ADVERTISEMENT

ಬಿಡಿಎ, ಬಿಬಿಎಂಪಿಯಿಂದ ರಾಜಕಾಲುವೆ ಒತ್ತುವರಿ

‘ಬಿಡಿಎ ಅಭಿವೃದ್ಧಿಗೊಳಿಸಿದ ಬಡಾವಣೆ’ ಎಂಬ ಷರಾ

Published 1 ಸೆಪ್ಟೆಂಬರ್ 2022, 21:49 IST
Last Updated 1 ಸೆಪ್ಟೆಂಬರ್ 2022, 21:49 IST
ತುಷಾರ್‌ ಗಿರಿನಾಥ್‌
ತುಷಾರ್‌ ಗಿರಿನಾಥ್‌   

ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಕೂಡ ಭಾಗಿಯಾಗಿವೆ. ಇದರಲ್ಲಿ ಬಿಡಿಎಯದ್ದೇ ಸಿಂಹಪಾಲು.

ಕಳೆದ ವರ್ಷ ಡಿಸೆಂಬರ್‌ 31ರಂತೆ ರಾಜಕಾಲುವೆ ಒತ್ತುವರಿಯನ್ನು ಪಟ್ಟಿ ಮಾಡಿರುವ ಬಿಬಿಎಂಪಿ ವರದಿಯಲ್ಲಿ ಇದು ದಾಖಲಾಗಿದೆ. ನಗರದಲ್ಲಿ ಒಟ್ಟಾರೆ 2,626 ಸ್ಥಳಗಳಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ. ಇದರಲ್ಲಿ ಇನ್ನೂ 696 ಸ್ಥಳಗಳಲ್ಲಿ ಒತ್ತುವರಿ ತೆರವಾಗಬೇಕಿದೆ. ಇನ್ನೂ 52 ಪ್ರಕರಣಗಳು ನ್ಯಾಯಾಲಯದಲ್ಲಿವೆ.

ಅತಿ ಹೆಚ್ಚು ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ನಗರದ ಮಹದೇವಪುರ ವಲಯದಲ್ಲೇ ರಾಜಕಾಲುವೆ ಅತಿ ಹೆಚ್ಚು ಒತ್ತುವರಿಯಾಗಿದೆ. ಅಲ್ಲದೆ, ಪೂರ್ವ ವಲಯದಲ್ಲಿ ಬಿಡಿಎ ಅತಿ ಹೆಚ್ಚು ಒತ್ತುವರಿ ಮಾಡಿದೆ. ಬಿಬಿಎಂಪಿ ರಾಜಕಾಲುವೆ ವಿಭಾಗದ ವರದಿಯ ಪ್ರಕಾರ, ಪೂರ್ವ ವಲಯದಲ್ಲಿ ಬಿಡಿಎ 124 ಸ್ಥಳಗಳಲ್ಲಿ ಎಕರೆ, ಗುಂಟೆ ಹಾಗೂ ಚದರ ಮೀಟರ್‌ ಲೆಕ್ಕಾಚಾರದಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದೆ. ಈ ಸ್ಥಳಗಳಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ಕೆಲವು ಕಡೆ ಖಾಲಿ ಪ್ರದೇಶವಿದೆ. ಇದಲ್ಲದೆ ರಾಜಕಾಲುವೆ ಒತ್ತುವರಿ ಪ್ರದೇಶದಲ್ಲಿ ಬಿಡಿಎ ರಸ್ತೆ, ಮೈದಾನಗಳನ್ನು ಅಭಿವೃದ್ಧಿ ಮಾಡಿದೆ.

ADVERTISEMENT

ಕೊನೇನ ಅಗ್ರಹಾರ, ದೂಕನಹಳ್ಳಿ, ದೊಮ್ಮಲೂರು, ಲಿಂಗರಾಜಪುರ, ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಹೆಣ್ಣೂರು ಪ್ರದೇಶಗಳಲ್ಲಿ ಬಿಡಿಎ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದೆ. ಈ ಎಲ್ಲ ಒತ್ತುವರಿಯನ್ನು ‘ತೆರವುಗೊಳಿಸಲಾಗಿದೆ’ ಎಂದು ಹೇಳದೆ, 2018–19ರಿಂದೀಚೆಗೆ ‘ಪರಿಹರಿಸಲಾದ ಒತ್ತುವರಿ ಪಟ್ಟಿ‘ಯಲ್ಲಿ ಬಿಬಿಎಂಪಿ ದಾಖಲಿಸಿದೆ. ರಾಜಕಾಲುವೆಯ ಒತ್ತುವರಿ ಪ್ರದೇಶವನ್ನು ಪಟ್ಟಿಯ ಷರಾದಲ್ಲಿ ‘ಬಿಡಿಎ ಅಭಿವೃದ್ಧಿಪಡಿಸಿದ ಭೂಮಿ’, ‘ಬಿಡಿಎ ಬಡಾವಣೆ’, ‘ಬಿಡಿಎ’ ಎಂದು ನಮೂದಿಸಿದೆ. ಇದೇ ಪೂರ್ವ ವಲಯದಲ್ಲಿ ಮೂರು ಪ್ರಕರಣಗಳಲ್ಲಿ ಖಾಸಗಿ ವ್ಯಕ್ತಿಗಳು ಮಾಡಿಕೊಂಡಿದ್ದ ಒತ್ತುವರಿಯನ್ನು ತೆರವುಗೊಳಿಸಿದರುವ ಬಿಬಿಎಂಪಿ, ಪಟ್ಟಿಯ ಷರಾದಲ್ಲಿ ‘ಒತ್ತುವರಿ ತೆರವುಗೊಳಿಸಲಾಗಿದೆ’ ಎಂದು ನಮೂದಿಸಿದೆ.

