮೂರ್ತಿ ಗೊರೂರು, ‘ಸಂಪ್ರದಾಯಸ್ಥರಾಗಿದ್ದ ತಂದೆ ಅವರ ಸಾಮಾಜಿಕ ಪ್ರಜ್ಞೆ ತೀಕ್ಷ್ಣವಾಗಿತ್ತು. ಗಾಂಧೀಜಿ ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು, 15 ತಿಂಗಳು ಸೆರೆವಾಸ ಅನುಭವಿಸಿದ್ದರು. ಅವರು ತಮ್ಮ ಹುಟ್ಟೂರಾದ ಗೊರೂರನ್ನು ತೊರೆಯುವಾಗ ಇಡೀ ಹಳ್ಳಿ ಜನರು ಕಣ್ಣೀರು ಹಾಕಿದ್ದರು. ಬಳಿಕ ರಾಜಾಜಿನಗರದಲ್ಲಿ ವಾಸವಿದ್ದರು. ಅವರ ಹೆಸರನ್ನು ರಾಜಾಜಿನಗರ ಮೆಟ್ರೊ ನಿಲ್ದಾಣಕ್ಕೆ ಇಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.