ADVERTISEMENT

ಹೊಸ ವರ್ಷ ಸಂಭ್ರಮಾಚರಣೆ‌ ಭದ್ರತೆಗೆ 20 ಸಾವಿರ ಪೊಲೀಸರ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 18:36 IST
Last Updated 28 ಡಿಸೆಂಬರ್ 2025, 18:36 IST
ನಗರದ ಬ್ರಿಗೇಡ್ ರಸ್ತೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ನಡೆದಿದೆ.  ಪ್ರಜಾವಾಣಿ ಚಿತ್ರ ಪುಷ್ಕರ್ ವಿ
ನಗರದ ಬ್ರಿಗೇಡ್ ರಸ್ತೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ನಡೆದಿದೆ.  ಪ್ರಜಾವಾಣಿ ಚಿತ್ರ ಪುಷ್ಕರ್ ವಿ   

ಬೆಂಗಳೂರು: ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಭದ್ರತೆಗೆ 20 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದ ಸಚಿವರು, ಭದ್ರತೆಯ ರೂಪುರೇಷೆಗಳ ಕುರಿತು ಪರಾಮರ್ಶೆ ನಡೆಸಿದರು.

ನಗರದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಬಂದೋ ಬಸ್ತ್ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ADVERTISEMENT

ಈ ಬಾರಿ 10 ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಎಂದು ಪೊಲೀಸ್ ಇಲಾಖೆ ಅಂದಾಜಿಸಿದೆ. ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ 14 ಸಾವಿರ ಪೊಲೀಸರು, 2,500 ಮಂದಿ ಸಂಚಾರ ಪೊಲೀಸರು, 88 ಕೆಎಸ್‍ಆರ್‌ಪಿ ತುಕಡಿ, 21 ಸಿಎಆರ್ ತುಕಡಿ, 266 ಹೊಯ್ಸಳ ವಾಹನ, 250 ಕೋಬ್ರಾ ವಾಹನಗಳನ್ನು ಬಳಸಿಕೊಳ್ಳ ಲಾಗುತ್ತಿದೆ. ಅಲ್ಲದೆ, 400 ಮಂದಿ ಟ್ರಾಫಿಕ್ ವಾರ್ಡನ್‍ಗಳು, ಪೌರ ರಕ್ಷಣೆ ಮತ್ತು ಗೃಹರಕ್ಷಕ ದಳ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಜನದಟ್ಟಣೆ ನಿಯಂತ್ರಿಸಲು ಜಲ ಫಿರಂಗಿ ವಾಹನಗಳನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಭ್ರಮಾಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ 250 ಕಡೆ ತಾತ್ಕಾಲಿಕವಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ. ಸುರಕ್ಷಿತ ತಾಣಗಳ ನಿರ್ಮಾಣದ ಜತೆಗೆ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ.ಜನದಟ್ಟಣೆ ಸ್ಥಳಗಳಲ್ಲಿ ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತದೆ. ಮುಖಚರ್ಯೆ ಗುರುತಿಸುವ ಕೃತಕ ಬುದ್ಧಿಮತ್ತೆಯ (ಎ.ಐ) ಕ್ಯಾಮೆರಾ ಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ ರವಾನಿಸಲಿವೆ ಎಂದು ವಿವರಿಸಿದರು. 

ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಬಾರ್ ಮತ್ತು ರೆಸ್ಟೋರೆಂಟ್‍ಗಳು, ಮೆಟ್ರೊ ಕಾರಿಡಾರ್, ಮನರಂಜನಾ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಗತ್ಯ ಸ್ಥಳಗಳಲ್ಲಿ ವೀಕ್ಷಣಾ ಗೋಪುರ (ವಾಚ್ ಟವರ್) ನಿರ್ಮಿಸಲಾಗಿದೆ. 180 ಕಡೆ ಫೋಕಸ್‌ ಲೈಟ್‍ಗಳನ್ನು ಅಳವಡಿಸಲಾಗಿದೆ. ಅಹಿತಕರ ಘಟನೆ ನಡೆದರೂ ಸಾರ್ವಜನಿಕರು ಕೂಡಲೇ ಮಾಹಿತಿ ನೀಡಲು ಪೊಲೀಸ್ ಆ್ಯಕ್ಸಿಸ್ ಕಂಟ್ರೋಲ್, ವಾಹನ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಟ್ಯಾಕ್ಸಿ ಸೇವೆ ಸಿಗದಿದ್ದರೆ ಜನರ ಅನುಕೂಲಕ್ಕೆ ಎಂಟು ಕಡೆ ಸಾರಿಗೆ ವ್ಯವಸ್ಥೆ ಮಾಡಿದ್ದು, ಜನರು ಸುರಕ್ಷಿತವಾಗಿ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಆಂಬುಲೆನ್ಸ್, ವಾಹನಗಳು, ಸಂಚಾರ ಸಮಸ್ಯೆ ಸೇರಿದಂತೆ ಜನರಿಗೆ ಅಗತ್ಯ ಮಾಹಿತಿ ನೀಡಲು ಮೊದಲ ಬಾರಿಗೆ ಕ್ಯೂ ಆರ್ ಕೋಡ್‍ನ ‘ಹೀಟ್ ಮ್ಯಾಪ್' ಪರಿಚಯಿಸಲಾಗಿದೆ. ಅತಿ ಹೆಚ್ಚು ಜನ ಸೇರಿರುವ ಸ್ಥಳಗಳನ್ನು ಕೆಂಪು ಬಣ್ಣದಿಂದ ಗುರುತಿಸಲಾಗುತ್ತದೆ. ಹಳದಿ ಬಣ್ಣದಿಂದ ಗುರುತಿಸುವ ಸ್ಥಳಗಳು ಹೆಚ್ಚು ಜನ ಸೇರುತ್ತಿರುವುದನ್ನು ಸೂಚಿಸುತ್ತವೆ. ಹಸಿರು ಬಣ್ಣ ಇರುವುದು ಕಡಿಮೆ ಜನಸಂದಣಿ ಸೂಚಿಸುತ್ತದೆ. ಈ ವ್ಯವಸ್ಥೆಯನ್ನು ಕಮಾಂಡ್ ಸೆಂಟರ್‌ನಿಂದ ನಿರ್ವಹಿಸಲಾಗುತ್ತದೆ. ಇದನ್ನು ಆಧರಿಸಿ ಪೊಲೀಸರು ಜನಸಂದಣಿಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಎಲ್ಲ ವಿಭಾಗಗಳ ಡಿಸಿಪಿಗಳು ಹಾಜರಿದ್ದರು.

ಭದ್ರತಾ ವ್ಯವಸ್ಥೆ ಸಂಚಾರ ದಟ್ಟನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕ್ಯೂ ಆರ್ ಕೋಡ್‌ ಸ್ಟಿಕರ್‌ಗಳನ್ನು ಹಲವೆಡೆ ಅಂಟಿಸಲಾಗಿದೆ
ಹೊಸ ವರ್ಷವನ್ನು ಸಾರ್ವಜನಿಕರು ಜವಾಬ್ದಾಯಿಂದ ಆಚರಿಸಬೇಕು. ಭಯೋತ್ಪಾದನಾ ಕೃತ್ಯಗಳ ದೃಷ್ಟಿಯಿಂದಲೂ ಭದ್ರತೆಗೆ ಆದ್ಯತೆ ನೀಡಲಾಗಿದೆ
ಜಿ.ಪರಮೇಶ್ವರ ಗೃಹ ಸಚಿವ

ಜನದಟ್ಟಣೆ ಸ್ಥಳಗಳು

ಹೊಸ ವರ್ಷಾಚರಣೆ ವೇಳೆ ಸಾಮಾನ್ಯವಾಗಿ ಹೆಚ್ಚು ಜನ ಸೇರುತ್ತಾರೆ. ಕಳೆದ ವರ್ಷ 8 ಲಕ್ಷಕ್ಕೂ ಹೆಚ್ಚು ಮಂದಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಹಿಂದಿನ ವರ್ಷಗಳ ಅನುಭವದ ಆಧಾರದಲ್ಲಿ ಎಂ.ಜಿ.ರಸ್ತೆ ಬ್ರಿಗೇಡ್ ರಸ್ತೆ ಇಂದಿರಾನಗರ ಕೋರಮಂಗಲ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯನ್ನು ಹೆಚ್ಚು ಜನ ಸೇರುವ ಸ್ಥಳಗಳೆಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.