ಇನ್ನು ಬಿಬಿಎಂಪಿಯೇ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣವನ್ನೂ ಈ ಪಟ್ಟಿಯಲ್ಲಿ ತೋರಿಸಲಾಗಿದೆ. ಚಿಕ್ಕಪೇಟೆಯಲ್ಲಿರುವ ವಾಣಿಜ್ಯ ಕಟ್ಟಡಗಳ ಎರಡು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇದಲ್ಲದೆ, ಹೆಬ್ಬಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗಂಗೇನಹಳ್ಳಿಯಲ್ಲಿ 23 ಹಾಗೂ 1–4 ಗುಂಟೆ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಬಿಬಿಎಂಪಿಯು ಶೌಚಾಲಯ ಮತ್ತು ಕಟ್ಟಡವನ್ನು ನಿರ್ಮಿಸಿದೆ. ಇದಕ್ಕೂ ಷರಾದಲ್ಲಿ ‘ಬಿಬಿಎಂಪಿ ಶೌಚಾಲಯ’ ಹಾಗೂ ‘ಬಿಬಿಎಂಪಿ ಕಟ್ಟಡ’ ಎಂದು ನಮೂದಿಸಿದೆ. ಇದು ಬಾಕಿ ಪ್ರಕರಣಗಳ ಪಟ್ಟಿಯಲ್ಲಿದೆ.

ಕೊಳೆಗೇರಿ ಅಭಿವೃದ್ಧಿ ಮಂಡಳಿ ಕೂಡ ಪುಲಕೇಶಿನಗರ ವಿಧಾನಸಭೆ ಕ್ಷೇತ್ರದ ಕಾವಲಬೈರಸಂದ್ರದಲ್ಲಿ ಒಟ್ಟು 38 ಗುಂಟೆ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಮನೆಗಳನ್ನು ನಿರ್ಮಿಸಿದೆ. ಷರಾದಲ್ಲಿ ‘ಸ್ಲಂ ಬೋರ್ಡ್‌’ ಎಂದು ಬಿಬಿಎಂಪಿ ರಾಜಕಾಲುವೆ ಒತ್ತುವರಿ ಪಟ್ಟಿಯಲ್ಲಿ ನಮೂದಿಸಿದೆ.

**

32 ಮನೆ ತೆರವು: ಆಯುಕ್ತ
‘ರೈನ್‌ಬೊ ಬಡಾವಣೆಯಲ್ಲಿ ಕೆಲವರು ನಕ್ಷೆ ಉಲ್ಲಂಘಿಸಿ ರಾಜಕಾಲುವೆ ಮೇಲೆಯೇ ಮನೆ ಕಟ್ಟಿದ್ದಾರೆ. 32 ಮನೆಗಳು ರಾಜಕಾಲುವೆ ಮೇಲೆ ಇವೆ. ಅವರದ್ದೇ ತಪ್ಪಿನಿಂದ ಅವಾಂತರ ಆಗುತ್ತಿದೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ತೆರವು ಮಾಡಲಾಗುತ್ತದೆ. ಪ್ರಮುಖವಾಗಿ ಹೆಚ್ಚು ಸಮಸ್ಯೆ ಎಲ್ಲಿ ಆಗುತ್ತಿದೆಯೋ ಅಲ್ಲಿ ನಾವು ತೆರವು ಕಾರ್ಯ ಮಾಡುತ್ತೇವೆ. ನಂತರ ಎಲ್ಲ ಒತ್ತುವರಿಯನ್ನೂ ತೆರವು ಮಾಡಲಾಗುತ್ತದೆ. 500ಕ್ಕೂ ಹೆಚ್ಚು ಸ್ಥಳಗಳಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

**

ಅವರದ್ದು ಮಾತ್ರ ಸಕ್ರಮವೇ?

‘ಬಾಣಸವಾಡಿ–ಕಾಚರಕನಹಳ್ಳಿ ವ್ಯಾಪ್ತಿಯಲ್ಲಿ ರಾಜಕಾಲುವೆ, ಕೆರೆ ಪ್ರದೇಶವನ್ನು ಬಿಡಿಎ ಒತ್ತುವರಿ ಮಾಡಿಕೊಡಿಕೊಂಡು ಬಡಾವಣೆ ನಿರ್ಮಿಸಿದೆ. ಆ ಒತ್ತುವರಿಯನ್ನು ತೆರವು ಮಾಡಲು ಯಾರೂ ಮುಂದಾಗುತ್ತಿಲ್ಲ. ಜನ ಮಾಡಿಕೊಂಡರೆ ಮಾತ್ರ ಒತ್ತುವರಿಯೇ? ಬಿಡಿಎ, ಬಿಬಿಎಂಪಿ ಒತ್ತುವರಿ ಮಾಡಿಕೊಂಡರೆ ಅದು ಸಕ್ರಮವೇ? ಹೀಗೆ ಮಳೆ ಬಂದಾಗ ಮಾತ್ರ ಎಲ್ಲ ಒತ್ತುವರಿ ತೆಗೆಯುತ್ತೇವೆ ಎಂದು ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಹೇಳುತ್ತಾರೆ. ಮಳೆ ನಿಂತ ಮೇಲೆ ಯಾರೂ ಬರೋಲ್ಲ, ಏನೂ ಹೇಳೊಲ್ಲ. ಮುಂದಿನ ವರ್ಷ ಮಳೆಯಾದಾಗ ಮತ್ತೆ ಬರುತ್ತಾರೆ, ಹೇಳುತ್ತಾರೆ ಅಷ್ಟೆ’ ಎಂದು ಬಾಣಸವಾಡಿಯ ಗೋಪಾಲರೆಡ್ಡಿ ಕೋಪದಿಂದ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.