
ಬೆಂಗಳೂರು: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಗಸೂಚಿ ಪಾಲಿಸದ 14 ವಸತಿಗೃಹಗಳಿಗೆ (ಪಿಜಿ) ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಬೀಗ ಹಾಕಲಾಗಿದೆ.
ಉದ್ದಿಮೆ ಪರವಾನಗಿ ಪಡೆಯದೇ ಎಸ್.ಒ.ಪಿ ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಜಿಗಳ ವಿರುದ್ಧ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸುವಂತೆ ಆಯುಕ್ತ ಡಿ.ಎಸ್.ರಮೇಶ್ ಸೂಚಿಸಿದ್ದಾರೆ. ಅದರಂತೆ, ಆರೋಗ್ಯ ವಿಭಾಗದ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿದರು.
ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಣಿಜ್ಯ/ವಸತಿಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಜಿಬಿಜಿಎ ಕಾಯ್ದೆ ಪ್ರಕಾರ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಪಾಲಿಸದ 14 ಪಿ.ಜಿಗಳ ವಿರುದ್ಧ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡರು.
ಬೀಗ ಹಾಕಲಾದ ಪಿ.ಜಿಗಳು: ಮಹದೇವಪುರ ವಿಧಾನಸಭಾ ಕ್ಷೇತ್ರ: ಎಸ್.ವಿ.ಕೆ. ಪಿಜಿ, ಪಟ್ಟಂದೂರು ಅಗ್ರಹಾರ; ವಂಶಿ ಕೃಷ್ಣ ಪಿ.ಜಿ, ಪಟ್ಟಂದೂರು ಅಗ್ರಹಾರ; ಡ್ವೆಲ್ ಕೋ-ಲಿವಿಂಗ್ ಪಿ.ಜಿ, ಲಕ್ಷ್ಮಿನಾರಾಯಣಪುರ; ರಾಯಲ್ ಹೋಮ್ ಸ್ಟೇಸ್ ಪಿ.ಜಿ, ಮೈತ್ರಿ ಲೇಔಟ್; ಡ್ರೀಮ್ ಲ್ಯಾಂಡ್ ಪಿ.ಜಿ, ಪ್ರಶಾಂತ್ ಲೇಔಟ್; ಝೋಲೋ ಅಸ್ಮಿ ಜೆಂಟ್ಸ್ ಪಿ.ಜಿ, ರಾಘವೇಂದ್ರ ಲೇಔಟ್; ಕೆ.ಆರ್. ಜೆಂಟ್ಸ್ ಪಿ.ಜಿ, ರಾಮಾಂಜನೇಯ ಲೇಔಟ್.
ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ: ಶ್ರೀ ಎಸ್.ಜಿ. ಜೆಂಟ್ಸ್ ಅಂಡ್ ಲೇಡೀಸ್ ಪಿ.ಜಿ, ಮುನಿಯಪ್ಪ ಲೇಔಟ್; ಸೇಂಟ್ ಮರಿಯಾ ಲೇಡೀಸ್ ಪಿ.ಜಿ, ನಾಗಪ್ಪ ರೆಡ್ಡಿ ಲೇಔಟ್; ಎಸ್.ಎಲ್.ವಿ ಕಂಫರ್ಟ್ಸ್ ಜೆಂಟ್ಸ್ ಪಿ.ಜಿ, ಶರಾವತಿ ಲೇಔಟ್; ಗಣೇಶ ಜೆಂಟ್ಸ್ ಪಿ.ಜಿ, ಬಸವನಪುರ; ಎಸ್.ಎಸ್.ವಿ ಟವರ್ ಪಿ.ಜಿ, ಲಕ್ಷ್ಮೀ ಸಾಗರ ಲೇಔಟ್; ಬ್ಲಿಸ್ ಕೋ-ಲಿವಿಂಗ್ ಪಿ.ಜಿ; ಬಿ, ನಾರಾಯಣಪುರ; ವಿ.ಡಿ.ಎಸ್ ಲಕ್ಸುರಿ ಪಿ.ಜಿ ಫಾರ್ ಲೇಡೀಸ್, ಸತ್ಯ ಬಡಾವಣೆ.
ಅಭಿಯಾನ: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನ.10ರಿಂದ 15ರವರೆಗೆ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನವನ್ನು 17 ವಾರ್ಡ್ ಕಚೇರಿಗಳಲ್ಲಿ ನಡೆಸಲಾಗಿತ್ತು. ಈ ಅವಧಿಯಲ್ಲಿ 466 ಉದ್ದಿಮೆದಾರರು ‘ಏಕ ಗವಾಕ್ಷಿ’ ಅಡಿಯಲ್ಲಿ ಒಟ್ಟು ₹25,52,800 ಶುಲ್ಕ ಪಾವತಿಸಿ, ಎಲ್ಲ ಅಗತ್ಯ ದಾಖಲೆಗಳನ್ನು ಮಧ್ಯವರ್ತಿಗಳ ಯಾವುದೇ ಹಸ್ತಕ್ಷೇಪವಿಲ್ಲದೇ ಅರ್ಜಿ ಸಲ್ಲಿಸಿದ ದಿನದಂದೇ ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡರು ಎಂದು ಆಯುಕ್ತರು ತಿಳಿಸಿದರು.