ಅಂದ್ರಹಳ್ಳಿ ಮುಖ್ಯ ರಸ್ತೆಯ ನಡುವೆ ಗುಂಡಿ ಬಿದ್ದಿರುವುದು
ಚಿತ್ರ: ಎಂ.ಎಸ್.ಮಂಜುನಾಥ್
ಬೆಂಗಳೂರು: ಡಾಂಬರು ಹೊದ್ದ ವಿಶಾಲವಾದ ಮುಖ್ಯರಸ್ತೆಯಲ್ಲಿ ಮಾರುದ್ದಕ್ಕೆ ಗುಂಡಿಗಳು, ಕೆಲವು ಕಡೆ ಹೊಂಡಗಳು. ಗುಂಡಿ–ಹೊಂಡಗಳಲ್ಲಿ ಒಮ್ಮೊಮ್ಮೆ ಜಿನುಗುವ ನೀರು. ಗುಂಡಿಗಳ ಕಾರಣದಿಂದಾಗಿ ದಿಢೀರನೆ ಸೃಷ್ಟಿಯಾಗುವ ದಟ್ಟಣೆ, ವಾಹನ ಸವಾರರ ಪರದಾಟ...
ಎಂಟನೇ ಮೈಲಿ–ಹೇರೋಹಳ್ಳಿ ಕ್ರಾಸ್(ಮಾಗಡಿ ರಸ್ತೆ) ಸಂಪರ್ಕಿಸುವ ರಸ್ತೆಯಲ್ಲಿ, ಗಂಗಾ ಇಂಟರ್‌ನ್ಯಾಷನಲ್ ಶಾಲೆಯಿಂದ–ಅಂದ್ರಹಳ್ಳಿ ಭಾಗದ ರಸ್ತೆಯ ದುಃಸ್ಥಿತಿ ಇದು.
ಹದಿಮೂರು ಕಿ.ಮೀ ಉದ್ದವಿರುವ ಈ ರಸ್ತೆಯಲ್ಲಿ, ಡಿ.ಗ್ರೂಪ್ ಲೇಔಟ್‌ನಿಂದ ವಿದ್ಯಮಾನ್ಯನಗರ, ಅಂದ್ರಹಳ್ಳಿ, ತಿಗಳರಪಾಳ್ಯ, ಕರಿಓಬನಹಳ್ಳಿ, ಗಂಗಾ ಇಂಟರ್‌ನ್ಯಾಷನಲ್ ಶಾಲೆವರೆಗಿನ ರಸ್ತೆಯಲ್ಲಿ ಗುಂಡಿಗಳಿವೆ. ಅಳತೆಯಿಟ್ಟಂತೆ ಹತ್ತಿಪ್ಪತ್ತು ಮೀಟರ್‌ಗೆ ಗುಂಡಿಗಳಾಗಿವೆ.
ಯಶವಂತಪುರ ವಿಧಾನಸಭಾ ಕ್ಷೇತ್ರ, ಆರ್ ಆರ್ ನಗರ ವಲಯದ ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಗೆ ಸೇರುವ ರಸ್ತೆಯಲ್ಲಿ ಕಳೆದ ವರ್ಷ ಡಾಂಬರೀಕರಣ ಮಾಡಲಾಗಿತ್ತು. ಜಲಮಂಡಳಿಯವರು ಕಾವೇರಿ ನೀರಿನ ಕೊಳವೆಗಳನ್ನು ಅಳವಡಿಸಲು ರಸ್ತೆ ಅಗೆದಿದ್ದಾರೆ. ಕೆಲಸ ಮುಗಿದ ನಂತರ ರಸ್ತೆ ದುರಸ್ತಿಗೊಳಿಸಿಲ್ಲ. ಗುಂಡಿಗಳು ಹಾಗೇ ಉಳಿದುಕೊಂಡಿವೆ. ಅಧಿಕಾರಿಗಳ ನಿಲಕ್ಷ್ಯದಿಂದ ಈ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ತಿಗಳರಪಾಳ್ಯದ ನಿವಾಸಿ ಕಿರಣ್ ಗೌಡ ಆರೋಪಿಸುತ್ತಾರೆ.
