ADVERTISEMENT

ಬೆಂಗಳೂರಿನ ಹೊಸ ನಗರ ಪಾಲಿಕೆಗಳ ಆಯುಕ್ತರಿಗೆ ತುಷಾರ್‌ ಗಿರಿನಾಥ್‌, ರಾವ್ ಪಾಠ

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತರಿಂದ ನಗರ ಪರಿಚಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 16:13 IST
Last Updated 4 ಸೆಪ್ಟೆಂಬರ್ 2025, 16:13 IST
ತುಷಾರ್‌ ಗಿರಿನಾಥ್‌ ಅವರು ನಗರ ಪಾಲಿಕೆ ಆಯುಕ್ತರು, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು
ತುಷಾರ್‌ ಗಿರಿನಾಥ್‌ ಅವರು ನಗರ ಪಾಲಿಕೆ ಆಯುಕ್ತರು, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ಆಯುಕ್ತರು, ಹೆಚ್ಚುವರಿ ಆಯುಕ್ತರಿಗೆ ಪಾಲಿಕೆಯಲ್ಲಿ ಕಾರ್ಯ ನಿರ್ವಹಣೆ ಬಗ್ಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅರಿವು ಮೂಡಿಸಿದರು.

ನಗರ ಪಾಲಿಕೆಗಳ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಕಂದಾಯ, ಜಾಹೀರಾತು, ಆಸ್ತಿಗಳು, ಆರೋಗ್ಯ, ಪಶುಪಾಲನಾ ವಿಭಾಗ, ಕಲ್ಯಾಣ ಕಾರ್ಯಕ್ರಮಗಳು, ಶಿಕ್ಷಣ, ಅನುದಾನ ಹಂಚಿಕೆ, ಕಾಮಗಾರಿಗಳು, ಕೆರೆಗಳು, ಉದ್ಯಾನಗಳು, ಅರಣ್ಯ, ನಗರ ಯೋಜನೆ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು.

‘ನಾಗರಿಕರಿಗೆ ಉತ್ತಮ ಆಡಳಿತ ಹಾಗೂ ಪರಿಣಾಮಕಾರಿಯಾಗಿ ಯೋಜನೆಗಳನ್ನು ಜಾರಿಗೊಳಿಸುವ ಸಲುವಾಗಿ ಜಿಬಿಎ ಜಾರಿಗೆ ತಂದು ಐದು ನಗರ ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಹೊಸದಾಗಿ ನೇಮಕಗೊಂಡ ಎಲ್ಲಾ ಅಧಿಕಾರಿಗಳಿಗೂ ಎಲ್ಲಾ ರೀತಿಯ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಲಾಗುವುದು. ರಸ್ತೆ ಗುಂಡಿ, ಬೀದಿ ದೀಪ ಹಾಗೂ ಕಸದ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡಬೇಕು’ ಎಂದು ತುಷಾರ್‌ ಗಿರಿನಾಥ್‌ ಸೂಚಿಸಿದರು.

ADVERTISEMENT

‘ಸ್ಥಳೀಯ ಸಮಸ್ಯೆಗಳನ್ನು ಅರ್ಥೈಸಿಕೊಂಡು ಕಾಲಮಿತಿಯೊಳಗಾಗಿ ಬಗೆಹರಿಸುವ ಕೆಲಸ ಮಾಡಬೇಕು. ರಸ್ತೆ ಗುಂಡಿ ಮುಚ್ಚುವುದು, ಬೀದಿ ದೀಪಗಳ ಅಳವಡಿಕೆ, ತ್ಯಾಜ್ಯ ಸಮಸ್ಯೆ ಪರಿಣಾಮಕಾರಿಯಾಗಿ ಬಗೆಹರಿಸಿದರೆ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿವೆ. ಕಸದ ಸಮಸ್ಯೆ ನಿವಾರಣೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತವು (ಬಿಎಸ್‌ಡಬ್ಲ್ಯುಎಂಎಲ್‌) ನಗರ ಪಾಲಿಕೆಗಳ ಜೊತೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದೆ. ನಗರವನ್ನು ನಾವೆಲ್ಲರೂ ಸೇರಿ ಮೇಲ್ದರ್ಜೆಗೆ ತಂದು ಜನ ಮೆಚ್ಚುವ ಕೆಲಸ ಮಾಡಬೇಕು’ ಎಂದರು.

‘ಅಪಾಯ ಸ್ಥಿತಿಯಲ್ಲಿರುವ ಮರಗಳು, ಒಣಗಿರುವ ಮರಗಳು ಹಾಗೂ ವಿದ್ಯುತ್ ದೀಪಕ್ಕೆ ಅಡ್ಡಲಾಗಿರುವ ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸಬೇಕು. ಕೆರೆಗಳು, ಉದ್ಯಾನಗಳಿಗೆ ಹೋರ್ಮ್ ಗಾರ್ಡ್‌ಗಳನ್ನು ನಿಯೋಜಿಸಬೇಕು. ಜಿಬಿಎ ಆದ ಬಳಿಕ ಅಧಿಕಾರಿಗಳು ಮಾಡುವ ಕೆಲಸ-ಕಾರ್ಯಗಳಲ್ಲಿ ಆಗಿರುವ ಬದಲಾವಣೆಗಳನ್ನು ಜನರು ಗಮನಿಸುವಂತಾಗಬೇಕು’ ಎಂದು ಸೂಚಿಸಿದರು.

