ಬಿಬಿಎಂಪಿ
ಬೆಂಗಳೂರು: ನಗರದಲ್ಲಿರುವ ಕೆರೆಗಳಿಗೆ ಕೊಳಚೆ ನೀರು ಬರುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
‘ಯಾವ ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದೆಯೋ ಅಂತಹ ಕಡೆಗಳಲ್ಲಿ ‘ತಿರುವು ಮಾರ್ಗ’ ಮಾಡಬೇಕು. ಕೆರೆಗಳ ಪಕ್ಕದಲ್ಲಿರುವ ಒಳಚರಂಡಿಗಳಿಂದ ಕೊಳಚೆ ನೀರು ಉಕ್ಕಿ ಹರಿಯುತ್ತಿರುವುದರಿಂದ ವಾಯುವಿಹಾರ ಮಾರ್ಗ ಹಾಳಾಗಿ, ಕೆರೆಗೆ ಕಲುಷಿತ ನೀರು ಸೇರುತ್ತಿದೆ. ಅದನ್ನು ತಪ್ಪಿಸಲು ಕೂಡಲೇ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು’ ಎಂದು ಅಧಿಕಾರಿಗಳ ಸಭೆಯಲ್ಲಿ ಹೇಳಿದರು.
ಕೊಳಚೆ ನೀರನ್ನು ಅನಧಿಕೃತವಾಗಿ ಮಳೆ ನೀರುಗಾಲುವೆಗಳಿಗೆ ಹರಿಸುತ್ತಿರುವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಲಮಂಡಳಿ ವತಿಯಿಂದ ನಡೆಯುತ್ತಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಸಿ) ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅದರಿಂದ ಸಂಸ್ಕರಣೆಯಾದ ನೀರನ್ನು ಮಾತ್ರ ಕೆರೆಗಳಿಗೆ ಬಿಡಬೇಕು ಎಂದರು.
ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ರಮೇಶ್, ರಮ್ಯಾ, ದಿಗ್ವಿಜಯ್ ಬೋಡ್ಕೆ ಉಪಸ್ಥಿತರಿದ್ದರು.
ಜಲಾವೃತ ತಪ್ಪಿಸಿ: ನಗರದಲ್ಲಿ ಮಳೆಗಾಲದ ವೇಳೆ ರಸ್ತೆಗಳಲ್ಲಿ ಜಲಾವೃತ ಆಗುವುದನ್ನು ತಪ್ಪಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಳೆಗಾಲದ ವೇಳೆ ಹೊರ ವರ್ತುಲ ರಸ್ತೆಗಳಲ್ಲಿ ಎಲ್ಲೆಲ್ಲಿ ಜಲಾವೃತವಾಗುತ್ತದೆಯೋ ಆ ಸ್ಥಳಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಹೆಬ್ಬಾಳ ಜಂಕ್ಷನ್, ನಾಗವಾರ ಜಂಕ್ಷನ್, ವಿದ್ಯಾಶಿಲ್ಪ ಜಂಕ್ಷನ್, ರೂಪೇನ ಅಗ್ರಹಾರ, ಮಾರತ್‌ಹಳ್ಳಿ ಪೊಲೀಸ್ ಠಾಣೆ, ಕಾರ್ತಿಕ್ ನಗರ, ಕಸ್ತೂರಿ ನಗರ ಮೇಲ್ಸೇತುವೆ, ಪ್ಯಾಲೆಸ್ ಗುಟ್ಟಹಳ್ಳಿ, ಪಣತ್ತೂರು ರೈಲ್ವೆ ಕೆಳಸೇತುವೆ, ನಾಯಂಡಹಳ್ಳಿ ಜಂಕ್ಷನ್, ಆರ್.ಆರ್ ನಗರ ಆರ್ಚ್, ಸುಮ್ಮನಹಳ್ಳಿ ಜಂಕ್ಷನ್ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಜಲಾವೃತವಾಗುವುದನ್ನು ತಪ್ಪಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.