ADVERTISEMENT

ಬೆಂಗಳೂರು | ಅವಳಿ ಸುರಂಗ ಮಾರ್ಗ: 126 ಪುಟಗಳ ಟಿಪ್ಪಣಿ ಸಿದ್ಧ

ಸಚಿವ ಸಂಪುಟದ ಅನುಮೋದನೆ ಪಡೆಯಲು ತಯಾರಾದ ನಗರಾಭಿವೃದ್ಧಿ ಇಲಾಖೆ

ಬಾಲಕೃಷ್ಣ ‍ಪಿ.ಎಚ್‌.
Published 16 ಮೇ 2025, 0:30 IST
Last Updated 16 ಮೇ 2025, 0:30 IST
ಪೂರ್ವ– ಪಶ್ಚಿಮ ಅವಳಿ ಸುರಂಗ ಮಾರ್ಗದ ನಕ್ಷೆ
ಪೂರ್ವ– ಪಶ್ಚಿಮ ಅವಳಿ ಸುರಂಗ ಮಾರ್ಗದ ನಕ್ಷೆ   

ಬೆಂಗಳೂರು: ಹೆಬ್ಬಾಳ (ಎಸ್ಟೀಮ್‌ ಮಾಲ್‌) ಜಂಕ್ಷನ್‌ನಿಂದ ಎಚ್ಎಸ್‌ಆರ್‌ ಲೇಔಟ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗಿನ ಉತ್ತರ–ದಕ್ಷಿಣ ಕಾರಿಡಾರ್‌ ಅವಳಿ ಸುರಂಗ ಮಾರ್ಗ ಯೋಜನೆ ಅನುಷ್ಠಾನಕ್ಕಾಗಿ ಸಚಿವ ಸಂಪುಟದ ಅನುಮೋದನೆ ಪಡೆಯಲು ನಗರಾಭಿವೃದ್ಧಿ ಇಲಾಖೆಯು 126 ಪುಟಗಳ ಟಿಪ್ಪಣಿ ಸಿದ್ಧಪಡಿಸಿದೆ.

ಈ ಕಾರಿಡಾರ್‌ ಒಟ್ಟು 16.745 ಕಿ.ಮೀ. ಉದ್ದದ 3 ಪಥ ಜೊತೆಗೆ, 3 ಪಥ/2 ಪಥ ಪ್ರವೇಶ ಮತ್ತು ನಿರ್ಗಮನ ರ‍್ಯಾಂಪ್‌ ಸಹಿತ ಭೂಗತ ಅವಳಿ ಸುರಂಗ ಮಾರ್ಗ ಹೊಂದಿದೆ. ಅದರ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ, ನಿರ್ವಹಣೆಗೆ ಸರ್ಕಾರದ ಅನುಮೋದನೆ ಕೋರಲಾಗಿದೆ.

ಕಾರಿಡಾರ್‌ಗೆ ಅಂದಾಜು ₹ 17,780.13 ಕೋಟಿ ವೆಚ್ಚವಾಗಲಿದ್ದು, ಆಡಳಿತಾತ್ಮಕ ಅನುಮೋದನೆ ನೀಡಬೇಕು. ಬಿಬಿಎಂಪಿ ಸಲ್ಲಿಸಿರುವ ವಿಸ್ಕೃತ ಯೋಜನಾ ವರದಿಯನ್ನು ತಜ್ಞರ ಸಮಿತಿಯು ಮೇ 5ರಂದು ಸಲ್ಲಿರುವ ವರದಿಯಲ್ಲಿರುವ ಅಂಶಗಳು, ಬದಲಾವಣೆಗಳ, ಶಿಫಾರಸುಗಳು, ಸಲಹೆಗಳಿಗೆ ಅನುಸಾರ ವಿಸ್ತೃತ ಯೋಜನಾ ವರದಿ ಮತ್ತು ಪ್ಯಾಕೇಜ್ 1 ಮತ್ತು 2ಅನ್ನು ಪರಿಷ್ಕರಿಸಿ ಟೆಂಡರ್‌ ಕರೆಯಲು ಒಪ್ಪಿಗೆ ನೀಡಬೇಕು ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ.

ADVERTISEMENT

ಯೋಜನೆಯನ್ನು ಪ್ಯಾಕೇಜ್‌ 1 (ಉತ್ತರ) ಮತ್ತು ಪ್ಯಾಕೇಜ್‌ 2 (ದಕ್ಷಿಣ) ಎಂದು ಎರಡು ಪ್ಯಾಕೇಜ್‌ಗಳ ಅಡಿಯಲ್ಲಿ ಪ್ರತ್ಯೇಕವಾಗಿ ಸುಧಾರಿತ ಬಿಒಟಿ (ನಿರ್ಮಾಣ, ನಿರ್ವಹಣೆ, ವರ್ಗಾವಣೆ) ಮಾದರಿಯಲ್ಲಿ ನಿರ್ಮಿಸಲು ಅನುಮೋದನೆ ನೀಡಬೇಕು. ಇಲ್ಲದೇ ಇದ್ದರೆ ಪ್ರತ್ಯೇಕವಾಗಿ ಹೈಬ್ರಿಡ್‌ ಮಿಶ್ರಣ ಮಾದರಿಯಲ್ಲಿ (ಹೈಬ್ರಿಡ್‌ ಆ್ಯನುವಿಟಿ ಮಾಡೆಲ್‌) ಅನುಷ್ಠಾನಗೊಳಿಸಲು ಅನುಮತಿ ನೀಡಬೇಕು.