ತಿಗಳರಪಾಳ್ಯ ಭಾಗದಲ್ಲಿ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿವೆ. ರಸ್ತೆಗಳಲ್ಲಿ ಗುಂಡಿಗಳಿರುವ ಕಾರಣದಿಂದಾಗಿ ವಾಹನ ಸಂಚಾರ ನಿಧಾನವಾಗುತ್ತದೆ. ದಿಢೀರನೆ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತದೆ. ಸಂಜೆ ಮತ್ತು ಬೆಳಗಿನ ಅವಧಿಯಲ್ಲಿ ದಟ್ಟಣೆ ಹೆಚ್ಚಿರುತ್ತದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.
ರಸ್ತೆಯುಲ್ಲಿರುವ ವೃತ್ತಗಳು, ತಿರುವುಗಳಲ್ಲೇ ಹೆಚ್ಚು ಗುಂಡಿಗಳಾಗಿವೆ. ಅಂದ್ರಹಳ್ಳಿ ಮುಖ್ಯರಸ್ತೆಯ ಪೆಟ್ರೊಲ್ ಬಂಕ್ ಬಳಿಯ ತಿರುವಿನಲ್ಲಿ ದೊಡ್ಡ ದೊಡ್ಡ ಹೊಂಡಗಳಿವೆ. ಈ ರಸ್ತೆಯಲ್ಲಿ ಆಟೊಗಳು, ದ್ವಿಚಕ್ರ ವಾಹನಗಳು ಗುಂಡಿಗಳನ್ನು ಏರಿಳಿಯುತ್ತಲೇ ಸಾಗುತ್ತವೆ.
‘ಈ ರಸ್ತೆಯಲ್ಲಿ ಎಲ್ಲಾದರೂ ವಾಹನಗಳ ದಟ್ಟಣೆ ಕಾಣುತ್ತಿದ್ದರೆ, ಅಲ್ಲಿ ಗುಂಡಿಗಳಿವೆ ಎಂದು ಅರ್ಥ ಮಾಡಿಕೊಳ್ಳಬೇಕು’ ಎಂದು ಸ್ಥಳೀಯರೊಬ್ಬರು ತಿರುವಿನಲ್ಲಿ ನಿಂತಿದ್ದ ವಾಹನಗಳನ್ನು ತೋರಿಸಿ ಹೇಳಿದರು. ‘ರಸ್ತೆ ದೂರದ ನೋಟಕ್ಕೆ ಚೆನ್ನಾಗಿದೆ ಎಂದು ಎನ್ನಿಸುತ್ತದೆ. ರಸ್ತೆಯಲ್ಲಿ ಸಾಗುತ್ತಿರುವಾಗ ಧುತ್ತನೆ ಗುಂಡಿಗಳು ಎದುರಾಗುತ್ತವೆ. ಆಗ ಈ ರಸ್ತೆಯ ಸಮಸ್ಯೆ ಅರ್ಥವಾಗುತ್ತದೆ’ ಎಂದು ಸ್ಥಳೀಯ ಉದ್ಯಮಿಯೊಬ್ಬರು ವಿವರಿಸಿದರು.
‘ಎಂಟನೇ ಮೈಲಿ ಕಡೆಯಿಂದ ಬರುವವರಿಗೆ ಆರಂಭದಲ್ಲಿ ಗುಂಡಿಗಳ ಸಂಖ್ಯೆ ಕಡಿಮೆ ಇದೆ ಅಂತ ಅನ್ನಿಸುತ್ತದೆ. ಕರಿಓಬನಹಳ್ಳಿ ದಾಟುತ್ತಿದ್ದಂತೆ ಅಡಿಗಡಿಗೂ ಗುಂಡಿಗಳು ಕಾಣುತ್ತವೆ, ಸಮಸ್ಯೆಯ ತೀವ್ರತೆಯೂ ವಿಸ್ತಾರವಾಗುತ್ತದೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು, ಗುಂಡಿಗಳನ್ನು ಗ್ರಹಿಸಿದೇ ಅಪಘಾತಕ್ಕೀಡಾಗಿರುವ ಉದಾಹರಣೆಗಳಿವೆ. ಸಣ್ಣ ಚಕ್ರಗಳ ವಾಹನಗಳಂತೂ ಗುಂಡಿಯಲ್ಲೇ ಸಿಕ್ಕಿಬೀಳುತ್ತಿವೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.
