ADVERTISEMENT

ಹೊಸ ವರ್ಷ ಸ್ವಾಗತಿಸಲು ಸಜ್ಜು: ಚರ್ಚ್‌ ಸ್ಟ್ರೀಟ್, ಕೋರಮಂಗದಲ್ಲಿ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 16:21 IST
Last Updated 30 ಡಿಸೆಂಬರ್ 2025, 16:21 IST
ಬಂದೋಬಸ್ತ್‌... ಕಬ್ಬನ್‌ಪಾರ್ಕ್‌ ಠಾಣೆಯ ಇನ್‌ಸ್ಪೆಕ್ಟರ್‌ ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊಸ ವರ್ಷಾಚರಣೆ ನಡೆಯುವ ಸ್ಥಳಗಳಲ್ಲಿ ಪಥಸಂಚಲನ ನಡೆಸಿದರು    
ಬಂದೋಬಸ್ತ್‌... ಕಬ್ಬನ್‌ಪಾರ್ಕ್‌ ಠಾಣೆಯ ಇನ್‌ಸ್ಪೆಕ್ಟರ್‌ ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊಸ ವರ್ಷಾಚರಣೆ ನಡೆಯುವ ಸ್ಥಳಗಳಲ್ಲಿ ಪಥಸಂಚಲನ ನಡೆಸಿದರು       

ಬೆಂಗಳೂರು: 2025ಕ್ಕೆ ವಿದಾಯ ಹೇಳಿ 2026 ಸ್ವಾಗತಿಸಲು ಬೆಂಗಳೂರು ನಗರವು ಸಜ್ಜಾಗುತ್ತಿದೆ...

ಸಂಭ್ರಮಾಚರಣೆ ನಡೆಯುವ ಪ್ರಮುಖ ರಸ್ತೆಗಳು ಬಣ್ಣಬಣ್ಣದ ವಿದ್ಯುತ್‌ ದೀಪಗಳ ಅಲಂಕಾರದಿಂದ ಸಜ್ಜಾಗಿವೆ. ಪಬ್‌, ಕ್ಲಬ್‌, ರೆಸ್ಟೊರೆಂಟ್‌ಗಳು ಬುಧವಾರ ರಾತ್ರಿ ಪಾರ್ಟಿ ಆಯೋಜಿಸಲು ಸಿದ್ಧತೆ ಮಾಡಿಕೊಂಡಿವೆ.  

ನೂತನ ವರ್ಷವನ್ನು ಸ್ವಾಗತಿಸಲು ಬುಧವಾರ ರಾತ್ರಿ ಮಹಾತ್ಮ ಗಾಂಧಿ ರಸ್ತೆ, ಚರ್ಚ್‌ ಸ್ಟ್ರೀಟ್‌, ಬ್ರಿಗೇಡ್ ರಸ್ತೆ, ಕೋರಮಂಗಲ, ಒಪೆರಾ ಜಂಕ್ಷನ್‌, ರೆಸ್ಟ್‌ಹೌಸ್ ರಸ್ತೆ, ಸೇಂಟ್‌ ಮಾರ್ಕ್‌ ರಸ್ತೆ, ರಿಚ್ಮಂಡ್‌ ರಸ್ತೆ, ರೆಸಿಡೆನ್ಸಿ ರಸ್ತೆಗೆ ದೊಡ್ಡ ಸಂಖ್ಯೆಯಲ್ಲಿ ಯುವ ಸಮೂಹ ಬರುವ ನಿರೀಕ್ಷೆಯಿದೆ. ಈ ಸ್ಥಳಗಳಲ್ಲಿ ಪೊಲೀಸ್ ಪಹರೆ ಕಾಣಿಸುತ್ತಿದೆ. ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ADVERTISEMENT

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಜನರು ಹೊಸ ವರ್ಷಾಚರಣೆ ನಡೆಯುವ ಸ್ಥಳಗಳಿಗೆ ಬರುವ ನಿರೀಕ್ಷೆಯಿದೆ. ಮಹಾತ್ಮ ಗಾಂಧಿ ರಸ್ತೆಗೆ ಮಂಗಳವಾರ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹಾಕೇ ಅವರು ಭೇಟಿ ನೀಡಿ ಬಂದೋಬಸ್ತ್ ವ್ಯವಸ್ಥೆ ಪರಿಶೀಲಿಸಿದರು.

