ADVERTISEMENT

ಬೆಂಗಳೂರು: ವರದಕ್ಷಿಣಿಗಾಗಿ ಪತ್ನಿ, ಮಕ್ಕಳ ಮೇಲೆ ಇನ್‌ಸ್ಪೆಕ್ಟರ್ ಹಲ್ಲೆ ?

ಸದಾಶಿವನಗರ ಪೊಲೀಸ್ ಠಾಣೆಯ ಇನ್‌ಸ್ಟೆಕ್ಟರ್‌ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 15:34 IST
Last Updated 30 ಡಿಸೆಂಬರ್ 2025, 15:34 IST
   

ಬೆಂಗಳೂರು: ವರದಕ್ಷಿಣೆಗಾಗಿ ಪತ್ನಿ ಹಾಗೂ ಮಕ್ಕಳಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದ ಆರೋಪದ ಅಡಿ ಸದಾಶಿವನಗರ ಪೊಲೀಸ್ ಠಾಣೆಯ ಇನ್‌ಸ್ಟೆಕ್ಟರ್‌ ಸೇರಿದಂತೆ ನಾಲ್ವರ ವಿರುದ್ಧ ಉತ್ತರ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇನ್‌ಸ್ಪೆಕ್ಟರ್ ಬಿ.ಪಿ.ಗಿರೀಶ್ ಹಾಗೂ ಅವರ ತಾಯಿ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಬರಗೂರಿನ ನಿವಾಸಿ ಲಲಿತಮ್ಮ, ಸಹೋದರ ಬಿ.ಪಿ.ಹರೀಶ್, ಹೊಳೆನರಸೀಪುರದ ತೆರಣ್ಯ ಗ್ರಾಮದ ರಾಜೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗಿರೀಶ್ ಅವರ ಪತ್ನಿ, ಮಹಾಲಕ್ಷ್ಮಿಪುರದ ನಿವಾಸಿ ಡಿ.ಎನ್‌.ಕಾವ್ಯಾ ಅವರು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.

ADVERTISEMENT

ಪತ್ನಿಯ ದೂರಿನಲ್ಲಿ ಏನಿದೆ ?

‘2010ರ ಜ.31ರಂದು ಹಾಸನದ ಶುಭೋದಯ ಕಲ್ಯಾಣ ಮಂಟಪದಲ್ಲಿ ಬಿ.ಪಿ.ಗಿರೀಶ್ ಅವರನ್ನು ಮದುವೆಯಾಗಿದ್ದೆ. ಹುಡುಗನಿಗೆ 250 ಗ್ರಾಂ ಚಿನ್ನಾಭರಣ, ₹5 ಲಕ್ಷ ನಗದು ನೀಡಲಾಗಿತ್ತು. ₹30 ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಡಲಾಗಿತ್ತು. ಇಬ್ಬರು ಮಕ್ಕಳಿದ್ದಾರೆ. ಈಗ ಬಿ.ಪಿ.ಗಿರೀಶ್ ಅವರು ಇನ್‌ಸ್ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. 2017ರಿಂದಲೂ ನನಗೆ ಹಾಗೂ ಮಕ್ಕಳಿಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾರೆ’ ಎಂದು ಕಾವ್ಯಾ ನೀಡಿದ್ದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ತಾಯಿ ಹಾಗೂ ದೊಡ್ಡಮ್ಮನನ್ನು ಮನೆಗೆ ಕರೆಸಿಕೊಂಡು ಮಕ್ಕಳ ಮೇಲೆಯೂ ದೌರ್ಜನ್ಯ ಎಸಗಿದ್ದಾರೆ. ಮನೆ ಖಾಲಿ ಮಾಡುವಂತೆ ಹೇಳಿ ಬೆದರಿಕೆ ಹಾಕಿ ಹೊರಕ್ಕೆ ಹಾಕಿದ್ದರು. ವರದಕ್ಷಿಣೆ ತರುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದರು. ತಂದೆಯವರು ₹8 ಲಕ್ಷ ನೀಡಿದ್ದರು. ನಂತರ, ಪತಿಯ ಸಹೋದರ ಬಿ.ಪಿ.ಹರೀಶ್‌ ಅವರಿಗೆ ಮನೆಯನ್ನು ಭೋಗ್ಯಕ್ಕೆ ಹಾಕಿಸಿಕೊಳ್ಳಲು 2019ರಲ್ಲಿ ₹10 ಲಕ್ಷದ ಚೆಕ್‌ ನೀಡಲಾಗಿತ್ತು. ಅದಾದ ಮೇಲೆ ತವರು ಮನೆಗೆ ಹೋಗಿ ವಾಪಸ್ ಬಂದಾಗ ಕ್ರಿಕೆಟ್‌ ಬ್ಯಾಟ್‌ನಿಂದ ಮಗಳ ಮೇಲೆ ಹಲ್ಲೆ ಮಾಡಿದ್ದರು. ಅಲ್ಲದೇ ಕೊಲೆ ಬೆದರಿಕೆ ಹಾಕಿದ್ದರು. ಗಿರೀಶ್ ಅವರಿಗೆ ಬೇರೆ ಮಹಿಳೆಯ ಜತೆಗೆ ಸ್ನೇಹವಿದ್ದು ಕಿರುಕುಳ ನೀಡುತ್ತಿದ್ದಾರೆ’ ಎಂಬುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.