ADVERTISEMENT

ಬೆಂಗಳೂರು ನಗರ ಪಾಲಿಕೆಗಳಿಂದ ಅನುದಾನಕ್ಕೆ ಬೇಡಿಕೆ

ಪಶ್ಚಿಮ ನಗರ ಪಾಲಿಕೆಯಲ್ಲಿ ಅತಿ ಕಡಿಮೆ ತೆರಿಗೆ ಸಂಗ್ರಹ; ಹೆಚ್ಚಿನ ಹಣ ನೀಡುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 23:30 IST
Last Updated 23 ಡಿಸೆಂಬರ್ 2025, 23:30 IST
<div class="paragraphs"><p>ಗ್ರೇಟರ್ ಬೆಂಗಳೂರು - ಐದು ನಗರ ಪಾಲಿಕೆಗಳ ವ್ಯಾಪ್ತಿ</p></div>

ಗ್ರೇಟರ್ ಬೆಂಗಳೂರು - ಐದು ನಗರ ಪಾಲಿಕೆಗಳ ವ್ಯಾಪ್ತಿ

   

ಬೆಂಗಳೂರು: ಐದು ನಗರ ಪಾಲಿಕೆಗಳ ತೆರಿಗೆ ಸಂಗ್ರಹ, ಸಂಪನ್ಮೂಲ ಕ್ರೋಡೀಕರಣದಲ್ಲಿ ಭಾರಿ ವ್ಯತ್ಯಾಸವಿದ್ದು, ಕಾಮಗಾರಿಗಳ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡುವಂತೆ ಬೇಡಿಕೆ ಇರಿಸಿವೆ.

‘ತೆರಿಗೆ ಸಂಗ್ರಹದಲ್ಲಿ ನಗರ ಪಾಲಿಕೆಯಿಂದ ನಗರ ಪಾಲಿಕೆಗೆ ವ್ಯತ್ಯಾಸ ಇರುವುದು ನಿಜ. ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಲಾಗಿದ್ದರೂ, ಕೆಲವು ನಗರ ಪಾಲಿಕೆಗಳ ಆದಾಯ ಕಡಿಮೆ ಇದೆ. ಪಶ್ಚಿಮ ನಗರ ಪಾಲಿಕೆಯಲ್ಲಿ ಅತಿ ಕಡಿಮೆ ತೆರಿಗೆ ಸಂಗ್ರಹವಾಗುತ್ತಿದೆ’ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದರು.

ADVERTISEMENT

‘ಕಡಿಮೆ ಆದಾಯವಿರುವ ಪಶ್ಚಿಮ ನಗರ ಪಾಲಿಕೆ ಸೇರಿದಂತೆ ಐದೂ ನಗರ ಪಾಲಿಕೆಗಳು ಹೆಚ್ಚಿನ ಅನುದಾನ ನೀಡಬೇಕೆಂದು ಬೇಡಿಕೆ ಇರಿಸಿವೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಅಲ್ಲಿನ ತೀರ್ಮಾನದಂತೆ ಮುಂದುವರಿಯಲಾಗುವುದು’ ಎಂದು ಮಾಹಿತಿ ನೀಡಿದರು.

‘ಬಿಬಿಎಂಪಿ ಬದಲು ಐದು ನಗರ ಪಾಲಿಕೆಗಳನ್ನು ರಚಿಸಿರುವುದೇ ಇದಕ್ಕೆ ಕಾರಣ ಎಂದು ಹೇಳುವುದಿಲ್ಲ. ಸ್ಥಳೀಯ ಮಟ್ಟದ ಸೌಲಭ್ಯಗಳನ್ನು ಜನರಿಗೆ ಕ್ಷಿಪ್ರವಾಗಿ ತಲುಪಿಸಲು ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಕೆಲವು ಭಾಗಗಳಲ್ಲಿ ತೆರಿಗೆ– ಸಂಪನ್ಮೂಲ ಸಂಗ್ರಹದಲ್ಲಿ ಸಮಸ್ಯೆ ಆಗಿರುವುದು ನಿಜ. ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲು ಸೂಚಿಸಲಾಗಿದೆ’ ಎಂದರು.

26 ಪಿಜಿಗಳಿಗೆ ಬೀಗ: ಮಾರ್ಗಸೂಚಿಗಳನ್ನು ಪಾಲಿಸದ, ತೆರಿಗೆ ಪಾವತಿಸದ 26 ಪೇಯಿಂಗ್‌ ಗೆಸ್ಟ್‌ಗಳಿಗೆ (ಪಿಜಿ) ಬೀಗ ಹಾಕಲಾಗಿದೆ. ಪೂರ್ವ ಹಾಗೂ ದಕ್ಷಿಣ ನಗರ ಪಾಲಿಕೆಗಳಲ್ಲಿ ಪಿಜಿಗಳು ಹೆಚ್ಚಾಗಿವೆ. ಉತ್ತರದಲ್ಲಿ ಕಡಿಮೆ ಸಂಖ್ಯೆಯಲ್ಲಿವೆ. ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.