ADVERTISEMENT

ಬೆಂಗಳೂರು: ₹18.55 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

8,335 ಎಲ್‌.ಎಸ್‌.ಡಿ ಸ್ಟ್ರಿಪ್ಸ್‌ ವಶಕ್ಕೆ ಪಡೆದ ಸಿಸಿಬಿ ಪೊಲೀಸರು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 16:02 IST
Last Updated 3 ಮಾರ್ಚ್ 2026, 16:02 IST
<div class="paragraphs"><p>ಸಿಸಿಬಿಯ ಮಾದಕ ದ್ರವ್ಯ ವಿಭಾಗದ ಪೊಲೀಸರು ವಶಪಡಿಸಿಕೊಂಡಿರುವ ವಿವಿಧ ಮಾದರಿಯ ಡ್ರಗ್ಸ್ ಅನ್ನು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಅವರು ಪರಿಶೀಲಿಸಿದರು&nbsp;</p></div>

ಸಿಸಿಬಿಯ ಮಾದಕ ದ್ರವ್ಯ ವಿಭಾಗದ ಪೊಲೀಸರು ವಶಪಡಿಸಿಕೊಂಡಿರುವ ವಿವಿಧ ಮಾದರಿಯ ಡ್ರಗ್ಸ್ ಅನ್ನು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಅವರು ಪರಿಶೀಲಿಸಿದರು 

   

ಬೆಂಗಳೂರು: ಸಿಸಿಬಿಯ ಮಾದಕ ದ್ರವ್ಯ ವಿಭಾಗದ ಪೊಲೀಸರು, ಬಾಗಲೂರು ಭಾಗದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ₹18 ಕೋಟಿ ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ವೈಟ್‌ಫೀಲ್ಡ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ₹55 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಒಟ್ಟು ₹18.55 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 

ಸಿಸಿಬಿ ಕಾರ್ಯಾಚರಣೆಯಲ್ಲಿ ಕೇರಳದ ಅಶ್ವಿನ್‌ (27) ಹಾಗೂ ಮುಬಿನಾ ನಿಜಾಮ್‌ (25) ಅವರು ಸಿಕ್ಕಿಬಿದ್ದಿದ್ದಾರೆ.

ADVERTISEMENT

ಆರೋಪಿಗಳಿಂದ 8,335 ಎಲ್‌ಎಸ್‌ಡಿ ಸ್ಟ್ರಿಪ್ಸ್‌ಗಳು, ಐದು ಕೆ.ಜಿ ಹೈಡ್ರೊಗಾಂಜಾ, 534 ಗ್ರಾಂ ಚರಸ್‌, ಎರಡು ಮೊಬೈಲ್‌ ಫೋನ್‌, ಕೃತ್ಯಕ್ಕೆ ಬಳಸಿದ ಒಂದು ದ್ವಿಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

