ADVERTISEMENT

ಮೇ ಅಂತ್ಯದೊಳಗೆ ಪಾಲಿಕೆಗಳಿಗೆ ಚುನಾವಣೆ: ಡಿಕೆಶಿ

‘ಡಿಎಚ್‌ ಬೆಂಗಳೂರು–2040 ಶೃಂಗ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
ಶುಕ್ರವಾರ ನಡೆದ ‘ಡಿಎಚ್‌ ಬೆಂಗಳೂರು–2040 ಶೃಂಗ’ದ ಸಂವಾದದಲ್ಲಿ ಡಿ.ಕೆ. ಶಿವಕುಮಾರ್‌
ಶುಕ್ರವಾರ ನಡೆದ ‘ಡಿಎಚ್‌ ಬೆಂಗಳೂರು–2040 ಶೃಂಗ’ದ ಸಂವಾದದಲ್ಲಿ ಡಿ.ಕೆ. ಶಿವಕುಮಾರ್‌   

ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ನಗರ ಪಾಲಿಕೆಗಳಿಗೆ ಮೇ ತಿಂಗಳೊಳಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಅಭಿವೃದ್ಧಿಯ ರೂಪುರೇಷೆಗಳನ್ನು ಆಳವಾಗಿ ವಿಶ್ಲೇಷಿಸಲು ‘ಪ್ರಜಾವಾಣಿ’ಯ ಸೋದರ ಪತ್ರಿಕೆಯಾದ ‘ಡೆಕ್ಕನ್‌ ಹೆರಾಲ್ಡ್‌’, ‘ಗ್ರೇಟರ್ ಬೆಂಗಳೂರಿನ ಸಬಲೀಕರಣ’ ಘೋಷಣೆಯೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ಡಿಎಚ್‌ ಬೆಂಗಳೂರು–2040 ಶೃಂಗ’ದ ಸಂವಾದದಲ್ಲಿ ಮಾತನಾಡಿದರು.

‘ಚುನಾವಣೆ ನಡೆಸುವ ಕುರಿತು ಈಗಾಗಲೇ ಸುಪ‍್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಐದು ಪಾಲಿಕೆಗಳ, 369 ವಾರ್ಡ್‌ಗಳಿಗೂ ಸದಸ್ಯರು ಆಯ್ಕೆಯಾಗಬೇಕು. ಈ ಬಗ್ಗೆ ಪಕ್ಷದ ಶಾಸಕರ ಜತೆ ಚರ್ಚಿಸಲಾಗಿದ್ದು, ಜನರ ಸಮಸ್ಯೆಗಳಿಗೆ ಪರಿಹಾರ ದೊರಕುವಂತಾಗಬೇಕು. ಚುನಾವಣೆಗೆ ಸಿದ್ದವಾಗಿರುವಂತೆ ಪಕ್ಷದ ಕಾರ್ಯಕರ್ತರಿಗೂ ಸೂಚನೆ ನೀಡಲಾಗಿದ್ದು, ಹಲವು ಸುತ್ತಿನ ಸಭೆ ಸಹ ನಡೆಸಲಾಗಿದೆ’ ಎಂದು ತಿಳಿಸಿದರು.

‘ಸರ್ಕಾರದ ಒಂದು ಸಾವಿರ ದಿನಗಳ ಆಡಳಿತದಲ್ಲಿ ಸಾಕಷ್ಟು ಜನಪ್ರಿಯ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಜಾರಿಗೊಳಿಸಿದೆ. ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಸುರಂಗ ರಸ್ತೆ, ಡಬ್ಬಲ್ ಡೆಕ್ಕರ್, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್, ಮೆಟ್ರೊ, ಮೇಲ್ಸೇತುವೆಗಳು, ಸಾರ್ವಜನಿಕ ಸಾರಿಗೆ ಪರಿಹಾರವಾಗಿದೆ’ ಎಂದು ಹೇಳಿದರು. 

‘ಸುರಂಗ ರಸ್ತೆ ಪರಿಕಲ್ಪನೆ ಬಹಳದ ಹಿಂದಿನಿಂದಲೂ ಇದೆ. ಇದರ ಬಗ್ಗೆ ತಿಳಿಯದವರು ಟೀಕೆ ಮಾಡುತ್ತಿದ್ದಾರಷ್ಟೇ. ನಗರದಲ್ಲಿ ಕೈಗೊಳ್ಳುತ್ತಿರುವ ಸುರಂಗ ರಸ್ತೆ ನಿರ್ಮಾಣಕ್ಕೆ 20 ಮಂದಿ ಬಿಡ್‌ ಸಲ್ಲಿಸಿದ್ದು, ಇದಕ್ಕೆ ₹20 ಸಾವಿರ ಕೋಟಿ ಬಂಡವಾಳ ಹೂಡಬೇಕಾಗಿದೆ. ಸುರಂಗ ರಸ್ತೆ ಸಮಿತಿ ಈ ಬಗ್ಗೆ ಮಾತುಕತೆ ನಡೆಸುತ್ತಿದೆ’ ಎಂದು ವಿವರಿಸಿದರು.

