ಮಕ್ಕಳ ಆಟಿಕೆಗಳು ಕಿತ್ತುಹೋಗಿರುವುದು
ರಾಜರಾಜೇಶ್ವರಿನಗರ: ಐಡಿಯಲ್ಸ್ ಹೋಮ್ಸ್ ಬಡಾವಣೆಯ ಉದ್ಯಾನದಲ್ಲಿ ಅಳವಡಿಸಿರುವ ಮಕ್ಕಳ ಆಟಿಕೆಗಳು, ಬೆಂಚುಗಳು, ವ್ಯಾಯಾಮ ಉಪಕರಣಗಳು ಕಿತ್ತುಹೋಗಿ ಹಲವು ವರ್ಷಗಳು ಕಳೆದಿದ್ದರೂ ದುರಸ್ತಿಯಾಗಿಲ್ಲ.
ರಾಜರಾಜೇಶ್ವರಿನಗರ ಬಿಬಿಎಂಪಿ ವಲಯ ಆಯುಕ್ತರ ಕಚೇರಿ ಮುಂಭಾಗದಲ್ಲಿರುವ ಉದ್ಯಾನವನ್ನು ಅಭಿವೃದ್ದಿಪಡಿಸುವಲ್ಲಿ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಉದ್ಯಾನದಲ್ಲಿ ಮಕ್ಕಳು ಆಟವಾಡಲು ಹಾಕಿರುವ ಆಟಿಕೆಗಳು, ವಾಯುವಿಹಾರ ನಡೆಸಿ ವೃದ್ದರು ಕೆಲನಿಮಿಷ ವಿಶ್ರಾಂತಿ ಪಡೆಯಲು ಹೆಂಚುಗಳನ್ನು ಅಳವಡಿಸಿರುವ ತೆರೆದ ವಿಶ್ರಾಂತಿ ಕಟ್ಟಡದ ಕಂಬಗಳು ತುಕ್ಕುಹಿಡಿದಿವೆ. ಬೀಳುವಂತಹ ಆತಂಕವಿದ್ದರೂ, ನಿತ್ಯವೂ ಇಲ್ಲೇ ಓಡಾಡುವ ಎಲ್ಲ ವಿಭಾಗದ ಎಂಜಿನಿಯರ್‌ಗಳು ಕಣ್ಣಿಗೆ ಕಾಣದಂತಾಗಿದೆ.
‘ನೂರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಮಾಡಲಾಗಿದೆ ಎಂದು ಜನಪ್ರತಿನಿಧಿ ಹೇಳುತ್ತಾರೆ. ಆದರೆ ವಲಯ ಆಯುಕ್ತರ ಕಚೇರಿ ಮುಂಭಾಗವಿರುವ ಉದ್ಯಾನ ಅವ್ಯವಸ್ಥೆಯಿಂದ ಕೂಡಿರುವುದು ಬೇಸರದ ಸಂಗತಿಯಾಗಿದೆ. ವಲಯ ಆಯುಕ್ತರ ಕಚೇರಿ ಮುಂಭಾಗದ ಉದ್ಯಾನ ಸ್ಥಿತಿ ಈ ರೀತಿಯಿಂದ ಕೂಡಿದೆ ಎಂಬುದನ್ನು ತೋರಿಸುತ್ತದೆ. ಇನ್ನೂ ಕ್ಷೇತ್ರ ಯಾವ ರೀತಿ ಅಭಿವೃದ್ದಿಯಾಗಿದೆ ಎಂಬುದಕ್ಕೆ ಉದಾಹರಣೆ ಬೇಕಾ’ ಎಂದು ಜಯಣ್ಣ ಬಡಾವಣೆಯ ಟಿ.ಇ. ಶ್ರೀನಿವಾಸ್ ಪ್ರಶ್ನಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ನಾಗರಾಜು, ‘ಪ್ರಮುಖ ಬಡಾವಣೆಯಲ್ಲಿರುವ ಉದ್ಯಾನದಲ್ಲಿ ಅಳವಡಿಸಿರುವ ತೆರೆದ ಜಿಮ್ ಉಪಕರಣಗಳು ಕಿತ್ತುಹೋಗಿವೆ. ಅಲ್ಪಸ್ವಲ್ಪ ಚೆನ್ನಾಗಿರುವ ಆಟಿಕೆಗಳಲ್ಲಿ ಮಕ್ಕಳು, ಮಹಿಳೆಯರು ಕಸರತ್ತು ನಡೆಸುವಾಗ ಬಿದ್ದುಗಾಯಗೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಮಹದೇವಯ್ಯ ಮಾತನಾಡಿ, ‘ಹಿರಿಯ ನಾಗರಿಕರು ವಾಕಿಂಗ್ ಮಾಡಿ ಕೆಲತಾಸು ವಿಶ್ರಾಂತಿಪಡೆಯಲು ಅಳವಡಿಸಿರುವ ಬೆಂಚು ಮತ್ತು ಬೆಂಚಿನ ಕಾಲುಗಳು ಕಿತ್ತುಹೋಗಿದ್ದರೂ, ದುರಸ್ತಿಪಡಿಸುವಲ್ಲಿ ಅಧಿಕಾರಿಗಳು ಮುಂದಾಗಿಲ್ಲ. ಮುಖ್ಯ ಆಯುಕ್ತರು ಎರಡು ಬಾರಿ ಉದ್ಯಾನ ಎದುರಿನ ಬಿಬಿಎಂಪಿ ಕಚೇರಿಯಲ್ಲಿ ಸಾರ್ವಜನಿಕರ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಆದರೆ ಈ ಉದ್ಯಾನದತ್ತ ಗಮನಹರಿಸಿಲ್ಲ’ ಎಂದು ದೂರಿದರು.
ಆರ್.ಆರ್.ನಗರ ವಿಭಾಗದ ತೋಟಗಾರಿಕೆ ಅಧೀಕ್ಷಕ ಕೇಶವ ಮಾತನಾಡಿ, ‘ಇತ್ತೀಚೆಗೆವರ್ಗಾವಣೆಯಾಗಿ ಬಂದಿದ್ದೇನೆ. ತುರ್ತಾಗಿ ದುರಸ್ತಿ ಕೆಲಸ ತೆಗೆದುಕೊಳ್ಳಲು ₹1 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಪ್ರಕ್ರಿಯೆ ಮುಗಿಯುತ್ತಿದಂತೆ ಹಂತ-ಹಂತವಾಗಿ ಕೆಲಸ ಕೈಗೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.