ADVERTISEMENT

ಬೆಂಗಳೂರು | ಹೊಸ ವರ್ಷಾಚರಣೆಗೆ ಮಾರ್ಗಸೂಚಿ: ಮೇಲ್ಸೇತುವೆ ಬಂದ್, ಸಂಚಾರ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 23:30 IST
Last Updated 29 ಡಿಸೆಂಬರ್ 2025, 23:30 IST
<div class="paragraphs"><p>ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿ ಸೋಮವಾರ ಶ್ವಾನದಳ ಹಾಗೂ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದರು </p></div>

ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿ ಸೋಮವಾರ ಶ್ವಾನದಳ ಹಾಗೂ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದರು

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ಹೊಸ ವರ್ಷಾಚರಣೆ ಅಂಗವಾಗಿ ನಗರ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದು, ನಗರದ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.

ADVERTISEMENT

ಸಾರ್ವಜನಿಕರ ಹಿತದೃಷ್ಟಿಯಿಂದ ಡಿಸೆಂಬರ್ 31ರ ರಾತ್ರಿ 11ರಿಂದ ಜನವರಿ 1ರ ಬೆಳಿಗ್ಗೆ 6ರವರೆಗೆ ನಗರದ ಹಲವು ಮೇಲ್ಸೇತುವೆಗಳಲ್ಲಿ (ವಿಮಾನ ನಿಲ್ದಾಣ ಸಂಪರ್ಕಿಸುವ ಮೇಲ್ಸೇತುವೆ ಹೊರತುಪಡಿಸಿ) ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಅವಧಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೇಲ್ಸೇತುವೆಯಲ್ಲೂ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ನೈಸ್ ರಸ್ತೆಯಲ್ಲಿ ರಾತ್ರಿ 8ರಿಂದಲೇ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ರಾತ್ರಿ 10 ಗಂಟೆಯ ನಂತರ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣ ಬಂದ್‌ ಆಗಲಿದೆ. ಟ್ರಿನಿಟಿ ಅಥವಾ ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣಗಳಿಗೆ ತೆರಳಿ ಪ್ರಯಾಣಿಕರು ಸಂಚಾರ ಮಾಡಬಹುದು. 

ಹೊಸ ವರ್ಷಾಚರಣೆಗೆ ಕೈಗೊಂಡಿರುವ ಸುರಕ್ಷತೆ ಮತ್ತು ಭದ್ರತಾ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್, ‘ಮಹಿಳೆಯರ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಬಸ್ ಮತ್ತು ಟೆಂಪೊ ಟ್ರಾವೆಲ್‌ಗಳನ್ನು ಸೂಕ್ತ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮದ್ಯ ಕುಡಿದು ಸಾರ್ವಜನಿಕವಾಗಿ ಕಿರಿಕಿರಿ ಮಾಡುವುದು, ಗಲಾಟೆ ಅಥವಾ ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದಾದ್ಯಂತ ಮದ್ಯಪಾನ ಮಾಡಿ ವಾಹನ ಚಾಲನೆ ತಡೆಗಟ್ಟುವ ವಿಶೇಷ ಕಾರ್ಯಾಚರಣೆಗೆ ಒಟ್ಟು 166 ಸ್ಥಳಗಳನ್ನು ಗುರುತಿಸಲಾಗಿದೆ. ವ್ಹೀಲಿ, ಅತಿವೇಗದ ಚಾಲನೆ ತಡೆಗಟ್ಟುವ ಉದ್ದೇಶದಿಂದ ಒಟ್ಟು 92 ಸ್ಥಳಗಳನ್ನು ಗುರುತಿಸಿ, ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸುಗಮ ಸಂಚಾರದ ಹಿತದೃಷ್ಟಿಯಿಂದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಸೆಂಟ್‌ ಮಾರ್ಕ್ಸ್‌ ರಸ್ತೆ, ರೆಸ್ಟ್‌ಹೌಸ್ ರಸ್ತೆ, ರೆಸಿಡೆನ್ಸಿ ರಸ್ತೆ ಹಾಗೂ ನಗರದ ಕೆಲವು ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ.

