
ಬೆಂಗಳೂರು: ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು (ಮ್ಯೂಲ್ ಖಾತೆ) ತೆರೆದು ವಂಚಿಸುತ್ತಿದ್ದ ವಿವಿಧ ರಾಜ್ಯಗಳ 12 ಮಂದಿಯನ್ನು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಹುಳಿಮಾವು ಠಾಣೆ ಪೊಲೀಸರು ಬಂಧಿಸಿ, ಬ್ಯಾಂಕ್‌ನಲ್ಲಿದ್ದ ₹240 ಕೋಟಿ ವಹಿವಾಟು ಸ್ಥಗಿತಗೊಳಿಸಿದ್ದಾರೆ.
ಬೃಹತ್ ಸೈಬರ್ ವಂಚನೆಯ ಜಾಲವನ್ನು ಪತ್ತೆಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿ ಆಗಿದ್ದಾರೆ.
ಬೆಂಗಳೂರಿನ ಜೆ.ಪಿ.ನಗರದ 9ನೇ ಹಂತದ ಅಂಜನಾಪುರದ ನಿವಾಸಿ ಮೊಹಮ್ಮದ್ ಹುಜೈಫಾ ಮತ್ತು ಅವರ ತಾಯಿ ಸಭಾ, ಉತ್ತರಪ್ರದೇಶದ ಅಂಕಿತ್‌ಕುಮಾರ್ ಸಿಂಗ್ (32), ಬಿಹಾರದ ಅಜಿತ್‌ಕುಮಾರ್ ಯಾದವ್ (29), ರಾಜಸ್ಥಾನದ ಅಭಿಷೇಕ್ ಸಿಂಗ್ ರಾಥೋಡ್ (22), ವಿಶ್ವರಾಜ್‌ಸಿಂಗ್(28), ಕುಶಾಲ್‌ಸಿಂಗ್ ಚೌಹಾಣ್ (26), ರಾಜಸ್ಥಾನದ ಪ್ರದೀಪ್‌ಕುಮಾರ್ ಸಿಂಗ್ (30), ಪಿತಾಂಬರ್ ಸಿಂಗ್ (30), ಅಜಯ್‌ಕುಮಾರ್ (30) ಹಾಗೂ ಜಾರ್ಖಂಡ್‌ನ ಸತ್ಯಂಕುಮಾರ್ ಪಾಂಡೆ (27), ಉತ್ತರಪ್ರದೇಶದ ಆಕಾಶ್ ಜೈಸ್ವಾಲ್ (29) ಬಂಧಿತರು.
ಆರೋಪಿಗಳು, ಬೆಂಗಳೂರಿನ ವ್ಯಕ್ತಿಗೆ ₹3.20 ಕೋಟಿ ವಂಚಿಸಿದ್ದರು. ಪ್ರಕರಣದ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದವು. ಖಚಿತ ಸುಳಿವು ಹಾಗೂ ತಾಂತ್ರಿಕ ನೆರವು ಆಧರಿಸಿ ತನಿಖೆ ನಡೆಸಿದಾಗ, ಕಾನೂನು ಬಾಹಿರವಾಗಿ ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ವಂಚಿಸುತ್ತಿರುವುದು ಹಾಗೂ ಹೂಡಿಕೆ ಹೆಸರಿನಲ್ಲಿ ದೇಶದ ನಾನಾ ಭಾಗದ ಜನರಿಗೆ ಕರೆ ಮಾಡಿ ವಂಚನೆ ನಡೆಸುತ್ತಿರುವುದು ಪತ್ತೆ ಆಯಿತು ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
‘ಬ್ಯಾಂಕ್‌ನಲ್ಲಿದ್ದ ₹240 ಕೋಟಿ ವಹಿವಾಟನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಆರೋಪಿಗಳು ವಂಚಿಸಿದ್ದ ₹94 ಲಕ್ಷ ವಾಪಸ್ ಪಡೆಯಲಾಗಿದೆ. ಇನ್ನೂ ಹೆಚ್ಚಿನ ವಂಚನೆ ನಡೆದಿರುವ ಸಾಧ್ಯತೆಯಿದ್ದು, ಬೆಂಗಳೂರಿಗೆ ಸಂಬಂಧಿಸಿದಂತೆ ₹24 ಕೋಟಿ ವಂಚನೆ ಕುರಿತು ತನಿಖೆ ಮುಂದುವರಿಸಲಾಗಿದೆ. 9 ಸಾವಿರ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.
‘ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿ ಕಾಲ್‌ಸೆಂಟರ್ ನಡೆಸುತ್ತಿದ್ದ ಆರೋಪಿಗಳು, ಜನರಿಗೆ ಕರೆ ಮಾಡಿ ಹೂಡಿಕೆ ಯೋಜನೆಗಳ ಬಗ್ಗೆ ತಿಳಿಸಿ ಆಕರ್ಷಿಸುತ್ತಿದ್ದರು. ನಂತರ, ತಮ್ಮದೇ ಅನಧಿಕೃತ ಆ್ಯಪ್ ಇನ್‌ಸ್ಟಾಲ್ ಮಾಡಿಸಿ, ಅದರ ಮೂಲಕ ಹೂಡಿಕೆ ಮಾಡಿಸುತ್ತಿದ್ದರು. ಹಣ ಹೂಡಿಕೆ ಮಾಡಿದವರಿಗೆ ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಲಾಭಾಂಶ ನೀಡುವ ಮೂಲಕ ನಂಬಿಕೆ ಗಳಿಸುತ್ತಿದ್ದರು’ ಎಂದು ಮೂಲಗಳು ಹೇಳಿವೆ.
‘ಹೆಚ್ಚು ಹಣ ಹೂಡಿಕೆ ಮಾಡಿದ ಬಳಿಕ ವಾಪಸ್ ಪಡೆಯುವ ಅವಕಾಶ ನೀಡುತ್ತಿರಲಿಲ್ಲ. ಇದೇ ರೀತಿ ನೂರಾರು ಜನರಿಗೆ ವಂಚಿಸಿದ್ದ ಆರೋಪಿಗಳ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು’ ಎಂದು ಪೊಲೀಸರು ಹೇಳಿದರು.
58 ಮೊಬೈಲ್ ಫೋನ್
242 ಡೆಬಿಟ್ ಕಾರ್ಡ್
ಏಳು ಲ್ಯಾಪ್‌ಟಾಪ್
530 ಗ್ರಾಂ ಚಿನ್ನಾಭರಣ
₹4.89 ಲಕ್ಷ ನಗದು
ವಿವಿಧ ಬ್ಯಾಂಕ್‌ಗಳ 21 ಪಾಸ್‌ಬುಕ್
33 ಚೆಕ್‌ಬುಕ್
ವಿದೇಶದ ಏಳು ವಾಚ್‌ಗಳು
ಒಂದು ಆನ್‌ಲೈನ್ ಡಿಜಿಟಲ್ ಪೇಮೆಂಟ್ ರಿಂಗ್
ಒಂದು ಕ್ರಿಪ್ಟೊ ಕರೆನ್ಸಿ ಲೆಡ್ಜರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.