ADVERTISEMENT

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಬಾರ್, ಪಬ್‌​ಗಳಿಗೆ ರಾತ್ರಿ 1ರವರೆಗೆ ಅವಕಾಶ

ಮಾರ್ಗಸೂಚಿ ಪಾಲಿಸಲು ಮಾಲೀಕರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 16:10 IST
Last Updated 26 ಡಿಸೆಂಬರ್ 2025, 16:10 IST
   

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಾರ್, ಪಬ್‌, ಹೋಟೆಲ್‌ ಹಾಗೂ ಕಾರ್ಯಕ್ರಮ ಸಂಘಟಿಸುವ ಇತರೆ ಸ್ಥಳಗಳ ಮಾಲೀಕರ ಸಭೆ ಶುಕ್ರವಾರ ನಡೆಯಿತು.

ಬಾರ್​​ ಮತ್ತು ಪಬ್​​ಗಳಿಗೆ ಬುಧವಾರ ರಾತ್ರಿ 1ರವರೆಗೆ ಅವಕಾಶ ಕಲ್ಪಿಸಲಾಗುವುದು. ಎಲ್ಲ ಮಾಲೀಕರು ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಸಭೆಯಲ್ಲಿ ಸೂಚಿಸಲಾಯಿತು.

ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್‌ ಮಾತನಾಡಿ, ಉಪವಿಭಾಗ, ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ಹೋಟೆಲ್, ಪಬ್ ಮತ್ತು ಬಾರ್ ಮಾಲೀಕರ ಸಭೆ ನಡೆಸಲಾಗಿದೆ. ಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ. ಪಬ್‌, ಕ್ಲಬ್‌ ಹಾಗೂ ರೆಸ್ಟೋರೆಂಟ್‌ಗಳ ವ್ಯವಸ್ಥಾಪಕರು, ಸಿಬ್ಬಂದಿ ಮದ್ಯಪಾನ‌ ಮಾಡಿರಬಾರದೆಂದು ಮಾಲೀಕರಿಗೆ ಸೂಚಿಸಲಾಗಿದೆ ಎಂದರು.

ADVERTISEMENT

ಪಟಾಕಿ ಸ್ಫೋಟಿಸುವಂತಿಲ್ಲ. ಕಾನೂನುಬಾಹಿರ ಪಾರ್ಟಿಗಳಿಗೆ ಅವಕಾಶ ಇಲ್ಲ. ಪ್ರಚೋದನಕಾರಿ ಹಾಡು ಹಾಕಬಾರದು. ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಬೇರೆ ವ್ಯವಸ್ಥೆ ಇರಬೇಕು. ಕಾರ್ಯಕ್ರಮದ ಆಯೋಜನೆಯ ಬಗ್ಗೆ ಪೊಲೀಸರಿಗೆ ತಿಳಿಸಬೇಕು. ಜವಾಬ್ದಾರಿಯಿಂದ ಹೊಸ ವರ್ಷಾಚರಣೆ ಮಾಡಬೇಕು. ಬಾರ್ ಹಾಗೂ ಪಬ್ ಮಾಲೀಕರು ಹೆಚ್ಚುವರಿ ಸಮಯ ಕೇಳಿದ್ದರು. ರಾತ್ರಿ 1ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಮಾದಕ ವಸ್ತುಗಳ ಸೇವನೆ, ಮಾರಾಟ ಅಥವಾ ಸಂಗ್ರಹದ ಕುರಿತು ಮಾಹಿತಿ ಲಭ್ಯವಾದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಉಲ್ಲಂಘನೆ ಕಂಡುಬಂದಲ್ಲಿ ಆಯೋಜಕರು ಹಾಗೂ ಕಟ್ಟಡದ ಮಾಲೀಕರು/ನಿರ್ವಾಹಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. 

‘ಗುಂಪು ಸೇರಿ ರೇವ್ ಪಾರ್ಟಿ ನಡೆಸಲು ಅವಕಾಶ ನೀಡಬಾರದು. ಯಾವುದೇ ಗಲಾಟೆ ಸಂಭವಿಸಿದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ನಗರ ಪೊಲೀಸರು ವಿತರಿಸುವ ಕ್ಯೂಆರ್ ಕೋಡ್ ಅನ್ನು ನಾಗರಿಕರಿಗೆ ಕಾಣುವಂತಹ ಸ್ಥಳಗಳಲ್ಲಿ ಅಳವಡಿಸುವುದು’ ಎಂದು ಹೇಳಿದರು. 

ಮಾಲೀಕರಿಗೆ ಸೂಚನೆ...

* ಸ್ಥಳದ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಪ್ರವೇಶ ಟಿಕೆಟ್‌ ಹಾಗೂ ಪಾಸ್‌ ವಿತರಿಸಬೇಕು

* ಬಾಲಕ/ ಬಾಲಕಿಯರಿಗೆ ಮದ್ಯ ಪೂರೈಸುವಂತಿಲ್ಲ

* ತಪಾಸಣೆ ಬಿಗಿಗೊಳಿಸಬೇಕು

* ಸಂಶಯಾಸ್ಪದ ವಸ್ತುಗಳು ಹಾಗೂ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು

* ಕಾರ್ಯಕ್ರಮದ ಸ್ಥಳದಲ್ಲಿ ಅಗ್ನಿ ನಿರೋಧಕ ಉಪಕರಣ ಅಳವಡಿಸಬೇಕು. ಅಗ್ನಿ ಅವಘಡಗಳು ಹಾಗೂ ಕಾಲ್ತುಳಿತ ಸಂಭವಿಸಿದಂತೆ ಎಚ್ಚರಿಕೆ ವಹಿಸಬೇಕು

* ವಿದ್ಯುತ್‌ ಸಂಪರ್ಕ ಕಡಿತವಾದ ವೇಳೆ ಪರ್ಯಾಯ ವಿದ್ಯುತ್ ಸಂಪರ್ಕ ವ್ಯವಸ್ಥೆ ಹೊಂದಿರಬೇಕು

* ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು

* ಪ್ರವೇಶ ದ್ವಾರ, ನಿರ್ಗಮನ ದ್ವಾರ, ವಾಹನ ನಿಲುಗಡೆ ಸ್ಥಳ ಹಾಗೂ ಕಾರ್ಯಕ್ರಮದ ಸ್ಥಳಗಳಲ್ಲಿ ನೂಕುನುಗ್ಗಲು ಉಂಟಾಗದಂತೆ ಎಚ್ಚರ ವಹಿಸಬೇಕು

* ಕಾರ್ಯಕ್ರಮದ ಒಳಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಆಳವಡಿಸಿ, ದೃಶ್ಯಾವಳಿಗಳನ್ನು ಕನಿಷ್ಠ 30 ದಿನಗಳ ವರೆಗೆ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.