ಎಲ್ಲೆಲ್ಲಿ ಸಂಚಾರ ನಿಷೇಧ?: 


ಸಂಭ್ರಮಾಚರಣೆಯ ಪ್ರಮುಖ ಸ್ಥಳವಾಗಿರುವ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಡಿಸೆಂಬರ್ 31ರ ರಾತ್ರಿ 8ರಿಂದ ತಡರಾತ್ರಿ 2 ಗಂಟೆವರೆಗೆ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ, ಬ್ರಿಗೇಡ್ ರಸ್ತೆಯಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ವರೆಗೆ, ಚರ್ಚ್ ಸ್ಟ್ರೀಟ್​​ನ ಬ್ರಿಗೇಡ್ ರಸ್ತೆ ಜಂಕ್ಷನ್​ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ, ರೆಸಿಡೆನ್ಸಿ ರಸ್ತೆಯ ಆಶೀರ್ವಾದಮ್ ಜಂಕ್ಷನ್‌ನಿಂದ ಮೆಯೊ ಹಾಲ್ ಜಂಕ್ಷನ್‌ವರೆಗೆ, ಎಂ.ಜಿ. ರಸ್ತೆ ಜಂಕ್ಷನ್‌ನಿಂದ ಎಸ್‌ಬಿಐ ವೃತ್ತದವರೆಗೆ ಸಂಚಾರ ವ್ಯವಸ್ಥೆ ನಿಷೇಧಿಸಲಾಗಿದೆ.

ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ: 

ಶಿವಾಜಿನಗರ ಬಿಎಂಟಿಸಿ ಶಾಪಿಂಗ್‌ ಕಾಂಪ್ಲೆಕ್ಸ್ 1ನೇ ಮಹಡಿ, ಯುಬಿ ಸಿಟಿ, ಗರುಡಾ ಮಾಲ್, ಕಾಮರಾಜ್ ರಸ್ತೆಯಲ್ಲಿ (ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್‌ವರೆಗೆ) ಸಾರ್ವಜನಿಕರು ವಾಹನಗಳನ್ನು ನಿಲುಗಡೆ ಮಾಡಬಹುದು

ಬಿಎಂಟಿಸಿ ಬಸ್​ಗಳು​ ಹಾಗೂ ಟಿ.ಟಿ. ವಾಹನಗಳು ಸಂಚರಿಸುವ ಮಾರ್ಗಗಳು:

ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಸುತ್ತಮುತ್ತ ನಗರದ ವಿವಿಧ ಕಡೆಗಳಲ್ಲಿ ಬಿಎಂಟಿಸಿ ಬಸ್​​ಗಳ ಸೌಲಭ್ಯ ಕಲ್ಪಿಸಲಾಗಿದೆ. ಟಿ.ಟಿ. ವಾಹನಗಳ ಮೂಲಕ ಬರುವವರು ಸಂಭ್ರಮಾಚರಣೆ ಮುಗಿದ ಬಳಿಕ ಇದೇ ಮಾರ್ಗವಾಗಿ ಹಿಂತಿರುಗಬೇಕು. 

ಆಶೀರ್ವಾದಮ್​​ನಿಂದ ಬನ್ನೇರುಘಟ್ಟ, ಅನಿಲ್ ಕುಂಬ್ಳೆ ವೃತ್ತದಿಂದ ಬನಶಂಕರಿ, ನೈಸ್ ರಸ್ತೆ ಜಂಕ್ಷನ್, ಸುಂಕದ ಕಟ್ಟೆ, ಡೆಕತ್​ಲಾನ್ ಒಪೆರಾ ಜಂಕ್ಷನ್​ನಿಂದ ನೈಸ್ ರಸ್ತೆ ಜಂಕ್ಷನ್ (ರಿಚ್ಮಂಡ್ ಸರ್ಕಲ್ ಮೂಲಕ),  ಮೆಯೋಹಾಲ್ ನಿಂದ ಮಾದಾವರ, ಟ್ರಿನಿಟಿಯಿಂದ ಬಾಗಲೂರು, ಟ್ರಿನಿಟಿಯಿಂದ ಹೊಸಕೋಟೆ ಮಾರ್ಗಕ್ಕೆ ಬಿಎಂಟಿಸಿ ಬಸ್​​ಗಳ ಸೌಲಭ್ಯ ಕಲ್ಪಿಸಲಾಗಿದೆ.