ಪ್ರವೇಶಕ್ಕೆ ಅವಕಾಶ: ಮಹಾತ್ಮ ಗಾಂಧಿ ರಸ್ತೆಗೆ ಬರುವವರು ಅನಿಲ್‌ ಕುಂಬ್ಳೆ ವೃತ್ತದ ಮೂಲಕ, ಚರ್ಚ್‌ ಸ್ಟ್ರೀಟ್‌ಗೆ ಬರುವವರು ಕೆಸಿ ದಾಸ್‌ ಜಂಕ್ಷನ್‌ ಮೂಲಕ, ಬ್ರಿಗೇಡ್ ರಸ್ತೆಗೆ ಬರುವವರು ಕಾವೇರಿ ಜಂಕ್ಷನ್‌ ಹಾಗೂ ಟ್ರಿನಿಟಿ ಕಡೆಯಿಂದ ಬರಬಹುದು.

ಕೇಂದ್ರ ವಲಯ ವ್ಯಾಪ್ತಿಯಲ್ಲಿ 3,400 ಸಿ.ಸಿ.ಟಿ.ವಿ ಕ್ಯಾಮೆರಾಗಳಿದ್ದು, ಪ್ರತಿಯೊಬ್ಬರ ಚಲನವಲನವನ್ನು ಸೆರೆಹಿಡಿಯಲಾಗುವುದು. ಕೃತಿಕ ಬುದ್ಧಿಮತ್ತೆ(ಎಐ) ಆಧರಿಸಿ ಜನದಟ್ಟಣೆಯನ್ನು ವಿಶ್ಲೇಷಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಸಿವಿಲ್‌ ಪೊಲೀಸ್‌, ಸಶಸ್ತ್ರಮೀಸಲು ಪಡೆ, ಕೆಎಸ್‌ಆರ್‌ಪಿ, ಕ್ಷಿಪ್ರ ಕಾರ್ಯ ಪಡೆ, ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಕೇಂದ್ರ ವಲಯದಲ್ಲಿ ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಡಿಸಿಪಿ ಅಕ್ಷಯ್ ಹಾಕೇ ತಿಳಿಸಿದ್ದಾರೆ.

‘ಮಹಾತ್ಮ ಗಾಂಧಿ ರಸ್ತೆ, ಚರ್ಚ್ ಸ್ಟ್ರೀಟ್‌, ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲದ ಅಲ್ಲಲ್ಲಿ ಮಹಿಳಾ ಸಹಾಯವಾಣಿ ಕೇಂದ್ರ, ವಾಚ್‌ ಟವರ್ಸ್‌ ನಿರ್ಮಿಸಲಾಗಿದೆ. ಸ್ಥಳದಲ್ಲಿ ಆಂಬುಲೆನ್ಸ್‌, ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜನೆ ಮಾಡಲಾಗುವುದು. ತುರ್ತು ಸಂದರ್ಭದಲ್ಲಿ ಸಹಾಯವಾಣಿ ಕೇಂದ್ರದ ಸಿಬ್ಬಂದಿಯನ್ನು ಸಂಪರ್ಕಿಸಬಹುದು’ ಎಂದು ಪೊಲೀಸರು ತಿಳಿಸಿದರು.

ಪಬ್‌, ಕ್ಲಬ್‌ಗಳಿಗೆ ಸೂಚನೆ: ‘ಪಬ್‌ ಹಾಗೂ ಕ್ಲಬ್‌ಗಳಲ್ಲಿ ಹೊಸ ವರ್ಷದ ಪಾರ್ಟಿಗಳನ್ನು ಆಯೋಜಿಸುವಾಗ ಪಟಾಕಿ ಸ್ಫೋಟಿಸುವಂತಿಲ್ಲ. ಕಾನೂನುಬಾಹಿರ ಪಾರ್ಟಿಗಳಿಗೆ ಅವಕಾಶ ಇಲ್ಲ. ಪ್ರಚೋದನಕಾರಿ ಹಾಡು ಹಾಕಬಾರದು. ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ಬೇರೆ ವ್ಯವಸ್ಥೆ ಇರಬೇಕು ಎಂಬುದಾಗಿ ಸೂಚನೆ ನೀಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಜವಾಬ್ದಾರಿಯಿಂದ ಎಲ್ಲರೂ ಹೊಸ ವರ್ಷದ ಆಚರಣೆ ನಡೆಸಬೇಕು. ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು
–ಸೀಮಾಂತ್‌ಕುಮಾರ್ ಸಿಂಗ್‌ ನಗರ ಪೊಲೀಸ್‌ ಕಮಿಷನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.