ಆರ್.ಅಶೋಕ
ಬೆಂಗಳೂರು: ನಗರದ ರಸ್ತೆಗಳಲ್ಲಿರುವ ಗುಂಡಿಗಳಿಂದಾಗಿ ವಾಹನ ಸವಾರರಿಗೆ ತೀವ್ರ ತೊಂದರೆ ಎದುರಾಗುತ್ತಿದ್ದು, ಈ ಕುರಿತು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದ್ದಾರೆ.
'ಡೆಕ್ಕನ್ ಹೆರಾಲ್ಡ್' ವರದಿಯನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅಶೋಕ, 'ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ ಬ್ರೋಕನ್ ಬೆಂಗಳೂರು' ಎಂದು ಟೀಕಿಸಿದ್ದಾರೆ.
'ರಸ್ತೆಗಳ ಮೇಲೆ ಗುಂಡಿಗಳು, ಕೆಳಗಡೆ ಸುರಂಗದ ಕನಸುಗಳು-ಇದುವೇ ಕಾಂಗ್ರೆಸ್‌ನ ಬ್ರ್ಯಾಂಡ್ (ಬ್ರೋಕನ್) ಬೆಂಗಳೂರಿನ ಪರಿಕಲ್ಪನೆಯಾಗಿದೆ' ಎಂದು ಕಿಡಿಕಾರಿದ್ದಾರೆ.
'ನಗರದ ರಸ್ತೆಗಳಲ್ಲಿ ಎಲ್ಲೇ ನೋಡಿದರೂ ಗುಂಡಿಗಳಿದ್ದು, ಸಾವಿನ ಕೂಪವಾಗಿ ಮಾರ್ಪಟ್ಟಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ, ಬಿಬಿಎಂಪಿಯ ನಿರುತ್ಸಾಹ ಮತ್ತು ಕಾಂಗ್ರೆಸ್ ಆಡಳಿತದ ವೈಫಲ್ಯವನ್ನು ಇದು ತೋರಿಸುತ್ತದೆ' ಎಂದಿದ್ದಾರೆ.
'ನಗರದಲ್ಲಿ ಗುಂಡಿಗಳಿಲ್ಲದ ಒಂದೇ ಒಂದು ರಸ್ತೆಯೂ ಇಲ್ಲ ಎಂದು ನಾಗರಿಕರು ದೂರುತ್ತಾರೆ. ಅಗರ ಮೇಲ್ಸೇತುವೆಯ ಕೆಳಗಡೆ ನಿಮಗೆ ರಸ್ತೆ ಕಾಣುವುದಿಲ್ಲ. ಬಸ್ ನಿಲ್ದಾಣ, ಕಚೇರಿ, ವಸತಿ ಸಮುಚ್ಚಾಯಗಳ ಬಳಿಯೂ ರಸ್ತೆಗಳು ಹಾನಿಗೊಳಗಾಗಿವೆ' ಎಂದು ಹೇಳಿದ್ದಾರೆ.
'ನಗರದಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ವಾಹನ ಸವಾರರು ಸಮತೋಲನ ಕಳೆದುಕೊಳ್ಳುತ್ತಿದ್ದಾರೆ. ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ. ರೋಗಿಗಳಿಗೂ ತೊಂದರೆ ಎದುರಾಗಿದೆ. ನಗರದ ನಿವಾಸಿಗಳಿಗೆ ರಸ್ತೆ ಪ್ರಯಾಣ ನಿತ್ಯ ಯಾತನೆಯಾಗಿ ಮಾರ್ಪಟ್ಟಿದೆ' ಎಂದು ಆರೋಪಿಸಿದ್ದಾರೆ.
'ಬ್ರ್ಯಾಂಡ್ ಬೆಂಗಳೂರಿನ ನಿರ್ಮಾತೃ ಎಂದು ಸ್ವಯಂಘೋಷಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏನು ಮಾಡುತ್ತಿದ್ದಾರೆ? ರಸ್ತೆಯ ಮೇಲಿನ ಗುಂಡಿಗಳನ್ನು ಮುಚ್ಚುವ ಬದಲು ಕೆಳಗಡೆ ಸುರಂಗ ರಸ್ತೆ ಅಗೆಯುವುದರತ್ತ ಆಸಕ್ತಿ ಹೊಂದಿದ್ದಾರೆ' ಎಂದು ಟೀಕಿಸಿದ್ದಾರೆ.
'ಬಹುಶಃ ರಸ್ತೆಯ ಮೇಲೆ ವಾಹನ ಓಡಿಸುವುದನ್ನು ಬಿಟ್ಟು ನೆಲದಡಿಯಲ್ಲಿ ವಾಸಿಸಲು ಡಿಕೆಶಿ ಬಯಸುತ್ತಿದ್ದಾರೆ. ಏಕೆಂದರೆ ನೆಲದಲ್ಲಿ ರಸ್ತೆಗಳ ಬದಲಾಗಿ ಗುಂಡಿಗಳು ಮಾತ್ರವಿದೆ' ಎಂದು ವ್ಯಂಗ್ಯವಾಡಿದ್ದಾರೆ.
'ಬೆಂಗಳೂರಿಗೆ ಸುರಕ್ಷಿತ, ಸಂಚಾರಕ್ಕೆ ಯೋಗ್ಯವಾದ ರಸ್ತೆಗಳು ಬೇಕಿದೆ. ಸುಳ್ಳು ಭರವಸೆಗಳ್ಳಲ್ಲ, ಯೋಜನೆಗಳಲ್ಲ. ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ. ಇದು ಕಾಂಗ್ರೆಸ್ ಸರ್ಕಾರದ ಬ್ರೋಕನ್ ಬೆಂಗಳೂರು ಆಗಿದೆ' ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.