ADVERTISEMENT

ರೈಲ್ವೆ ಗೇಟ್ ಬಂದ್: ಸಂಚಾರ ದಟ್ಟಣೆಯಿಂದ ಹೈರಾಣಾದ ವಾಹನ ಸವಾರರು

ಕಿಲೋ ಮೀಟರ್ ಸುತ್ತು ಹಾಕಿಕೊಂಡು ಹೋಗುವ ಸ್ಥಿತಿ

ಕೆ.ಎಸ್.ಸುನಿಲ್
Published 4 ಮಾರ್ಚ್ 2026, 0:30 IST
Last Updated 4 ಮಾರ್ಚ್ 2026, 0:30 IST
<div class="paragraphs"><p>ಮೈಸೂರು ರಸ್ತೆಯ ಕೆಂಗೇರಿ ಬಳಿ ವಾಹನಗಳು ಸಾಲುಗಟ್ಟಿ ನಿಂತಿರುವುದು</p></div>

ಮೈಸೂರು ರಸ್ತೆಯ ಕೆಂಗೇರಿ ಬಳಿ ವಾಹನಗಳು ಸಾಲುಗಟ್ಟಿ ನಿಂತಿರುವುದು

   

ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್

ಬೆಂಗಳೂರು: ಮೈಸೂರು ರಸ್ತೆಯ ರಾಮೋಹಳ್ಳಿ ಗೇಟ್ ಬಳಿ ಕೆಳ ಸೇತುವೆ ನಿರ್ಮಾಣ ಕಾಮಗಾರಿಗಾಗಿ ರೈಲ್ವೆ ಗೇಟ್‌ ಬಂದ್‌ ಮಾಡಿರುವುದರಿಂದ ಕೆಂಗೇರಿ ಸುತ್ತಮುತ್ತಲ ಪ್ರದೇಶದಲ್ಲಿ ನಿತ್ಯ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. 

ADVERTISEMENT

ದೊಡ್ಡ ಆಲದಮರ, ರಾಮೋಹಳ್ಳಿ, ಬೈಚೋಹಳ್ಳಿ, ತಾವರೆಕೆರೆ ರಸ್ತೆ ಹಾಗೂ ಮಂಚನಬೆಲೆ ಅಣೆಕಟ್ಟೆಗೆ ತೆರಳಬೇಕಾದವರು 6ರಿಂದ 7 ಕಿ.ಮೀ ಸುತ್ತು ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ರಾಮೋಹಳ್ಳಿ ದೊಡ್ಡ ಆಲದಮರ, ಚಂದ್ರಪ್ಪ ವೃತ್ತದ ಕಡೆಯಿಂದ ಬೆಂಗಳೂರು–ಮೈಸೂರು ಮುಖ್ಯ ರಸ್ತೆ ಸೇರಲು ಗೇರುಪಾಳ್ಯ ಗೇಟ್ ಮೂಲಕ ಸಾಗಬೇಕಿತ್ತು. ಕಳೆದ ಡಿಸೆಂಬರ್‌ನಿಂದ ರೈಲ್ವೆ ಕೆಳಸೇತುವೆ ಕಾಮಗಾರಿಗಾಗಿ ಈ ಮಾರ್ಗ ಬಂದ್ ಮಾಡಿದ ಪರಿಣಾಮ ಕೆಂಗೇರಿ ಉಪನಗರ ಹೊರ ವರ್ತುಲ ರಸ್ತೆಯಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ.

ರಸ್ತೆಯಲ್ಲೇ ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಲ್ಲೇ ನಿಂತಿರುತ್ತವೆ. ಆ ಅವಧಿಯಲ್ಲಿ ಪ್ರಯಾಣ ದುಸ್ತರವಾಗಿದೆ. ಸಂಚಾರ ದಟ್ಟಣೆ ಕಾರಣ ಕೆಲ ದ್ವಿಚಕ್ರ ವಾಹನ ಸವಾರರು ಪಾದಚಾರಿ ಮಾರ್ಗಗಳ ಮೇಲೆಯೂ ವಾಹನ ಓಡಿಸುತ್ತಾರೆ. 

ಮೈಸೂರು ರಸ್ತೆಯಿಂದ ಬರುವ ವಾಹನಗಳು ಚಲಘಟ್ಟ ಮೂಲಕ ಭೀಮನಕುಪ್ಪೆ ಮಾರ್ಗವಾಗಿ ವಿನಾಯಕನಗರ, ರಾಮೋಹಳ್ಳಿ, ಕೇತೋ‌ಹಳ್ಳಿ, ದೊಡ್ಡ ಆಲದಮರ, ಚುಂಚನಕುಪ್ಪೆ, ಚಂದ್ರಪ್ಪ ಸರ್ಕಲ್‌ಗೆ ಸುತ್ತು ಹಾಕಿಕೊಂಡು ಹೋಗಬೇಕಾಗಿದೆ. ಹೊಯ್ಸಳ ವೃತ್ತ, ಶಂಕರ್‌ ನಾಗ್ ವೃತ್ತ ಹಾಗೂ ಒಂದನೇ ಮುಖ್ಯರಸ್ತೆ ಸೇತುವೆ ಬಳಿ ಸಂಚರಿಸುವುದೇ ಕಷ್ಟ.