ಕೋರಮಂಗಲದ ವೈ.ಡಿ.ಮಠ ರಸ್ತೆಯ ಸುಖಸಾಗರ ಜಂಕ್ಷನ್‌ನಿಂದ ಮೈಕ್ರೋಲ್ಯಾಂಡ್‌ ಜಂಕ್ಷನ್‌, ವೈ.ಡಿ.ಮಠ ರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆಗಳಾದ ಜೆ.ಎನ್.ಸಿ ರಸ್ತೆ, 4ನೇ ಬಿ ಕ್ರಾಸ್‌ರಸ್ತೆ, ಟಾನಿಕ್ ಹಿಂಭಾಗದ ರಸ್ತೆ, 17ನೇ ಹೆಚ್ ಮುಖ್ಯರಸ್ತೆಗಳಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ವಾಹನಗಳ ಪಾರ್ಕಿಂಗ್ ಸ್ಥಳಗಳು: ಮುನಿರೆಡ್ಡಿ ಕಲ್ಯಾಣ ಮಂಟಪದ ಎದರುಗಡೆಯ ಬಿಬಿಎಂಪಿ ಮೈದಾನ, ಬೆಥನಿ ಶಾಲಾ ಪಕ್ಕದ ಬಿಬಿಎಂಪಿ ಮೈದಾನ, 60 ಅಡಿ ಮಾದರಿ ರಸ್ತೆ ಎಡಭಾಗದಲ್ಲಿ (ಮುನಿರೆಡ್ಡಿ ಕಲ್ಯಾಣ ಮಂಟಪದಿಂದ ಕೆನರಾ ಬ್ಯಾಂಕ್‌ ಜಂಕ್ಷನ್‌ವರೆಗೆ) ವಾಹನಗಳನ್ನು ನಿಲ್ಲಿಸಬಹುದು. 

  • 4 ನಿಯಂತ್ರಣ ಕೊಠಡಿ ಆರಂಭ

  • 78 ಕಾವಲು ಗೋಪುರ ಸ್ಥಾಪನೆ

  • 164 ಮಹಿಳಾ ಸಹಾಯ ಸಹಾಯವಾಣಿ

  • ಸನ್ನದ್ಧ ಸ್ಥಿತಿಯಲ್ಲಿ 55 ಆಂಬುಲೆನ್ಸ್‌ 

ಪರ್ಯಾಯ ವ್ಯವಸ್ಥೆ

  • ಡಿ.31ರ ರಾತ್ರಿ 8ರಿಂದ ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಮಾರ್ಗವಾಗಿ ಹೋಗುವ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ ಮೂಲಕ ಬಿ.ಆರ್.ವಿ ಜಂಕ್ಷನ್ ಬಳಿ ಬಲತಿರುವು ಪಡೆದು ಕಬ್ಬನ್ ರಸ್ತೆಯಲ್ಲಿ ಸಂಚರಿಸಿ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ. ರಸ್ತೆಯನ್ನು ಸೇರಿ ಮುಂದೆ ಸಾಗಬಹುದು

  • ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆಗೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ ಮೂಲಕ ಡಿಕನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗಬೇಕು

  • ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್‌ ಜಂಕ್ಷನ್‌ವರೆಗೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ

  • ಈಜಿಪುರ ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್ ಬಳಿ ಬಲತಿರುವು ಪಡೆದು ಎ.ಎಸ್.ಸಿ. ಸೆಂಟರ್‌ನಲ್ಲಿ ಎಡತಿರುವು ಪಡೆದು ಟ್ರಿನಿಟಿ ಮೂಲಕ ಮುಂದೆ ಸಾಗಬಹುದು

  • ಎಚ್​ಎಎಲ್ ಕಡೆಯಿಂದ ಬರುವ ವಾಹನಗಳು ಎಎಸ್​ಸಿ ಸೆಂಟರ್‌ನಲ್ಲಿ ಬಲತಿರುವು ಪಡೆದು ಟ್ರಿನಿಟಿ ಮೂಲಕ ಮುಂದೆ ಸಾಗುವುದು

  • ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂ.ಜಿ.ರಸ್ತೆ ಜಂಕ್ಷನ್​ನಿಂದ ಅಪೇರಾ ಜಂಕ್ಷನ್ ಕಡೆಗೆ ಕಾಲ್ನಡಿಗೆಯಲ್ಲಿ ಹೋಗಬಹುದು

  • ಎಂ.ಜಿ ರಸ್ತೆ ಬ್ರಿಗೇಡ್ ರಸ್ತೆ ರೆಸ್ಟ್ ಹೌಸ್ ರಸ್ತೆ ಚರ್ಚ್ ಸ್ಟ್ರೀಟ್ ರೆಸಿಡೆನ್ಸಿ ರಸ್ತೆ ಹಾಗೂ ಸೇಂಟ್ ಮಾರ್ಕ್ಸ್ ರಸ್ತೆಗಳಲ್ಲಿ ನಿಲುಗಡೆ ಮಾಡಿದ್ದ ವಾಹನಗಳನ್ನು ಡಿ.31ರ ಸಂಜೆ 4 ಗಂಟೆಯೊಳಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು

ಬಿಎಂಟಿಸಿ ಬಸ್​ ಹಾಗೂ ಟಿ.ಟಿ. ವಾಹನ ಸಂಚಾರ ಮಾರ್ಗ
  • ಮಡಿವಾಳ ಚೆಕ್‌ಪೋಸ್ಟ್​ನಿಂದ ಬನಶಂಕರಿ ಬಸ್‌ನಿಲ್ದಾಣ (ಬಿಟಿಎಂ ಮೂಲಕ)

  • ಮಡಿವಾಳ ಚೆಕ್‌ಪೋಸ್ಟ್​ನಿಂದ ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆಯ ಮೂಲಕ)

  • ಮಡಿವಾಳ ಚೆಕ್‌ಪೋಸ್ಟ್​​ನಿಂದ ಕೆ.ಆರ್. ಪುರ (ಹಳೇ ವಿಮಾನ ನಿಲ್ದಾಣ ರಸ್ತೆ ಮೂಲಕ ಸುರಂಜನ್ ದಾಸ್ ರಸ್ತೆ) * ಮಡಿವಾಳ ಚೆಕ್‌ಪೋಸ್ಟ್​ನಿಂದ ಮೀನಾಕ್ಷಿ ಟೆಂಪಲ್ ಬನ್ನೇರುಘಟ್ಟ (ಡೈರಿ ಸರ್ಕಲ್ ಮೂಲಕ)

  • ನೆಕ್ಸಸ್ ಮಾಲ್‌ನಿಂದ ದೇವನಹಳ್ಳಿ (ಮೇಕ್ರಿ ಸರ್ಕಲ್ ಮೂಲಕ)

  • ನೆಕ್ಸಸ್ ಮಾಲ್‌ನಿಂದ (ಹೊಸೂರು ರಸ್ತೆ ಜಂಕ್ಷನ್) ಕೆ.ಆರ್. ಮಾರ್ಕೆಟ್ (ಜೆ.ಸಿ. ರಸ್ತೆ ಮೂಲಕ)

  • ನೆಕ್ಸಸ್ ಮಾಲ್‌ನಿಂದ (ಹೊಸೂರು ರಸ್ತೆ ಜಂಕ್ಷನ್) ಮೆಜೆಸ್ಟಿಕ್ (ವಿಲ್ಸನ್ ಗಾರ್ಡನ್ ಮೂಲಕ)

  • ಎನ್.ಜಿ.ವಿ. ಬ್ಯಾಕ್ ಗೇಟ್​​ನಿಂದ ಹೆಬ್ಬಾಳ (ಇಂದಿರಾನಗರ ಮೂಲಕ)

  • ಎನ್.ಜಿ.ವಿ.ಯಿಂದ ವೈಟ್‌ಫೀಲ್ಡ್ ( ಹೊರವರ್ತುಲ ರಸ್ತೆಯ ಮೂಲಕ) ಕಡೆಗೆ ಬಿಎಂಟಿಸಿ ಬಸ್​ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.