ADVERTISEMENT

ಬೆಂಗಳೂರು: ಏಕಬಳಕೆ ಪ್ಲಾಸ್ಟಿಕ್‌ ದಂಡದಿಂದ 35 ಟ್ರ್ಯಾಕ್ಟರ್‌ಗಳ ಸೌಲಭ್ಯ

ಚಾಮರಾಜಪೇಟೆಯಲ್ಲಿ 5 ಟನ್‌ ಏಕಬಳಕೆ ಪ್ಲಾಸ್ಟಿಕ್‌ ವಶ; ₹10 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:06 IST
Last Updated 27 ಸೆಪ್ಟೆಂಬರ್ 2025, 0:06 IST
ಚಾಮರಾಜಪೇಟೆಯಲ್ಲಿ ಕರೀಗೌಡರ ನೇತೃತ್ವದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ಅನ್ನು ವಶಕ್ಕೆ ಪಡೆದ ಬಿಎಸ್‌ಡಬ್ಲ್ಯುಎಂಎಲ್‌ ಸಿಬ್ಬಂದಿ
ಚಾಮರಾಜಪೇಟೆಯಲ್ಲಿ ಕರೀಗೌಡರ ನೇತೃತ್ವದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ಅನ್ನು ವಶಕ್ಕೆ ಪಡೆದ ಬಿಎಸ್‌ಡಬ್ಲ್ಯುಎಂಎಲ್‌ ಸಿಬ್ಬಂದಿ   

ಬೆಂಗಳೂರು: ನಗರದಲ್ಲಿ ಸೆ.3ರಂದು ಏಕಬಳಕೆ ಪ್ಲಾಸ್ಟಿಕ್‌ ವಶಪಡಿಸಿಕೊಂಡು, ವಿಧಿಸಲಾಗಿರುವ ದಂಡದಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ತ್ಯಾಜ್ಯ ವಿಲೇವಾರಿಗೆ 35 ಟ್ರ್ಯಾಕ್ಟರ್‌ಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ಸಿಇಒ ಕರೀಗೌಡ ತಿಳಿಸಿದರು.

ಏಕಬಳಕೆ ಪ್ಲಾಸ್ಟಿಕ್‌ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಬರುವ ದಂಡವನ್ನು ವಿಧಾನಸಭೆ ಕ್ಷೇತ್ರಗಳಿಗೆ ಬಾಡಿಗೆ ಮೂಲಕ ಟ್ರ್ಯಾಕ್ಟರ್‌ಗಳನ್ನು ಒದಗಿಸಲಾಗುತ್ತಿದೆ. ಇದಕ್ಕಾಗಿ ಟೆಂಡರ್‌ ಕರೆಯಲಾಗುತ್ತಿದ್ದು, ಅಕ್ಟೋಬರ್ 3ರಿಂದ ಟ್ರ್ಯಾಕ್ಟರ್‌ಗಳು ಬಳಕೆಗೆ ಲಭ್ಯವಾಗಲಿವೆ ಎಂದು ಹೇಳಿದರು.

ವಿಧಾನಸಭೆ ಕ್ಷೇತ್ರಗಳಲ್ಲಿ ಕಟ್ಟಡ ತ್ಯಾಜ್ಯ, ಬ್ಲ್ಯಾಕ್ ಸ್ಪಾಟ್‌ಗಳಲ್ಲಿನ ಕಸ ವಿಲೇವಾರಿ, ಮರಗಳ ಕೊಂಬೆಗಳನ್ನು ಸಾಗಿಸುವುದು ಸೇರಿದಂತೆ ಸ್ವಚ್ಛತೆಗೆ ಟ್ರ್ಯಾಕ್ಟರ್‌ಗಳ ಕೊರತೆ ಇದೆ. ಹೀಗಾಗಿ, ಪ್ಲಾಸ್ಟಿಕ್‌ ಬಳಕೆಗೆ ವಿಧಿಸಲಾಗುತ್ತಿರುವ ದಂಡವನ್ನು ಟ್ರ್ಯಾಕ್ಟರ್‌ಗಳ ಬಾಡಿಗೆಗೆ ಉಪಯೋಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

25 ವಿಧಾನಸಭೆ ಕ್ಷೇತ್ರಗಳಿಗೆ ತಲಾ ಒಂದು ಟ್ರ್ಯಾಕ್ಟರ್‌ ಅನ್ನು ನೀಡಲಾಗುತ್ತದೆ. ಹೆಚ್ಚಿನ ವ್ಯಾಪ್ತಿ ಹೊಂದಿರುವ ಮಹದೇವಪುರಕ್ಕೆ ಆರು ಹಾಗೂ ಕೆ.ಆರ್‌.ಪುರ ವಿಧಾನಸಭೆ ಕ್ಷೇತ್ರಕ್ಕೆ ನಾಲ್ಕು ಟ್ರ್ಯಾಕ್ಟರ್‌ಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸಲಾಗುತ್ತಿದೆ  ಎಂದು ಅವರು ತಿಳಿಸಿದರು.

ನಗರವನ್ನು ಏಕಬಳಕೆ ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಸಿಇಒ ಕರೀಗೌಡ ತಿಳಿಸಿದರು.

ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಫರ್ಲ್ ಪಲಿಫಿಲಂ ಮ್ಯಾನುಫ್ಯಾಕ್ಚರರ್ ದಾಸ್ತಾನು ಘಟಕದ ಮೇಲೆ ಶುಕ್ರವಾರ ದಾಳಿ ನಡೆಸಿ, 5 ಟನ್ ಏಕಬಳಕೆ ಪ್ಲಾಸ್ಟಿಕ್‌ ವಶಪಡಿಸಿಕೊಂಡು ₹10 ಲಕ್ಷ ದಂಡ ವಿಧಿಸಲಾಗಿದೆ. ಮತ್ತೆ ಏಕಬಳಕೆ ಪ್ಲಾಸ್ಟಿಕ್ ಬಳಸದಂತೆ ಘಟಕದ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಕರೀಗೌಡ  ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.