ಸಿದ್ದರಾಮಯ್ಯ
ಬೆಂಗಳೂರು: ‘ನಗರದ ರಸ್ತ ಗುಂಡಿಗಳನ್ನು ಒಂದು ವಾರದೊಳಗೆ ಮುಚ್ಚಿಸಿ, ಒಂದು ಪದರ ಡಾಂಬರು ಹಾಕಿಸಿ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಗಾಂಧಿನಗರ ಕ್ಷೇತ್ರದ ವ್ಯಾಪ್ತಿಯ ಚಿಕ್ಕಪೇಟೆಯಲ್ಲಿ ₹54 ಕೋಟಿ ವೆಚ್ಚದಲ್ಲಿ ರಸ್ತೆಗಳ ವೈಟ್ ಟಾಪಿಂಗ್ ಸಹಿತ ನಾನಾ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿದ ಅವರು, ‘ಮಳೆಯಿಂದಾಗಿ ಹಾಳಾಗಿರುವ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಜತೆಗೆ ರಸ್ತೆಗಳ ದೀರ್ಘಬಾಳಿಕೆಗೆ ವೈಟ್ ಟಾಪಿಂಗ್‌ಗೂ ಅನುಮತಿ ನೀಡಲಾಗಿದೆ’ ಎಂದು ಹೇಳಿದರು.
‘ಬಿಜೆಪಿಯು ಅಧಿಕಾರದಲ್ಲಿದ್ದಾಗ ಒಂದು ಹೊಸ ರಸ್ತೆ ನಿರ್ಮಿಸಲಿಲ್ಲ. ರಸ್ತೆ ಗುಂಡಿಗೆ ಮಣ್ಣನ್ನೂ ಹಾಕಲಿಲ್ಲ. ಈಗ ಇರುವ ರಸ್ತೆಗಳೆಲ್ಲಾ ಕಾಂಗ್ರೆಸ್ ಸರ್ಕಾರ ಬಂದ ನಂತರದಲ್ಲಿ ಆಗಿರುವಂಥವು. ಆದರೂ ಬಿಜೆಪಿಯವರು ನಮ್ಮ ಮೇಲೆ ಸಾಲ ಹೊರಿಸಿ ಹೋದರು. ಸಾಲದ ಭಾರವನ್ನು ಸಹಿಸಿಕೊಂಡು ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ದಿಗೂ ಒತ್ತು ನೀಡಿದ್ದೇವೆ’ ಎಂದರು.
‘ಬೆಂಗಳೂರಿನ ಹೃದಯ ಭಾಗವಾಗಿರುವ ಈ ಪ್ರದೇಶವನ್ನು ಕೆಂಪೇಗೌಡರ ಕಾಲದಲ್ಲಿ ಪೇಟೆ ಭಾಗ ಎಂದೇ ಕರೆಯಲಾಗುತ್ತಿತ್ತು. ಈಗಲೂ ಹಿಂದಿನ ಸ್ವರೂಪವನ್ನೇ ಉಳಿಸಿಕೊಂಡಿವೆ. ರಸ್ತೆ ವಿಸ್ತರಿಸಿ ಅಭಿವೃದ್ದಿ ಮಾಡೋಣ ಎಂದಾಗ ದಿನೇಶ್ ಗುಂಡೂರಾವ್ ಒಪ್ಪಿಗೆ ನೀಡಲಿಲ್ಲ. ಈ ಭಾಗದ ಜನರಿಗೆ ಸಮಸ್ಯೆ ಆಗಲಿದೆ ಎನ್ನುವ ಕಾರಣ ನೀಡಿದ್ದರು. ಈಗ ಹಿಂದಿನ ಸ್ಥಿತಿ ಉಳಿಸಿಕೊಂಡು ವೈಜ್ಞಾನಿಕವಾಗಿ ಅಭಿವೃದ್ದಿಗೆ ಯೋಜನೆ ರೂಪಿಸಿದ್ಧಾರೆ’ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಪ್ರಮುಖ ವಹಿವಾಟು ಭಾಗವಾಗಿರುವ ಚಿಕ್ಕಪೇಟೆಯಲ್ಲಿ ಯಾವುದೇ ಕಟ್ಟಡಗಳನ್ನು ತೆರವು ಮಾಡದೇ ಎರಡು ವರ್ಷದೊಳಗೆ ಕಾಮಗಾರಿ ಮುಗಿಸುತ್ತೇವೆ. ಒಳಚರಂಡಿ, ಮಳೆ ನೀರು, ಅನಿಲ ಮಾರ್ಗವಲ್ಲದೇ ಬೆಂಕಿ ಅವಘಡ ತಡೆವ ಹೈಡ್ರೂಟ್ ಅನ್ನು ಸೇರಿಸಿ ವೈಜ್ಞಾನಿಕವಾಗಿ ಯೋಜನೆಯನ್ನು ರೂಪಿಸುತ್ತೇವೆ’ ಎಂದು ಹೇಳಿದರು.
ಸಚಿವ ಡಿ.ಸುಧಾಕರ್, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕ ವೆಂಕಟೇಶ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ನಗರಾಭಿವೃದ್ದಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.