
ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ
ರಾಮನಗರ: ತಾಲ್ಲೂಕಿನ ಬಿಡದಿ ಮತ್ತು ರಾಮನಗರದ ಮಧ್ಯೆ ಗೂಡ್ಸ್ ರೈಲೊಂದು ಸಂಜೆ ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಮದ್ದೂರಿಗೆ ಹೋಗುತ್ತಿದ್ದ ಖಾಲಿ ಇದ್ದ ಈ ರೈಲು ಹಳಿ ತಪ್ಪಿದ್ದರಿಂದಾಗಿ, ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ರೈಲುಗಳಲ್ಲಿ ವ್ಯತ್ಯಯವಾಗಿದೆ.
ಸಂಜೆ 5 ಗಂಟೆ ಸುಮಾರಿಗೆ ಬಿಡದಿಯಿಂದ ಮದ್ದೂರಿಗೆ ಹೊರಟ ಖಾಲಿ ಇದ್ದ ಎನ್‌ಎಂಜಿ ರೇಕ್ ಗೂಡ್ಸ್ ರೈಲಿನ ಒಂದು ಬೋಗಿಯ ಚಕ್ರವು 5 ಗಂಟೆ 11 ನಿಮಿಷಕ್ಕೆ ಹಳಿ ತಪ್ಪಿದೆ. ಕೂಡಲೇ ಲೋಕೋಪೈಲಟ್ ರೈಲನ್ನು ನಿಲ್ಲಿಸುವ ಮೂಲಕ ಯಾವುದೇ ಅನಾಹುತ ಸಂಭವಿಸದಂತೆ ಸಮಯಪ್ರಜ್ಞೆ ಮೆರೆದಿದ್ದಾರೆ.
ರೈಲು ಹಳಿ ತಪ್ಪಿದ್ದರಿಂದ ಇತ್ತ ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ರೈಲುಗಳು ಸಮೀಪದ ಕೆಂಗೇರಿ, ನಾಯಂಡಹಳ್ಳಿ, ಬೆಂಗಳೂರು ನಿಲ್ದಾಣಗಳಲ್ಲೇ ಬೀಡು ಬಿಟ್ಟವು. ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ರೈಲುಗಳು ಚನ್ನಪಟ್ಟಣ, ಮಂಡ್ಯದಲ್ಲೇ ನಿಂತಿವೆ. ಪ್ರಯಾಣಿಕರು ರೈಲಿನಲ್ಲೇ ಕಾಯುವಂತಾಗಿದೆ.
‘ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸಿಬ್ಬಂದಿಯನ್ನು ಕಳಿಸಿ, ಹಳಿ ತಪ್ಪಿರುವ ಬೋಗಿಯನ್ನು ಸಹಜ ಸ್ಥಿತಿಗೆ ತಂದು ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಕೆಲಸ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಸಂಚಾರದಲ್ಲಿ ವಿಳಂಬವಾಗಿರುವ ಕುರಿತು ಸಮೀಪದ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದರು.
‘ಎನ್‌ಎಂಜಿ ರೇಕ್ ಗೂಡ್ಸ್ ರೈಲುಗಳು ನೋಡಲು ಪ್ರಯಾಣಿಕ ರೈಲುಗಳ ಮಾದರಿಯಲ್ಲೇ ಇರುತ್ತವೆ. ಇವುಗಳನ್ನು ದ್ವಿಚಕ್ರ ವಾಹನ, ಕಾರು ಸೇರಿದಂತೆ ಇತರ ಸರಕು ಸಾಗಣೆ ಉದ್ದೇಶಕ್ಕೆ ಬಳಸಲಾಗುತ್ತದೆ. ಹಳಿ ತಪ್ಪಿರುವ ರೈಲು ಖಾಲಿ ಇತ್ತು’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.