ADVERTISEMENT

ಐದು ದಿನ ಪಟಾಕಿ ಮಾರಾಟಕ್ಕೆ ಅವಕಾಶ: ಸೀಮಾಂತ್‌ಕುಮಾರ್ ಸಿಂಗ್‌

ಮುಂಗಡವಾಗಿ ಪಟಾಕಿ ಸಂಗ್ರಹ ಮಾಡಿಕೊಳ್ಳಲು ಅವಕಾಶ ಇಲ್ಲ: ಸೀಮಾಂತ್‌ಕುಮಾರ್ ಸಿಂಗ್‌

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 14:29 IST
Last Updated 7 ಅಕ್ಟೋಬರ್ 2025, 14:29 IST
ಸೀಮಾಂತ್‌ ಕುಮಾರ್ ಸಿಂಗ್‌ 
ಸೀಮಾಂತ್‌ ಕುಮಾರ್ ಸಿಂಗ್‌    

ಬೆಂಗಳೂರು: ‘ದೀಪಾವಳಿ ಹಬ್ಬ ಸಮೀಪಿಸಿದ್ದು, ಪಟಾಕಿ ಮಾರಾಟಗಾರರು ಎಚ್ಚರಿಕೆ ವಹಿಸಬೇಕು. ಮಾರಾಟಗಾರರು ಮುಂಗಡವಾಗಿ ಪಟಾಕಿ ಸಂಗ್ರಹ ಮಾಡಿಕೊಳ್ಳಲು ಅವಕಾಶ ಇಲ್ಲ’ ಎಂದು ನಗರ ಪೊಲೀಸ್‌ ಕಮಿಷನರ್‌ ಸೀಮಾಂತ್‌ಕುಮಾರ್ ಸಿಂಗ್‌ ಹೇಳಿದರು.

ನಗರದಲ್ಲಿ ನಡೆದ ತಾತ್ಕಾಲಿಕ ಪಟಾಕಿ ಅಂಗಡಿಗಳ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

‘ಬೇಡಿಕೆ ಹೆಚ್ಚಿದೆ ಎನ್ನುವ ಕಾರಣಕ್ಕೆ ಪಟಾಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡಿದ್ದರೆ, ಅಂತಹ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ADVERTISEMENT

ನಗರದ ಯಾವುದೇ ಭಾಗದಲ್ಲಿ ಪಟಾಕಿ ದುರಂತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಎರಡು ವರ್ಷಗಳ ಹಿಂದೆ ಅತ್ತಿಬೆಲೆಯಲ್ಲಿ ಅವಘಡ ಸಂಭವಿಸಿತ್ತು. ಅಂತಹ ದುರಂತಗಳು ಆಗದಂತೆ ಕಟ್ಟೆಚರ ವಹಿಸಬೇಕು ಎಂದು ಹೇಳಿದರು.

‘ಹೆಚ್ಚಿನ ಪ್ರಮಾಣದಲ್ಲಿ ಪಟಾಕಿಯನ್ನು ದಾಸ್ತಾನು ಮಾಡಿಕೊಂಡರೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಅನಾಹುತಗಳಿಗೆ ಆಸ್ಪದ ಕೊಡಬಾರದು’ ಎಂದು ಹೇಳಿದರು.

‘ದೀಪಾವಳಿ ಹಬ್ಬಕ್ಕೆ ಐದು ದಿನ ಮುಂಚಿತವಾಗಿ ಪಟಾಕಿ ತಂದುಕೊಳ್ಳಬೇಕು. ಐದು ದಿನಗಳ ಒಳಗಾಗಿ ದಾಸ್ತಾನು ಖಾಲಿ ಮಾಡಬೇಕು. ಅ.18ರಿಂದ 22ರ ತನಕ ಪಟಾಕಿ ಮಾರಾಟ ಮಾಡುವುದಕ್ಕೆ ಅವಕಾಶ ನೀಡಲಾಗುವುದು’ ಎಂದು ಹೇಳಿದರು.

‘ಗೋದಾಮಿನಲ್ಲಿ ಅನಧಿಕೃತವಾಗಿ ಪಟಾಕಿ ಸಂಗ್ರಹಣೆ ಮಾಡಿಕೊಂಡರೆ ಗಸ್ತು ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ನೀಡುವ ಮುನ್ನ ಸುರಕ್ಷತಾ ಕ್ರಮಗಳನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ’ ಎಂದು ಕಮಿಷನರ್‌ ಮಾಹಿತಿ ನೀಡಿದರು.

ಪಟಾಕಿ ಅಂಗಡಿಗಳನ್ನು ನಿರ್ಮಿಸಲು ಬಯಸುವ ಅರ್ಜಿದಾರರಿಗೆ ಪರವಾನಗಿ ನೀಡಲು ಲಾಟರಿ ವ್ಯವಸ್ಥೆ ಅನುಸರಿಸಲಾಗುತ್ತಿದೆ. ಲಾಟರಿಯಲ್ಲಿ ಗೆದ್ದವರಿಗೆ ಅಂಗಡಿ ತೆರೆಯಲು ಅನುಮತಿ ಸಿಗುತ್ತದೆ. 78 ಮೈದಾನಗಳಲ್ಲಿ 411 ಅಂಗಡಿಗಳಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.