ADVERTISEMENT

ರಾಜಕಾಲುವೆ ಬಫರ್ |ಶೀಘ್ರ ರಸ್ತೆ ನಿರ್ಮಿಸಿ: ಅಧಿಕಾರಿಗಳಿಗೆ ಮಹೇಶ್ವರ್ ರಾವ್ ಸೂಚನೆ

ಜಕ್ಕೂರು ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ರಸ್ತೆ: ರಾವ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 16:24 IST
Last Updated 19 ಆಗಸ್ಟ್ 2025, 16:24 IST
ಮಹೇಶ್ವರ್‌ ರಾವ್‌ ಅವರು ಯಲಹಂಕದ ರಾಜಕಾಲುವೆಯ ಬಫರ್‌ ವಲಯದಲ್ಲಿ ನಿರ್ಮಿಸಲಾಗುವ ರಸ್ತೆಯ ಸ್ಥಳ ಪರಿಶೀಲನೆ ನಡೆಸಿದರು
ಮಹೇಶ್ವರ್‌ ರಾವ್‌ ಅವರು ಯಲಹಂಕದ ರಾಜಕಾಲುವೆಯ ಬಫರ್‌ ವಲಯದಲ್ಲಿ ನಿರ್ಮಿಸಲಾಗುವ ರಸ್ತೆಯ ಸ್ಥಳ ಪರಿಶೀಲನೆ ನಡೆಸಿದರು   

ಬೆಂಗಳೂರು: ಯಲಹಂಕ ವಲಯದ ಜಕ್ಕೂರು ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ ರಾಜಕಾಲುವೆ ಬಫರ್‌ ವಲಯದಲ್ಲಿ ರಸ್ತೆಯನ್ನು ತ್ವರಿತವಾಗಿ ನಿರ್ಮಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಯಲಹಂಕ ವಲಯ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ಮಂಗಳವಾರ ಪರಿಶೀಲನೆ ನಡೆಸಿದ ಅವರು, ‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಈ ಪ್ರದೇಶದಲ್ಲಿ ಹಾದು ಹೋಗಲಿದ್ದು, ಅದಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಗಳನ್ನು ನಿರ್ಮಿಸಬೇಕು’ ಎಂದರು.

ಯಲಹಂಕದ ಕೋಗಿಲು ಜಂಕ್ಷನ್‌ನಿಂದ ಜಕ್ಕೂರು ಕೆರೆಯವರೆಗೆ ಹೊಸದಾಗಿ ಸುಮಾರು 15 ಮೀಟರ್ ಅಗಲದ ರಾಜಕಾಲುವೆ ಹಾಗೂ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ಜಕ್ಕೂರು ರಸ್ತೆಯಿಂದ ಜಲಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ (ಎಸ್‌ಟಿಪಿ) ಮೂಲಕ ಸಂಪರ್ಕ ಕಲ್ಪಿಸುವ ರಿತು ಪರಿಶೀಲಿಸಿ ಕ್ರಮವಹಿಸಲು ಸೂಚಿಸಿದರು.

ADVERTISEMENT

ರೈತರ ಸಂತೆ ಬಳಿ ಹಳೆ ಕಲ್ಯಾಣಿ ಇದ್ದು, ಅದನ್ನು ಪುನರುಜ್ಜೀವನಗೊಳಿಸಿ ಅದಕ್ಕೆ ನೀರನ್ನು ತುಂಬಿಸಲು ಕ್ರಮವಹಿಸಬೇಕು. ರಸ್ತೆ ಬದಿ ತಾಜ್ಯ ಬಿಸಾಡಿರುವುದನ್ನು ತೆರವುಗೊಳಿಸಿ, ಮತ್ತೆ ಕಸ ಬೀಳದಂತೆ ಕ್ರಮವಹಿಸಬೇಕು. ಜಕ್ಕೂರು ಕೆರೆ ಅಂಗಳದಲ್ಲಿ ವಾಯು ವಿಹಾರ ಮಾರ್ಗವನ್ನು ಸರಿಯಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಕ್ಕೂರಿನ ರೈತರ ಸಂತೆ ರಸ್ತೆಯಲ್ಲಿ 2.5 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ, ಜಕ್ಕೂರು ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರ ಮುಗಿಸಲು ಸೂಚಿಸಿದರು.

ಎಸ್‌ಒಪಿ: ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚಾರಣಾ ವಿಧಾನದ (ಎಸ್‌ಒಪಿ) ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಎಲ್ಲ ಎಂಜಿನಿಯರ್‌ಗಳಿಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.

ಯೋಜನಾ ವಿಭಾಗದ ವಿಶೇಷ ಆಯುಕ್ತ ಕರೀಗೌಡ, ವಲಯ ಆಯುಕ್ತರಾದ ಸತೀಶ್, ರಮೇಶ್, ಜಂಟಿ ಆಯುಕ್ತರಾದ ಸಂಗಪ್ಪ, ದಾಕ್ಷಾಯಿಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.