‘ಅಶ್ವಿನ್‌ ಹಾಗೂ ಮುಬಿನಾ ನಿಜಾಮ್‌ ಅವರು ಬಾಗಲೂರಿನ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ವೊಂದನ್ನು ಬಾಡಿಗೆಗೆ ಪಡೆದು ನೆಲಸಿದ್ದರು. ಆರು ವರ್ಷಗಳಿಂದ ಸಹಜೀವನ ನಡೆಸುತ್ತಿದ್ದರು. ಇದೇ ಪ್ರಕರಣದ ಆರೋಪಿ ವಿನ್ಸೆಂಟ್‌ ಎಂಬಾತ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಫ್ಲ್ಯಾಟ್‌ನಲ್ಲಿಯೇ ಸಂಗ್ರಹ: ‘ನಗರದಲ್ಲಿ ಇದೇ ಮೊದಲ ಬಾರಿಗೆ 8,335 ಎಲ್‌ಎಸ್‌ಡಿ ಸ್ಟ್ರಿಪ್ಸ್‌ ವಶಕ್ಕೆ ಪಡೆಯಲಾಗಿದೆ. ಬಾಡಿಗೆಗೆ ಪಡೆದಿದ್ದ ಫ್ಲ್ಯಾಟ್‌ನಲ್ಲಿ ವಿವಿಧ ಮಾದರಿಯ ಡ್ರಗ್ಸ್ ಅನ್ನು ಆರೋಪಿಗಳು ಸಂಗ್ರಹಿಸಿಕೊಂಡು ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ದೇವರ ಚಿತ್ರ ಸೇರಿ ವಿವಿಧ ಚಿತ್ರಕಲೆಗಳ ರೂಪದಲ್ಲಿ ಎಲ್‌ಎಸ್‌ಡಿ ಸ್ಟ್ರಿಪ್ಸ್‌ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ‌ಇವರಿಗೆ ವಿನ್ಸೆಂಟ್​ ಎಂಬಾತ ಥಾಯ್ಲೆಂಡ್‌ನಿಂದ ವಿಮಾನದ ಮೂಲಕ ಕೇರಳಕ್ಕೆ ಡ್ರಗ್ಸ್ ಕಳುಹಿಸುತ್ತಿದ್ದ. ಅಲ್ಲಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಸಲಾಗುತ್ತಿತ್ತು. ವಿನ್ಸೆಂಟ್ ಸೂಚಿಸಿದ ಜಾಗದಲ್ಲಿ ಅಶ್ವಿನ್ ಮತ್ತು ಮೊಬಿನಾ ನಿಜಾಮ್‌ ಅವರು ಡ್ರಗ್ಸ್ ಇಡುತ್ತಿದ್ದರು. ಇನ್ನು ಪ್ರಕರಣ ಸಂಬಂಧ ಫ್ಲ್ಯಾಟ್​​​​ ಮಾಲೀಕನ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಡ್ರಗ್ಸ್​ ಮಾರಾಟ: ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಗಳಿಗೆ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಡ್ರಗ್‌ ಪೆಡ್ಲರ್‌ನನ್ನು ವೈಟ್​ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಲಿಂಗರಾಜ್ ದಾಸ್​​ ಬಂಧಿತ ಆರೋಪಿ. ಅವರಿಂದ ₹55 ಲಕ್ಷ ಮೌಲ್ಯದ 27 ಕೆ.ಜಿ. ಗಾಂಜಾ, 3 ಕೆ.ಜಿ. 200 ಗ್ರಾಂ ಆ್ಯಶಿಸ್ ಆಯಿಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
 

ಅಶ್ವಿನ್‌

ಮುಬಿನಾ 
ಲಿಂಗರಾಜ್ ದಾಸ್‌ 

ಚಾಕೊಲೇಟ್ ಬಿಸ್ಕತ್‌ ಬಾಕ್ಸ್‌ನಲ್ಲಿ ಹೈಡ್ರೊಗಾಂಜಾ

ಎಸಿಪಿ ಎಚ್‌.ಕೆ.ಮಹಾನಂದ್‌ ನೇತೃತ್ವದಲ್ಲಿ ನಡೆದ ಕಾರ್ಯಾರಣೆಯಲ್ಲಿ ವಿದೇಶದಿಂದ ಅಂಚೆಯ ಮೂಲಕ ಪಾರ್ಸೆಲ್‌ನಲ್ಲಿ ತರಿಸಿಕೊಳ್ಳುತ್ತಿದ್ದ 1.5 ಕೆ.ಜಿ. ಹೈಡ್ರೊಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚಾಕೊಲೇಟ್ ಹಾಗೂ ಬಿಸ್ಕತ್‌ ಬಾಕ್ಸ್‌ನಲ್ಲಿ ಹೈಡ್ರೊಗಾಂಜಾವನ್ನು ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ಪೂರೈಸಲಾಗುತ್ತಿತ್ತು. ವಶಕ್ಕೆ ಪಡೆದ ಡ್ರಗ್ಸ್ ಮೌಲ್ಯ ₹1.5 ಕೋಟಿ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಬಾಗಲೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.