ಅದರಲ್ಲೂ ವಾರಾಂತ್ಯ, ರಜಾ ದಿನಗಳು ಹಾಗೂ ದಟ್ಟಣೆ ಅವಧಿಯಾದ ಬೆಳಿಗ್ಗೆ 7ರಿಂದ 11, ಸಂಜೆ 4ರಿಂದ 8ರವರೆಗೆ ಈ ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಐದಾರು ಕಿಲೋಮೀಟರ್‌ ಸುತ್ತು ಹಾಕಿಕೊಂಡು ಹೋಗಬೇಕಾಗಿರುವ ಕಾರಣ ಉದ್ಯೋಗಿಗಳು ನಿಗದಿತ ಸಮಯಕ್ಕೆ ಕಚೇರಿ ತಲುಪಲು ಹಾಗೂ ವಿದ್ಯಾರ್ಥಿಗಳು ಶಾಲಾ– ಕಾಲೇಜಿಗೆ ತೆರಳಲು ಕಷ್ಟವಾಗಿದೆ. ನಿತ್ಯ ಸಾವಿರಾರು ಬಸ್‌, ಕಾರು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ದಟ್ಟಣೆ ಜೊತೆಗೆ ದೂಳು ವಾಹನ ಸವಾರರನ್ನು ಹೈರಾಣಾಗಿಸುತ್ತಿದೆ.

ರಾಮೋಹಳ್ಳಿ ರೈಲ್ವೆ ಕೆಳಸೇತುವೆ ಮೂಲಕ ಕುಂಬಳಗೋಡು ಕೈಗಾರಿಕಾ ಪ್ರದೇಶಕ್ಕೆ ಒಂದು ಕಿಲೋ ಮೀಟರ್‌ ದೂರದವರೆಗೆ ರಸ್ತೆ ಬಂದ್ ಆಗಿರುವ ಕಾರಣ ಸುತ್ತು ಹಾಕಿಕೊಂಡು ಹೋಗುವಂತಾಗಿದೆ. ವಿಪರೀತ ದಟ್ಟಣೆಯಿಂದ ವಾಹನ ಸವಾರರು ಪರದಾಡುತ್ತಿದ್ದು, ಸಮಸ್ಯೆ ತೀವ್ರಗೊಂಡಿದೆ.

ಗೊಲ್ಲಹಳ್ಳಿ ಬಳಿ ಹಲವು ಕ್ರಷರ್‌ಗಳಿವೆ. ಕಲ್ಲು, ಜಲ್ಲಿ, ಮರಳು, ಟಿಪ್ಪರ್ ಲಾರಿಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿವೆ. ಎಸ್‌.ಗೊಲ್ಲಹಳ್ಳಿ, ಕುರುಬರಪಾಳ್ಯ ಹಾಗೂ ಇತರ ಕಡೆಯಿಂದ ಬರುವ ಟಿಪ್ಪರ್ ಲಾರಿಗಳು ಈ ಹಿಂದೆ ಗೇರುಪಾಳ್ಯ ರೈಲ್ವೆ ಗೇಟ್‌ ಮೂಲಕ ಮೈಸೂರು ರಸ್ತೆ ಸೇರುತ್ತಿದ್ದವು.

ರೈಲ್ವೆ ಗೇಟ್ ಮುಚ್ಚಿರುವುದರಿಂದ ಭೀಮನಕುಪ್ಪೆ ಕ್ರಾಸ್, ಹೊಸ ಬೈರೊಹಳ್ಳಿ ಮೂಲಕ ಕೆಂಗೇರಿ ಉಪನಗರ ಮಾರ್ಗವಾಗಿ ಮೈಸೂರು ರಸ್ತೆ ತಲುಪುತ್ತಿವೆ. ಪ್ರತಿದಿನ ನೂರಾರು ಲಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಸಾಗುವುದೇ ಕಷ್ಟವಾಗಿದೆ. ದೂಳಿನ ಸಮಸ್ಯೆಯೂ ಹೆಚ್ಚಿದೆ.

ಇದರ ನಡುವೆ ಗೇರುಪಾಳ್ಯ ಗ್ರಾಮಕ್ಕೆ ಸರಿಯಾದ ಬಸ್ ಸೇವೆ ಇಲ್ಲ. ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗಿ ಬಸ್ ಹತ್ತಬೇಕು. ಇಲ್ಲವೇ ಖಾಸಗಿ ವಾಹನದಲ್ಲಿ ಪ್ರಯಾಣಿಸಬೇಕಿದೆ.

ರಾಮೋಹಳ್ಳಿ ಗೇಟ್ ಬಳಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ

‘ನಿಗದಿತ ಸ್ಥಳ ತಲುಪಲು ಆಗುತ್ತಿಲ್ಲ’

‘ಕೆಳ ಸೇತುವೆ ನಿರ್ಮಾಣ ಕಾಮಗಾರಿಗಾಗಿ ರೈಲ್ವೆ ಗೇಟ್‌ ಬಂದ್‌ ಮಾಡಿರುವುದರಿಂದ ಸಾಕಷ್ಟು ತೊಂದರೆ ಆಗಿದೆ. ದೊಡ್ಡ ಆಲದ ಮರ ರಾಮೋಹಳ್ಳಿ ಕಡೆಗೆ ಹೋಗಲು 5–6 ಕಿಲೋ ಮೀಟರ್ ಸುತ್ತು ಹಾಕಿಕೊಂಡು ಹೋಗಬೇಕು. ವಾಹನಗಳು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪಲು ಆಗುತ್ತಿಲ್ಲ. ಟ್ರಾಫಿಕ್‌ನಲ್ಲಿ ನಿಂತು ಸುಸ್ತು ಆಗಿರುತ್ತೇವೆ. ಕಾಮಗಾರಿ ಮುಗಿಯಲು ಒಂದು ವರ್ಷ ಬೇಕಾಗಿದೆ. ಅಲ್ಲಿಯವರೆಗೂ ಸಮಸ್ಯೆ ತಪ್ಪಿದಲ್ಲ’ ಎಂದು ಸ್ಥಳೀಯ ನಿವಾಸಿ ರಾಜಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು. ‌