ADVERTISEMENT

ಚರಂಡಿಗೆ ಉರುಳಿದ ಕಾರು | ಇಬ್ಬರ ಸಾವು: ಚಿಕ್ಕಜಾಲದ ಸಾದಹಳ್ಳಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 14:03 IST
Last Updated 19 ಡಿಸೆಂಬರ್ 2025, 14:03 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಸಾದಹಳ್ಳಿಯಲ್ಲಿ ಗುರುವಾರ ತಡರಾತ್ರಿ ಕಾರೊಂದು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು, ಚರಂಡಿಗೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಆರ್.ಟಿ.ನಗರದ ಶಾಹಿದ್ ಅಹಮ್ಮದ್ ಖಾನ್ (22) ಮತ್ತು ಜೆ.ಸಿ.ನಗರದ ಸೈಯ್ಯದ್ ಅಬ್ದುಲ್ ರೆಹಮಾನ್ (24) ಮೃತಪಟ್ಟವರು.

ಮತ್ತೊಬ್ಬ ಯುವಕ ಬುರಾನ್ ಉದ್ದೀನ್ ಅವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಕಾಲ್‍ಸೆಂಟರ್ ಉದ್ಯೋಗಿಯಾಗಿದ್ದ ಶಾಹಿದ್ ಅಹಮದ್ ಖಾನ್ ಅವರು ಸ್ನೇಹಿತರಾದ ಸೈಯ್ಯದ್ ಅಬ್ದುಲ್ ರೆಹಮಾನ್ ಮತ್ತು ಬುರಾನ್ ಉದ್ದೀನ್ ಜತೆಗೆ ಊಟಕ್ಕೆಂದು ಹೋಟೆಲ್‌ಗೆ ಕಾರಿನಲ್ಲಿ ತೆರಳಿದ್ದರು. ಮನೆಗೆ ವಾಪಸ್ ಆಗುವಾಗ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.

ಶಾಹಿದ್ ಅವರು ಕಾರು ಚಾಲನೆ ಮಾಡುತ್ತಿದ್ದರು. ವೇಗವಾಗಿ ಬಂದ ಕಾರು ರಸ್ತೆ ಬದಿಯ ತಡೆಗೋಡೆಗೆ ಮೊದಲು ಡಿಕ್ಕಿಯಾಗಿದೆ. ಆಗ ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿಯಾಗಿ ಚರಂಡಿಗೆ ಉರುಳಿದೆ. ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

ಗುರುವಾರ ತಡರಾತ್ರಿ ಘಟನೆ ನಡೆದಿತ್ತು. ಕಿರಿದಾದ ಚರಂಡಿಯಲ್ಲಿ ಕಾರು ಸಿಲುಕಿಕೊಂಡಿದ್ದರಿಂದ ಕಾರ್ಯಾಚರಣೆ ನಡೆಸುವುದಕ್ಕೆ ಅಡ್ಡಿ ಆಗಿತ್ತು. ಸ್ಥಳಕ್ಕೆ ತೆರಳಿ ಜೆಸಿಬಿ ಯಂತ್ರ ಹಾಗೂ ಕ್ರೇನ್‍ ತರಿಸಿ ಕಾರನ್ನು ಮೇಲಕ್ಕೆ ಎತ್ತಲಾಯಿತು. ಶುಕ್ರವಾರ ಬೆಳಿಗ್ಗೆವರೆಗೂ ಕಾರ್ಯಾಚರಣೆ ನಡೆಸಲಾಯಿತು ಎಂದು ಸಂಚಾರ ಪೊಲೀಸರು ಹೇಳಿದರು.

ರಸ್ತೆಯ ತಿರುವಿನಲ್ಲಿ ಮೋರಿ ಇರುವುದನ್ನು ಗಮನಿಸದೇ ಕಾರು ಚಲಾಯಿಸಿರುವುದರಿಂದ ಕಾರು ತಡೆಗೋಡೆ ಹಾಗೂ ಮೋರಿಗೆ ಡಿಕ್ಕಿ ಹೊಡೆದಿರುವ ಸಾಧ್ಯತೆಗಳಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.