ADVERTISEMENT

₹10 ಲಕ್ಷ ಲಂಚ: ಹಲಸೂರು ಗೇಟ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಮಾನತು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 14:21 IST
Last Updated 23 ಸೆಪ್ಟೆಂಬರ್ 2025, 14:21 IST
<div class="paragraphs"><p>ಹನುಮಂತ ಭಜಂತ್ರಿ</p><p></p></div>

ಹನುಮಂತ ಭಜಂತ್ರಿ

   

ಬೆಂಗಳೂರು: ಲಂಚ ತೆಗೆದುಕೊಂಡ ಹಾಗೂ ಕರ್ತವ್ಯ ಲೋಪ ಎಸಗಿದ್ದ ಆರೋಪದ ಅಡಿ ಇಬ್ಬರು ಇನ್‌ಸ್ಪೆಕ್ಟರ್, ಎಎಸ್‌ಐ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನಗರ ಪೊಲೀಸ್‌ ಕಮಿಷನರ್‌ ಸೀಮಾಂತ್‌ ಕುಮಾರ್ ಸಿಂಗ್ ಅವರು ಅಮಾನತುಗೊಳಿಸಿ ಮಂಗಳವಾರ ಆದೇಶಿಸಿದ್ದಾರೆ.

ADVERTISEMENT

ಹಲಸೂರು ಗೇಟ್ ಠಾಣೆಯ ಇನ್‌ಸ್ಪೆಕ್ಟರ್‌ ಹನುಮಂತ ಭಜಂತ್ರಿ, ಎಎಸ್‌ಐ ಪ್ರಸನ್ನ, ಹೆಡ್‌ ಕಾನ್‌ಸ್ಟೆಬಲ್‌ ಶ್ರೀನಿವಾಸ್‌, ಕಾನ್‌ಸ್ಟೆಬಲ್‌ ನಾಗರಾಜ್‌ ಹಾಗೂ ಕೋರಮಂಗಲ ಠಾಣೆಯ ಇನ್‌ಸ್ಪೆಕ್ಟರ್‌ ಲೂಯಿರಾಮ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಚಿನ್ನದ ವ್ಯಾಪಾರಿಯಿಂದ ₹10 ಲಕ್ಷವನ್ನು ನಗದು ರೂಪದಲ್ಲಿ ತೆಗೆದುಕೊಂಡ ಆರೋಪದ ಅಡಿ ಹನುಮಂತ ಭಜಂತ್ರಿ, ಅದೇ ಠಾಣೆಯ ಎಎಸ್‌ಐ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ.

‘₹10 ಲಕ್ಷ ಲಂಚ ತೆಗೆದುಕೊಂಡ ಬಗ್ಗೆ ದೂರು ಬಂದಿತ್ತು. ಕೇಂದ್ರ ವಿಭಾಗದ ಡಿಸಿಪಿ ಅವರಿಗೆ ಪ್ರಕರಣದ ತನಿಖೆಗೆ ಸೂಚನೆ ನೀಡಲಾಗಿತ್ತು. ತನಿಖೆ ವೇಳೆ ಲಂಚ ತೆಗೆದುಕೊಂಡಿರುವುದು ಸಾಬೀತಾಗಿತ್ತು. ಡಿಸಿಪಿ ಅವರ ಪ್ರಾಥಮಿಕ ತನಿಖಾ ವರದಿ ಆಧರಿಸಿ ಹಲಸೂರು ಗೇಟ್‌ ಠಾಣೆಯ ಐವರನ್ನು ಅಮಾನತುಗೊಳಿಸಲಾಗಿದೆ. ಜತೆಗೆ, ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಹನುಮಂತ ಭಜಂತ್ರಿ ಅವರ ವಿರುದ್ಧ ಇನ್ನೂ ಹಲವು ಆರೋಪಗಳಿದ್ದು ಅವುಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಮತ್ತೊಂದು ಪ್ರಕರಣದಲ್ಲಿ ಕೋರಮಂಗಲ ವ್ಯಾಪ್ತಿಯಲ್ಲಿ ಅವಧಿ ಮೀರಿ ಪಬ್, ಬಾರ್, ರೆಸ್ಟೊರೆಂಟ್‌ಗಳು ಕಾರ್ಯಾಚರಣೆಗೆ ಅವಕಾಶ ನೀಡಿದ ಆರೋಪದ ಅಡಿ ಲೂಯಿರಾಮ ರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ.

‘ಪೊಲೀಸ್ ಕಮಿಷನರ್‌ ಸೀಮಾಂತ್‌ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ರಾತ್ರಿ ಗಸ್ತು ನಡೆಸಲಾಗಿತ್ತು. ಆ ವೇಳೆ ಕೋರಮಂಗಲ ವ್ಯಾಪ್ತಿಯಲ್ಲಿ ಅವಧಿ ಮೀರಿ ಪಬ್, ಬಾರ್, ರೆಸ್ಟೊರೆಂಟ್‌ಗಳು ಗ್ರಾಹಕರಿಗೆ ಸೇವೆ ನೀಡುತ್ತಿರುವುದು ಕಂಡು ಬಂದಿತ್ತು. ಆಗ್ನೇಯ ವಿಭಾಗದ ಡಿಸಿಪಿ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಮಿಷನರ್ ಸೂಚನೆ ನೀಡಿದ್ದರು. ಡಿಸಿಪಿಯವರ ಪ್ರಾಥಮಿಕ ತನಿಖಾ ವರದಿ ಆಧರಿಸಿ ಲೂಯಿರಾಮ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

ಡ್ರಗ್ಸ್ ಪೆಡ್ಲರ್‌ಗಳ ಸ್ನೇಹ ಸಂಪಾದಿಸಿ ಅವರೊಂದಿಗೆ ಪಾರ್ಟಿ ನಡೆಸಿದ್ದ ಆರೋಪದ ಅಡಿ ಚಾಮರಾಜಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ ಮಂಜಣ್ಣ ಸೇರಿ 11 ಮಂದಿಯನ್ನು ಇತ್ತೀಚೆಗಷ್ಟೇ ಅಮಾನತು ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.