ಸುರಂಗ ಮಾರ್ಗವನ್ನು ಹೆಬ್ಬಾಳ ಎಸ್ಟೀಮ್‌ ಮಾಲ್‌ ಜಂಕ್ಷನ್‌ನಿಂದ ಶೇಷಾದ್ರಿ ರಸ್ತೆ ಫ್ರೀಡಂ ಪಾರ್ಕ್‌ವರೆಗೆ (8.748 ಕಿ.ಮೀ) ಅಂದಾಜು ₹ 8,814.78 ಕೋಟಿ ಮೊತ್ತದಲ್ಲಿ, ಪ್ಯಾಕೇಜ್‌ 2ರಲ್ಲಿ ಶೇಷಾದ್ರಿ ರಸ್ತೆಯಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ (8.748 ಕಿ.ಮೀ.ಯಿಂದ 16.745 ಕಿ.ಮೀಟರ್‌ವರೆಗೆ) ಅಂದಾಜು ₹ 8,965.35 ಕೋಟಿ ಮೊತ್ತದಲ್ಲಿ ಸುರಂಗ ಮಾರ್ಗ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಬೇಕು. ಭೂಸ್ವಾಧೀನ ವೆಚ್ಚ ₹ 800 ಕೋಟಿಗೆ ಪ್ರತ್ಯೇಕವಾಗಿ ಆಡಳಿತಾತ್ಮ ಅನುಮೋದನೆ ನೀಡಬೇಕು. ಸ್ಥಳಾಂತರ ಕಾಮಗಾರಿಗೆ ₹ 150 ಕೋಟಿಗೆ ಅನುಮೋದನೆ ನೀಡಬೇಕು ಎಂದು ಕೋರಲಾಗಿದೆ.

ಈ ಎರಡೂ ಪ್ಯಾಕೇಜ್‌ಗಳಲ್ಲಿ ತಜ್ಞರ ಸಮಿತಿ ನೀಡಿರುವ ವರದಿಯ ಅನ್ವಯ ಅಂದಾಜು ಪಟ್ಟಿಯನ್ನು ಪರಿಷ್ಕರಿಸಿ, ಪರಿಷ್ಕೃತಗೊಳ್ಳುವ ಅಂದಾಜು ಪಟ್ಟಿಯ ಅನುಸಾರ ಟೆಂಡರ್‌ ಕರೆಯಲಾಗುವುದು. ಒಟ್ಟು ಯೋಜನಾ ಮೊತ್ತದ ಶೇ 40ರಷ್ಟನ್ನು ಕಾರ್ಯಸಾಧನೆಯ ಅಂತರ ನಿಧಿ (ವಿಜಿಎಫ್‌) ಆಧಾರದಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಬಿಬಿಎಂಪಿಯು ವಿಜಿಎಫ್‌ ಪಾಲುದಾರಿಕೆ ಮೊತ್ತ ಶೇ 40ರಷ್ಟನ್ನು (ಜಿಎಸ್‌ಟಿ ಹೊರತುಪಡಿಸಿ) ಆಯ್ಕೆಯಾಗುವ ಬಿಡ್ಡುದಾರ ಸಂಸ್ಥೆಗೆ ಪಾವತಿಸಲು ಅನುಮತಿಸಬೇಕು ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ.

ಪ್ರತಿ ಕಿ.ಮೀ.ಗೆ ₹ 19 ಟೋಲ್‌

ಅವಳಿ ಸುರಂಗ ಮಾರ್ಗ 2029–30ಕ್ಕೆ ಆರಂಭವಾಗುವ ಸಾಧ್ಯತೆ ಇದೆ. ಆಗ ಸುರಂಗ ಮಾರ್ಗದ ಬಳಕೆಗೆ ಪ್ರತಿ ಕಿ.ಮೀ.ಗೆ ಕನಿಷ್ಠ ದರ ₹ 19 ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಮೆ: ರೋಡಿಕ್‌ ಸಂಸ್ಥೆ ನೀಡಿರುವ ವಾಹನ ದಟ್ಟಣೆ ಮತ್ತು ಸಂಭವನೀಯ ಏರಿಕೆ ಆಧಾರದ ಮೇಲೆ ಈ ದರವನ್ನು ತಿಳಿಸಿದೆ. ಮುಂಬೈ ನಗರದ ಟ್ರಾನ್ಸ್‌ ಹಾರ್ಬರ್‌ ಮೇಲ್‌ ರಸ್ತೆ 22 ಕಿ.ಮೀ. ಇದ್ದು ₹ 250 ಟೋಲ್‌ ವಿಧಿಸಲಾಗುತ್ತಿದೆ. ಅದಕ್ಕೆ ಹೋಲಿಸಿದರೆ ಉದ್ದೇಶಿತ ಅವಳಿ ಸುರಂಗ ಮಾರ್ಗಕ್ಕೆ ಪ್ರತಿ ಕಿಲೋಮೀಟರ್‌ಗೆ ₹ 19  ಸಮಂಜಸ ಎಂದು ಅಭಿಪ್ರಾಯಪಟ್ಟಿದೆ.

ಅಂಕಿಅಂಶ:

*₹19 ಸಾವಿರ ಕೋಟಿ ಸಾಲಕ್ಕೆ ಗ್ಯಾರಂಟಿ ನೀಡಲು ಈಗಾಗಲೇ ಒಪ್ಪಿಗೆ ನೀಡಿರುವ ರಾಜ್ಯ ಸರ್ಕಾರ

*26 ತಿಂಗಳು ಸುರಂಗಗಳನ್ನು ಕೊರೆಯಲು ಬೇಕಾದ ಅವಧಿ

*12 ತಿಂಗಳು ಬಳಿಕ ಅವಳಿ ಸುರಂಗ ಮಾರ್ಗ ನಿರ್ಮಾಣಕ್ಕೆ ಬೇಕಾದ ಸಮಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.