ADVERTISEMENT

ಮನೆ ಕೆಲಸದಾಕೆಯ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 16:22 IST
Last Updated 26 ಅಕ್ಟೋಬರ್ 2025, 16:22 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಮನೆ ಕೆಲಸದಾಕೆಯನ್ನು ಕೊಲೆ ಮಾಡಿ ಆಟೊದಲ್ಲಿ ಮೃತದೇಹವನ್ನು ಬಿಟ್ಟು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ತಿಲಕ್‌ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ರಾಗಿಗುಡ್ಡ ಕೊಳೆಗೇರಿ ಪ್ರದೇಶ ನಿವಾಸಿ ಸಲ್ಮಾ (35) ಕೊಲೆಯಾದವರು. ಪ್ರಕರಣ ಸಂಬಂಧ ಸ್ವಾಗತ್ ಕಾಲೊನಿಯ ನಿವಾಸಿಗಳಾದ ಸುಬ್ರಮಣಿ ಅಲಿಯಾಸ್ ಸುಬ್ಬು ಮತ್ತು ಸೆಂಥಿಲ್ ಎಂಬುವವರನ್ನು ಬಂಧಿಸಲಾಗಿದೆ.

ನಾಲ್ಕು ಮಕ್ಕಳ ತಾಯಿಯಾಗಿರುವ ಸಲ್ಮಾ ಅವರ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿ ಸಾವಿನ ಬಳಿಕ ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಸುಬ್ರಮಣಿ ಹಾಗೂ ಸೆಂಥಿಲ್ ಜತೆ ಒಡನಾಟ ಹೊಂದಿದ್ದರು. ಈ ಮಧ್ಯೆ ಸಲ್ಮಾ, ಬೇರೊಬ್ಬ ವ್ಯಕ್ತಿಯೊಂದಿಗೆ ಹೆಚ್ಚು ಸಲುಗೆ ಬೆಳೆಸಿಕೊಂಡಿದ್ದರು. ಈ ವಿಚಾರ ತಿಳಿದು ಕೋಪಗೊಂಡಿದ್ದ ಆರೋಪಿಗಳು ಅವರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಸುಬ್ರಮಣಿ, ಸಲ್ಮಾಗೆ ಕರೆ ಮಾಡಿ ತನ್ನ ಮನೆಗೆ ಕರೆಸಿಕೊಂಡಿದ್ದ. ಅಲ್ಲಿಗೆ ಸೆಂಥಿಲ್ ಸಹ ಬಂದಿದ್ದು, ಮೂವರೂ ಒಟ್ಟಿಗೆ ಕುಳಿತು ಮದ್ಯ ಸೇವಿಸಿದ್ದಾರೆ. ಈ ನಡುವೆ ಆರೋಪಿಗಳು ಸಲ್ಮಾ ಜತೆ ಜಗಳವಾಡಿ, ಬಲವಾದ ಆಯುಧದಿಂದ ಆಕೆಯ ತಲೆಗೆ ಹೊಡೆದಿದ್ದಾರೆ. ಅವರು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.

ಕೊಲೆ ಬಳಿಕ ಮೃತದೇಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿಕೊಂಡು, ಆಟೊದಲ್ಲಿ ತಂದು, ತಿಲಕ್‌ ನಗರದ ಠಾಣೆಯಿಂದ ಸುಮಾರು 300 ಮೀಟರ್‌ ದೂರದಲ್ಲಿರುವ ಕರಿಮಾರಮ್ಮ ದೇವಾಲಯ ಬಳಿ ನಿಲ್ಲಿಸಿದ್ದ ಆಟೊದಲ್ಲಿ ಬಿಟ್ಟು ಹೋಗಿದ್ದರು. ಮೃತದೇಹ ಕಂಡು ಸ್ಥಳೀಯರು ಸಲ್ಮಾ ಅವರ ತಾಯಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು.

ವಿಚಾರಣೆ ವೇಳೆ ಸಲ್ಮಾ ತಾಯಿ ಪರ್ವೀನ್ ತಾಜ್ ಅವರು ಸುಬ್ರಮಣಿ ಮತ್ತು ಸೆಂಥಿಲ್‍ನ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಇದರ ಜಾಡು ಹಿಡಿದು ಶವ ಸಿಕ್ಕಿದ್ದ ಸ್ಥಳದ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ, ಕೊಲೆ ಆರೋಪಿಗಳನ್ನು ಗುರುತಿಸಿ ಬಂಧಿಸಲಾಯಿತು. 

ಬಂಧಿತರು ಪೇಂಟಿಂಗ್, ಗಾರೆ, ಗ್ಯಾರೇಜ್ ಕೆಲಸ ಮಾಡುತ್ತಿದ್ದರು. ಅಲ್ಲದೆ, ಆಟೊ ಓಡಿಸುತ್ತಿದ್ದರು. ಕೊಲೆಯಾದ ಮಹಿಳೆ ಆರೋಪಿಗಳ ಜತೆ ಸಲುಗೆಯಿಂದ ಇದ್ದರು. ಆಕೆಯ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.