ADVERTISEMENT

ಬೆಂಗಳೂರು | ರಸ್ತೆಯಲ್ಲಿ ಗುಂಡಿ: ಉರುಳಿದ ಶಾಲಾ ಬಸ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 15:40 IST
Last Updated 12 ಸೆಪ್ಟೆಂಬರ್ 2025, 15:40 IST
ರಸ್ತೆಯಲ್ಲಿ ಬಿದ್ದಿರುವ ಗುಂಡಿಯಿಂದ ವಾಲಿದ ಶಾಲಾ ಬಸ್‌ 
ರಸ್ತೆಯಲ್ಲಿ ಬಿದ್ದಿರುವ ಗುಂಡಿಯಿಂದ ವಾಲಿದ ಶಾಲಾ ಬಸ್‌    

ಬೆಂಗಳೂರು: ನಗರದ ಪೂರ್ವ ವಿಭಾಗದ ಪಣತ್ತೂರು ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಗುಂಡಿ ತಪ್ಪಿಸಲು ಹೋಗಿ ಶಾಲಾ ಬಸ್‌ವೊಂದು ಉರುಳಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಬಸ್‌ನಲ್ಲಿ 20ಕ್ಕೂ ಹೆಚ್ಚು ಮಕ್ಕಳಿದ್ದರು. ಅವರು ತುರ್ತು ನಿರ್ಗಮನ ದ್ವಾರದ ಮೂಲಕ ಹೊರಗೆ ಬಂದಿದ್ದಾರೆ.

ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿತ್ತು. ನಿಧಾನವಾಗಿ ಬಸ್‌ ವಾಲುತ್ತಿರುವ ದೃಶ್ಯವು ಬಸ್‌ನಲ್ಲಿ ಅಳವಡಿಸಿದ್ದ ಡ್ಯಾಶ್‌ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ADVERTISEMENT

‘ಸ್ಥಳಕ್ಕೆ ಬೇರೊಂದು ಬಸ್ ತರಿಸಿಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಲಾಯಿತು. ಬಳಿಕ ಬಸ್‌ ಅನ್ನು ಮೇಲಕ್ಕೆ ಎತ್ತಲಾಯಿತು’ ಎಂದು ಪೊಲೀಸರು ಹೇಳಿದರು.

‘ಬೇರೊಂದು ಶಾಲೆಯ ಬಸ್ ಮುಂದೆ ತೆರಳುತ್ತಿತ್ತು. ಆ ಬಸ್‌ನ ಹಿಂದೆಯೇ ನ್ಯೂ ಹೊರೈಜಾನ್‌ ಶಾಲೆಯ ಬಸ್ ಬರುತ್ತಿತ್ತು. ಮುಂದೆ ವಾಹನಗಳು ನಿಂತಿದ್ದರಿಂದ ರಸ್ತೆಯ ಎಡಭಾಗದಿಂದ ಮುಂದಕ್ಕೆ ಸಾಗಲು ಚಾಲಕ ಎಡಕ್ಕೆ ಬಸ್ ಅನ್ನು ತಿರುಗಿಸಿದ್ದರು. ಆಗ ಗುಂಡಿಗೆ ಚಕ್ರಗಳು ಇಳಿದ ಪರಿಣಾಮ ಬಸ್‌ ಉರುಳಿತ್ತು’ ಎಂದು ಸ್ಥಳೀಯರು ತಿಳಿಸಿದ್ದಾರೆ.


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.