‘ನಗರದಲ್ಲಿ ಮಳೆಯ ಮುನ್ಸೂಚನೆಯಿದ್ದು, ಜಲಾವೃತವಾಗುವ ಸ್ಥಳಗಳಲ್ಲಿ ಗ್ರೇಟಿಂಗ್‌ಗಳ ಬಳಿ ತ್ಯಾಜ್ಯ ಇರದಂತೆ ಸ್ವಚ್ಛತೆ ಮಾಡಬೇಕು. ರಾಜಕಾಲುವೆಗಳಲ್ಲಿ ನಿರಂತರವಾಗಿ ಸ್ವಚ್ಛತೆ ಕಾಪಾಡಬೇಕು ಹಾಗೂ ವಿಪತ್ತು ನಿರ್ವಹಣೆಗೆ ಸರಿಯಾದ ಯೋಜನೆ ರೂಪಿಸಿಕೊಂಡು ಕೆಲಸ ಮಾಡಬೇಕು’ ಎಂದರು.

ಮಹೇಶ್ವರ್ ರಾವ್ ಮಾತನಾಡಿ, ‘ಜಿಬಿಎ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಹಾಗೂ ಇ-ಖಾತಾ ನೀಡುವ ಸಲುವಾಗಿ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತರು ಪ್ರತಿನಿತ್ಯ ನಡೆಸುವ ವರ್ಚ್ಯುವಲ್ ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರು ಪಾಲ್ಗೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಯೋಜನಾ ವಿಭಾಗ, ಬೃಹತ್ ನೀರುಗಾಲುವೆ, ವರ್ಲ್ಡ್ ಬ್ಯಾಂಕ್ ಯೋಜನೆ ಕಾಮಗಾರಿಗಳನ್ನು ಆಯಾ ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ. ಆಯಾ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದರು.

ಜಿಬಿಎ ವಿಶೇಷ ಆಯುಕ್ತ ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋಟ್, ಬಿಎಸ್‌ಡಬ್ಲ್ಯುಎಂಎಲ್‌ನ ಸಿಇಒ ಕರೀಗೌಡ, ನಗರ ಪಾಲಿಕೆಗಳ ಆಯುಕ್ತರಾದ ಡಿ.ಎಸ್‌. ರಮೇಶ್, ಕೆ.ಎನ್. ರಮೇಶ್, ಪೊಮ್ಮಲ ಸುನೀಲ್ ಕುಮಾರ್, ಕೆ.ವಿ. ರಾಜೇಂದ್ರ, ಹೆಚ್ಚುವರಿ ಆಯುಕ್ತರಾದ ಲತಾ, ದಿಗ್ವಿಜಯ್ ಬೋಡ್ಕೆ, ಲೊಕಂಡೆ ಸ್ನೇಹಲ್ ಸುಧಾಕರ್ ಉಪಸ್ಥಿತರಿದ್ದರು.

₹6700 ಕೋಟಿ ತೆರಿಗೆ ಸಂಗ್ರಹದ ಗುರಿ

‘ಜಿಬಿಎ ವ್ಯಾಪ್ತಿಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹6700 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ’ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಹೇಳಿದರು. ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರಿಗೆ ತೆರಿಗೆ ಇ–ಖಾತಾ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು ‘ಈವರೆಗೆ ₹3217 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದ್ದು ಇನ್ನೂ ₹3483 ಕೋಟಿ ವಸೂಲಿಯಾಗಬೇಕಿದೆ. ಇದಲ್ಲದೆ  2.75 ಲಕ್ಷ ಆಸ್ತಿ ಸುಸ್ತಿದಾರರಿಂದ ₹786 ಕೋಟಿ ಸಂಗ್ರಹಿಸಬೇಕಿದ್ದು ಅವರೆಲ್ಲರಿಗೂ ಎಲೆಕ್ಟ್ರಾನಿಕ್ ಡಿಮಾಂಡ್ ನೋಟೀಸ್ ನೀಡಲಾಗಿದೆ. ಆಯಾ ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಹಾಗೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ತ್ವರಿತಗತಿಯಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು. ನಗರದಲ್ಲಿ 25 ಲಕ್ಷ ಆಸ್ತಿಗಳಿದ್ದು 7.5 ಲಕ್ಷ ಅಂತಿಮ ಇ-ಖಾತಾಗಳನ್ನು ವಿತರಿಸಲಾಗಿದೆ ಎಂದರು.

ನಗರ ಪಾಲಿಕೆ ಅರಿಯಲು ವೆಬ್‌ಸೈಟ್‌ ಜಿಬಿಎ ವ್ಯಾಪ್ತಿಯಲ್ಲಿ ಪ್ರಸ್ತುತ 198 ವಾರ್ಡ್‌ಗಳಂತೆ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದೆ. ನಾಗರಿಕರು ತಮ್ಮ ಪ್ರದೇಶ ಯಾವ ನಗರ ಪಾಲಿಕೆಯ ವ್ಯಾಪ್ತಿಯಲ್ಲಿದೆ ಎಂಬುದನ್ನು ತಿಳಿಯಲು ವೆಬ್‌ಸೈಟ್‌ (https://BBMP.gov.in/KnowYourNewCorporation) ರಚಿಸಲಾಗಿದೆ. ಈ ಮೂಲಕ ವಾರ್ಡ್ ಸಂಖ್ಯೆ ಅಥವಾ ಹೆಸರು ನಮೂದಿಸಿದಲ್ಲಿ ನಗರ ಪಾಲಿಕೆಯ ಮಾಹಿತಿ ಸಿಗುತ್ತದೆ ಎಂದು ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.