ADVERTISEMENT

ಬೆಂಗಳೂರು | 78 ಸ್ಕೈವಾಕ್‌ ನಿರ್ಮಿಸಲು ಪ್ರಸ್ತಾವ: ಬಿಬಿಎಂಪಿಗೆ ಪೊಲೀಸರಿಂದ ಪತ್ರ

ಬಿಬಿಎಂಪಿಗೆ ಪತ್ರ ಬರೆದ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 19:38 IST
Last Updated 23 ಆಗಸ್ಟ್ 2025, 19:38 IST
ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯಿರುವ ಸ್ಕೈವಾಕ್‌ (ಸಂಗ್ರಹ ಚಿತ್ರ)  
ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯಿರುವ ಸ್ಕೈವಾಕ್‌ (ಸಂಗ್ರಹ ಚಿತ್ರ)     

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಇನ್ನೂ 78 ಸ್ಕೈವಾಕ್‌ ನಿರ್ಮಾಣ ಮಾಡುವಂತೆ ಕೋರಿ ಬಿಬಿಎಂಪಿಗೆ ನಗರ ಸಂಚಾರ ಪೊಲೀಸರು ಪತ್ರ ಬರೆದಿದ್ದಾರೆ.

ನಗರದ ವಿವಿಧ ಜಂಕ್ಷನ್‌ಗಳಲ್ಲಿ ಪ್ರಸ್ತುತ 82 ಸ್ಥಳಗಳಲ್ಲಿ ಸ್ಕೈವಾಕ್‌ಗಳಿವೆ. ಅವುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೋರಿ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಕಾರ್ತಿಕ್‌ ರೆಡ್ಡಿ ಅವರು ಬಿಬಿಎಂಪಿ ಕಮಿಷನರ್‌ ಎಂ.ಮಹೇಶ್ವರ್‌ ರಾವ್‌ ಅವರಿಗೆ ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.

ಪ್ರಮುಖ ರಸ್ತೆ, ಜಂಕ್ಷನ್‌ಗಳಲ್ಲಿ ಸ್ಕೈವಾಕ್‌ಗಳು ಇಲ್ಲ. ಇದರಿಂದ ಸಾವು–ನೋವು ಸಂಭವಿಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ರಸ್ತೆದಾಟುವ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ 768 ಪಾದಚಾರಿಗಳು ಮೃತಪಟ್ಟಿದ್ದಾರೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ADVERTISEMENT

‘ದಟ್ಟಣೆ ಹಾಗೂ ರಸ್ತೆದಾಟುವ ಪಾದಚಾರಿಗಳ ಸಂಖ್ಯೆಯನ್ನು ಆಧರಿಸಿ 78 ಸ್ಥಳಗಳನ್ನು ಗುರುತಿಸಲಾಗಿದೆ. ಬಳ್ಳಾರಿ ರಸ್ತೆಯ ಏಳು, ಹಳೇ ಮದ್ರಾಸ್‌ ರಸ್ತೆಯ ಆರು ಸ್ಥಳಗಳಲ್ಲಿ ಸ್ಕೈವಾಕ್‌ ನಿರ್ಮಿಸುವ ಅಗತ್ಯವಿದೆ’ ಎಂದು ಕಾರ್ತಿಕ್‌ ರೆಡ್ಡಿ ಹೇಳಿದರು.

‘ಕೆಲವು ಜಂಕ್ಷನ್‌ಗಳಲ್ಲಿ ಸದಾ ವಿಪರೀತ ವಾಹನ ದಟ್ಟಣೆ ಇರುತ್ತದೆ. ಜೀಬ್ರಾ ಕ್ರಾಸಿಂಗ್‌ ವ್ಯವಸ್ಥೆ ಇದ್ದರೂ ಪಾದಚಾರಿಗಳು ರಸ್ತೆದಾಟಲು ಪರದಾಡುತ್ತಿದ್ದಾರೆ. ಅಲ್ಲದೇ ಪಾದಚಾರಿಗಳು ರಸ್ತೆದಾಟುವ ಸಂದರ್ಭದಲ್ಲೂ ವಾಹನ ದಟ್ಟಣೆ ಆಗುತ್ತಿದೆ. ಸ್ಕೈವಾಕ್‌ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.

‘ಸಂಚಾರ ಪೊಲೀಸರಿಂದ ಪ್ರಸ್ತಾವ ಬಂದಿದ್ದು, ಕಾರ್ಯ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಬಿಬಿಎಂಪಿಯಿಂದ ಪ್ರತ್ಯೇಕ ಸರ್ವೇ ನಡೆಸಿ, ಸ್ಕೈವಾಕ್‌ ನಿರ್ಮಿಸುವ ಸ್ಥಳವನ್ನು ಗುರುತಿಸಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

‘ನಗರದ ಹಲವು ಸ್ಥಳಗಳಲ್ಲಿ ಈಗಾಗಲೇ ನಿರ್ಮಿಸಿರುವ ಸ್ಕೈವಾಕ್‌ಗಳನ್ನು ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ನಿರ್ಮಿಸಲಾಗಿದೆ. ಮುಂದೆಯೂ ಇದೇ ಮಾದರಿಯಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸುವ ಆಲೋಚನೆಯಿದೆ. ನಿರ್ಮಾಣಕ್ಕೆ ಮಾಡಲಾದ ವೆಚ್ಚವನ್ನು ಸ್ಕೈವಾಕ್‌ಗಳ ಮೇಲೆ ಪ್ರಕಟಿಸುವ ಜಾಹೀರಾತುಗಳ ಮೂಲಕ ಪಡೆದುಕೊಳ್ಳಬಹುದು’ ಎಂದು ಮೂಲಗಳು ತಿಳಿಸಿವೆ.

ಕೆಲವು ಸ್ಥಳಗಳಲ್ಲಿರುವ ಸ್ಕೈವಾಕ್‌ಗಳನ್ನು ಪಾದಚಾರಿಗಳು ಬಳಕೆ ಮಾಡಿಕೊಳ್ಳುತ್ತಿಲ್ಲ. ಇನ್ನೂ ಕೆಲವು ಸ್ಕೈವಾಕ್‌ಗಳ ನಿರ್ವಹಣೆಯಿಲ್ಲದೇ ಸೊರಗಿವೆ. ಸ್ವಚ್ಛತೆ ಇಲ್ಲ. ಲಿಫ್ಟ್‌ ಕೆಟ್ಟು ಹೋಗಿವೆ. ಲಿಫ್ಟ್‌ ಕೆಟ್ಟು ಹೋಗಿದ್ದರಿಂದ ಪಾದಚಾರಿಗಳ ಸ್ಕೈವಾಕ್‌ಗಳನ್ನು ಬಳಸುತ್ತಿಲ್ಲ’ ಎಂದು ನಾಗರಿಕರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.