ಬೆಂಗಳೂರು ಜಲಮಂಡಳಿಯವರು ವರ್ಷದ ಹಿಂದೆ ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಪೂರೈಕೆಗಾಗಿ ರಸ್ತೆಯನ್ನು ಅಗೆದು ಕೊಳವೆಗಳನ್ನು ಜೋಡಿಸಿದ್ದಾರೆ. ನಂತರ ಮಣ್ಣು ಮಚ್ಚಿ ರಸ್ತೆಗೆ ಡಾಂಬರ್ ಹಾಕಲಾಗಿದೆ. ಪ್ರಾಯೋಗಿಕವಾಗಿ ಕೊಳವೆಯಲ್ಲಿ ನೀರು ಹರಿಸಿದಾಗ ಎಲ್ಲೆಲ್ಲಿ ನೀರು ಸೋರುತ್ತಿತ್ತೋ ಆ ಜಾಗವನ್ನು ಪುನಃ ಅಗೆದು ಕೊಳವೆ ದುರಸ್ತಿಗೊಳಿಸಿದ್ದಾರೆ. ಆದರೆ ರಸ್ತೆ ಸರಿಪಡಿಸಲಿಲ್ಲ. ಇದರಿಂದ ಕೆಲವು ಕಡೆ ರಸ್ತೆ ಮಧ್ಯೆಯೇ ಸಣ್ಣ ಮಣ್ಣಿನ ರಾಶಿಗಳಾಗಿವೆ. ಇನ್ನೂ ಕೆಲವು ಕಡೆ ಸಣ್ಣ ಹೊಂಡಗಳೇ ನಿರ್ಮಾಣವಾಗಿವೆ. ಇವೇ ಸಂಚಾರಕ್ಕೆ ತೊಡಕಾಗಿವೆ ಎನ್ನುವುದು ಸ್ಥಳೀಯರ ಆರೋಪ.
ಜಲಮಂಡಳಿಯವರು ಕುಡಿಯುವ ನೀರಿನ ಕೊಳವೆ ಅಳವಡಿಸಲು ರಸ್ತೆಗಳನ್ನು ಅಗೆದು ಸರಿಯಾಗಿ ಮುಚ್ಚದ ಕಾರಣ ಗುಂಡಿಗಳು ಬಿದ್ದಿವೆ. ವೃದ್ದರು ಮಕ್ಕಳು ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಗುತ್ತಿಗೆದಾರರು ರಸ್ತೆ ಅಗೆದು ಹಣ ತೆಗೆದುಕೊಂಡು ಹೋಗುತ್ತಾರೆ. ರಸ್ತೆ ಸರಿಪಡಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ತಕ್ಷಣ ರಸ್ತೆಯನ್ನು ದುರಸ್ತಿಗೊಳಿಸಬೇಕು’ ಎಂದು ಅಂದ್ರಹಳ್ಳಿಯ ನಿವಾಸಿ ಆರ್.ಗೋಪಾಲ್ ಆಗ್ರಹಿಸಿದ್ದಾರೆ.
ಅಂದ್ರಹಳ್ಳಿಯ ಡಿ ಗ್ರೂಪ್ ಲೇಔಟ್‌ನಿಂದ ಕರಿಓಬನಹಳ್ಳಿವರೆಗಿನ ರಸ್ತೆಯಲ್ಲಿ ಜಲಮಂಡಳಿಯವರು ನೀರು ಸೋರಿಕೆಯಾಗುತ್ತಿದ್ದ ಜಾಗಗಳಲ್ಲಿ ಎರಡು ಮೂರು ಬಾರಿ ದುರಸ್ತಿ ಕಾಮಗಾರಿ ನಡೆಸಿದರು. ಕೊಳವೆಗಳನ್ನು ದುರಸ್ತಿ ಮಾಡಿದ ಜಾಗದಲ್ಲಿ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ. ಗುಣಮಟ್ಟದ ಕಾಮಗಾರಿ ಕೈಗೊಳ್ಳದ ಕಾರಣ ರಸ್ತೆಗಳು ಗುಂಡಿಗಳಾಗಿವೆ. ಸಾರ್ವನಿಕರು ಸುಗಮವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಗುತ್ತಿಗೆದಾರರು ಮಾಡಿದ ಕಾಮಗಾರಿಯನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿಲ್ಲ. ತಕ್ಷಣ ರಸ್ತೆ ದುರಸ್ತಿಯಾಗಬೇಕು. ಕಳಪೆ ಕಾಮಗಾರಿ ಕೈಗೊಂಡವರಿಗೆ ದಂಡ ವಿಧಿಸಬೇಕು– ಶಿವಕುಮಾರ್, ಅಧ್ಯಕ್ಷ ಪೀಣ್ಯ ಕೈಗಾರಿಕಾ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.