ADVERTISEMENT

ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಇನ್ನೂ 14 ಲಕ್ಷ ಆಸ್ತಿ ಬಾಕಿ ಇದೆ. 9 ಲಕ್ಷ ಇ–ಖಾತಾಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ, ಇ–ಖಾತಾ ಅಭಿಯಾನ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ. ಪ್ರಸ್ತುತ ₹ 6 ಸಾವಿರ ಕೋಟಿ ತೆರಿಗೆ ಸಂಗ್ರಹಿಸಲಾಗಿದ್ದು, ₹10 ಸಾವಿರ ಕೋಟಿ ಸಂಗ್ರಹಿಸುವ ಗುರಿ ಇದೆ ಎಂದರು. 

ಈ ಹಿಂದೆ ಕೃಷಿ ಭೂಮಿ ಡಿಜಿಟಲೀಕರಣಕ್ಕೆ ಭೂಮಿ ಯೋಜನೆ ತರಲಾಗಿತ್ತು. ನಮ್ಮ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಇ–ಖಾತೆ ವ್ಯವಸ್ಥೆ ತರಲು ಉದ್ದೇಶಿಸಿದ್ದೇವೆ. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಾವೇರಿ ಸಾಫ್ಟ್‌ವೇರ್‌ನಲ್ಲಿ ದಾಖಲೆಗಳು ಆಧಾರ್‌ ಜೊತೆ ಲಿಂಕ್‌ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಕ್ಕೆ ಅಧಿಕಾರಕ್ಕೆ ಬಂದಾಗಿನಿಂದ ಕೈಗೊಂಡಿರುವ ಕಾರ್ಯಕ್ರಮಗಳು, ಯೋಜನೆಗಳು ಹಾಗೂ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಮಾತನಾಡಿದರು.  

‘ಡೆಕ್ಕನ್‌ ಹೆರಾಲ್ಡ್‌’ನ ಪೊಲಿಟಿಕಲ್ ಬ್ಯುರೋ ಮುಖ್ಯಸ್ಥ  ಭರತ್ ಜೋಷಿ ಸಂವಾದ ನಡೆಸಿಕೊಟ್ಟರು. 

ದಿ ಪ್ರಿಂಟರ್ಸ್‌ (ಮೈಸೂರು) ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ತಿಲಕ್‌ಕುಮಾರ್‌, ನಿರ್ದೇಶಕ ಕೆ.ಎನ್‌. ಶಾಂತಕುಮಾರ್‌, ನಿರ್ದೇಶಕಿ ಕೆ.ಟಿ. ಸೌಭಾಗ್ಯಲಕ್ಷ್ಮಿ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಕಿರಣ್‌ ಸುಂದರ್‌ರಾಜನ್‌, ‘ಡೆಕ್ಕನ್‌ ಹೆರಾಲ್ಡ್‌’ ಕಾರ್ಯನಿರ್ವಾಹಕ ಸಂಪಾದಕ ಕೆ.ವಿ. ಸುಬ್ರಹ್ಮಣ್ಯ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಉಪಸ್ಥಿತರಿದ್ದರು.

ಪತ್ರಿಕೆ ಜತೆ ಭಾವನಾತ್ಮಕ ಸಂಬಂಧ: ಡಿಕೆಶಿ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಕೇವಲ ಪತ್ರಿಕೆ ಮಾತ್ರವಲ್ಲ. ಅವುಗಳ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ನಿತ್ಯ ನನ್ನ ಮನೆಗೆ ಹದಿನೈದು ಪತ್ರಿಕೆಗಳು ಬರುತ್ತವೆ. ಎಲ್ಲವನ್ನೂ ಒಮ್ಮೆ ಕಣ್ಣಾಡಿಸಿ ಪಕ್ಕಕ್ಕಿಟ್ಟು ನಿಮ್ಮ ಸಮೂಹದ ಪತ್ರಿಕೆಗಳ ಸಂಪಾದಕೀಯವನ್ನು ತಪ್ಪದೇ ಓದುತ್ತೇನೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ‘ಟೀಕೆಗಳು ರಚನಾತ್ಮಕವಾಗಿರಬೇಕು ರಾಜಕೀಯ ಕಾರಣಕ್ಕೆ ಟೀಕೆ ಸಲ್ಲದು. ಟೀಕೆಗಳು ಮತ್ತು ಶತ್ರುಗಳು ಇದ್ದರೆ ಉತ್ತಮ ಕೆಲಸ ಮಾಡಲು ಸಾಧ್ಯ. ಮಾಧ್ಯಮಗಳು ತಪ್ಪುಗಳನ್ನು ಗುರುತಿಸಿ ಹೇಳಿದರೆ ತಿದ್ದಿಕೊಳ್ಳುತ್ತೇವೆ ಮತ್ತು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ. ಟೀಕೆಗಳು ಮತ್ತು ಶತ್ರುಗಳು ಇರದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ. ರಾಜ್ಯದ ಮಾಧ್ಯಮಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.