ಕೆ.ಆರ್.ಪುರ: ನಗರದಲ್ಲಿ ಮಂಗಳವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಬೆಂಗಳೂರು ಪೂರ್ವ ವಲಯದ ಹೊರಮಾವು ವಾರ್ಡ್‌ನ ಶ್ರೀಸಾಯಿ ಬಡಾವಣೆ ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ಥಗೊಂಡಿತ್ತು.
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಬಡಾವಣೆಯ ರಸ್ತೆಗಳೆಲ್ಲ ಹೊಳೆಯಂತಾದವು. ರಸ್ತೆ ಬದಿಯಲ್ಲಿದ್ದ ಮನೆಗಳಿಗೆ ಪ್ರವಾಹದಂತೆ ನೀರು ನುಗ್ಗಿತು. ಮನೆಯಲ್ಲಿದ್ದ ಪ್ರಿಡ್ಜ್, ಟಿ.ವಿ, ಕಂಪ್ಯೂಟರ್‌ಗಳಿಗೆ ಹಾನಿಯಾಯಿತು. ಪುಸ್ತಕಗಳು, ದವಸ–ಧಾನ್ಯಗಳೆಲ್ಲ ನೀರಿನಲ್ಲಿ ತೊಯ್ದು ಹೋದವು.
ಮಳೆ ನೀರು ನುಗ್ಗಿದ್ದರಿಂದ ಬಡಾವಣೆಯ ನಿವಾಸಿಗಳು ಮನೆಯಿಂದ ಹೊರಗೆ ತೆರಳಲು ಪ್ರಯಾಸಪಟ್ಟರು. ಸಂಪ್‌ಗಳಿಗೆಲ್ಲ ಕೊಳಚೆ ನೀರು ತುಂಬಿಕೊಂಡಿದ್ದರಿಂದ, ಕೆಲವು ಮನೆಗಳವರಿಗೆ ಕುಡಿಯಲು ನೀರು ಇಲ್ಲದಾಗಿತ್ತು. ಮನೆ, ಸಂಪ್‌ಗಳಿಂದ ಕೊಳಚೆ ನೀರನ್ನು ಹೊರಹಾಕಲು ಸಾಹಸ ಮಾಡಬೇಕಾಯಿತು.
‘ಸಂಜೆ ನಂತರ, ರಾತ್ರಿಯೂ ಮಳೆ ಮುಂದುವರಿಯಿತು. ಮಳೆ ಹೆಚ್ಚಾದಂತೆ ಹೆಬ್ಬಾಳ, ಆರ್.ಟಿ.ನಗರ, ಪುಲಿಕೇಶಿನಗರದಿಂದ ರಾಜಕಾಲುವೆಯ ಮೂಲಕ ರಭಸವಾಗಿ ಹರಿದು ಬಂದ ನೀರು, ಗೆದ್ದಲಹಳ್ಳಿಯ ರೈಲ್ವೆ ವೆಂಟ್ ಬಳಿ ನಿಧಾನವಾಗುತ್ತದೆ. ಇದರಿಂದ ಒತ್ತಡ ಸೃಷ್ಟಿಯಾಗಿ ನೀರು ಸಾಯಿ ಬಡಾವಣೆಗೆ ನುಗ್ಗಿ ಅವಾಂತರ ಸೃಷ್ಟಿಸಿದೆ’ ಎಂದು ಸ್ಥಳೀಯರು ಹೇಳಿದರು.
‘ಇಷ್ಟೆಲ್ಲ ಮಳೆಯಾಗಿ ಅವಾಂತರ ಸೃಷ್ಟಿಯಾದರೂ, ಬಿಬಿಎಂಪಿಯ ಯಾವ ಸಿಬ್ಬಂದಿಯೂ ಬಡಾವಣೆಗೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಿಲ್ಲ. ನೀರನ್ನು ತೆರವುಗೊಳಿಸಲು ಮುಂದಾಗಲಿಲ್ಲ. ರಾತ್ರಿ ಇಡೀ ಮನೆಯಿಂದ ನೀರನ್ನು ಹೊರಗೆ ಹಾಕಿದ್ದೇವೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಬುಧವಾರ ಮಾಧ್ಯಮವದವರ ಬಳಿ ಸಮಸ್ಯೆಯನ್ನು ವಿವರಿಸಿದರು.
ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಪಿ ಸಿಬ್ಬಂದಿ, ಪಂಪ್‌ಗಳನ್ನಿಟ್ಟು ನೀರು ಹೊರ ಹಾಕುವ ಕಾರ್ಯದಲ್ಲಿ ನಿರತರಾದರು.
ತಪ್ಪದ ಗೋಳು ಜನರ ಆಕ್ರೋಶ
ಪ್ರತಿ ಬಾರಿ ಮಳೆ ಬಂದಾಗ ಇಲ್ಲಿ ಪ್ರವಾಹ ಸ್ಥಿತಿ ಉಂಟಾಗುತ್ತದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಮಳೆ ಸುರಿದಾಗ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಪ್ರವಾಹ ಉಂಟಾದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಕಳೆದ ವರ್ಷ ಪ್ರವಾಹ ಬಂದಾಗಲೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಿಬಿಎಂಪಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದರು. ಆದರೆ ಸಮಸ್ಯೆಗೆ ಮುಕ್ತಿ ದೊರೆತಿಲ್ಲ ಎಂದು ಸ್ಥಳೀಯ ನಾಗರಿಕರು ದೂರಿದರು.
‘ಪ್ರತಿ ಸಲ ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಯಾಗುತ್ತಿರುವುದರಿಂದ ಇಲ್ಲಿನ ಕೆಲವು ನಿವಾಸಿಗಳು ಮನೆ ತೊರೆದು ಬೇರೆ ಸ್ಥಳಗಳಿಗೆ ತೆರಳಿ ನೆಲೆಸಿದ್ದಾರೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಜಕಾಲುವೆ ಅಪೂರ್ಣಗೊಂಡಿವೆ. ಹೀಗಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವಂತೆ ಕಾಣುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ರಮೇಶ್ ತಿಳಿಸಿದರು.
‘ಮಂಗಳವಾರ ರಾತ್ರಿ ಇಡೀ ಊಟವಿಲ್ಲದೆ ಸಂಕಷ್ಟ ಎದುರಿಸಿದ್ದೇವೆ. 20 ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರಿದಿದೆ. ಶಾಶ್ವತ ಪರಿಹಾರ ನೀಡುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಸ್ಥಳೀಯ ನಿವಾಸಿ ಮಧುಶ್ರೀ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.