ಬೆಂಗಳೂರು: ಸಚಿವರು, ಪಕ್ಷದ ಪ್ರಮುಖರ ಸಭೆಯಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುಂಡಿಗಳನ್ನು ಕಾಲಮಿತಿಯ ಒಳಗೆ ಮುಚ್ಚದೆ, ದುರಸ್ತಿ ಮಾಡದೆ ಇರುವುದರಿಂದ ವಿರೋಧ ಪಕ್ಷಗಳಿಗೆ ಅಸ್ತ್ರ ನೀಡಿದಂತೆ ಆಗಿದೆ. ಚುನಾವಣೆ ಸಮಯದಲ್ಲಿ ಹೀಗೆ ಮಾಡಬಾರದು. ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು ಎಂದು ಪಕ್ಷದ ಮೂಲಗಳು ಹೇಳಿವೆ.
ರಸ್ತೆ ಗುಂಡಿಗಳ ಕುರಿತು ಗುರುವಾರ ಸುದ್ದಿಗಾರರ ಜತೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ರಸ್ತೆಗುಂಡಿಗಳನ್ನು ಮುಚ್ಚಲು ಗಡುವು ನೀಡಲಾಗಿದೆ. ಮಳೆ ಬಂದಾಗ ರಸ್ತೆಗುಂಡಿ ಬೀಳುವುದು ಸಹಜ. ಶಾಸಕರಿಗೆ ನೀಡಿರುವ ಅನುದಾನವನ್ನು ರಸ್ತೆ ದುರಸ್ತಿಗಾಗಿ ಬಳಸುವಂತೆ ಸೂಚಿಸಿದ್ದೇನೆ. ರಾತ್ರಿ ಸುರಿದ ಮಳೆಗೆ ವಿಧಾನಸೌಧ ಸುತ್ತಮುತ್ತ ಹತ್ತಾರು ಗುಂಡಿ ಬಿದ್ದಿವೆ. ಇದು ಪ್ರಕೃತಿ. ಯಾರೋ ನಾಲ್ಕು ಜನ ಟ್ವೀಟ್ ಮಾಡುತ್ತಾರೆ, ರಾಜಕೀಯವಾಗಿ ಹೆಸರು ಬರುತ್ತದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಮಹಾರಾಷ್ಟ್ರ, ದೆಹಲಿಯಲ್ಲಿರುವ ರಸ್ತೆ ಗುಂಡಿ ನಾನು ತೋರಿಸುತ್ತೇನೆ ಬನ್ನಿ. ಬೇರೆ ಕಡೆ ರಸ್ತೆ ಗುಂಡಿ ಚರ್ಚೆಯಾಗದೆ, ಬೆಂಗಳೂರು ವಿಚಾರದಲ್ಲಿ ಏಕೆ ಚರ್ಚೆಯಾಗುತ್ತಿದೆ’ ಎಂದು ಪ್ರಶ್ನಿಸಿದ್ದರು.
ಅವರ ಹೇಳಿಕೆಯನ್ನು ವಿರೋಧ ಪಕ್ಷಗಳು ಟೀಕಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.