ಬೆಂಗಳೂರು: ಯಶವಂತಪುರ–ಹೊಸಪೇಟೆ–ವಿಜಯಪುರ ನಡುವೆ ಆರು ವರ್ಷಗಳಿಂದ ಸಂಚರಿಸುತ್ತಿರುವ ವಿಶೇಷ ರೈಲನ್ನು, ಇದುವರೆಗೆ ಸಾಮಾನ್ಯ ರೈಲಾಗಿ ಪರಿವರ್ತಿಸಿಲ್ಲ. ಇದರಿಂದಾಗಿ ಪ್ರಯಾಣಿಕರು ಹೆಚ್ಚುವರಿಯಾಗಿ ಶೇ 30ರಷ್ಟು ದರ ಪಾವತಿಸುತ್ತಿದ್ದಾರೆ.
ಜನದಟ್ಟಣೆ ಹೆಚ್ಚು ಇರುವ ಸಂದರ್ಭಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಸಾಮಾನ್ಯ ರೈಲುಗಳಿಗಿಂತ ವಿಶೇಷ ರೈಲುಗಳಲ್ಲಿ ಟಿಕೆಟ್ ದರ ಶೇ 30ರಷ್ಟು ಹೆಚ್ಚಿರುತ್ತದೆ. ಹಬ್ಬ ಅಥವಾ ವಿಶೇಷ ದಿನಗಳಲ್ಲಿ ಸಂಚರಿಸುವ ವಿಶೇಷ ರೈಲುಗಳು ಸಾಂದರ್ಭಿಕವಾಗಿರುವುದರಿಂದ ಪ್ರಯಾಣಿಕರು ಈ ಬಗ್ಗೆ ಆಕ್ಷೇಪಿಸಿಲ್ಲ. ಆದರೆ, ನಿಯಮಿತವಾಗಿ ಸಂಚರಿಸುವ ವಿಶೇಷ ರೈಲುಗಳನ್ನು ಸಾಮಾನ್ಯ ರೈಲುಗಳಾಗಿ ಬದಲಾಯಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈಲುಗಳನ್ನು ಮೂರು ತಿಂಗಳು, ಆರು ತಿಂಗಳು ಓಡಿಸಿ ಜನಸಂಚಾರ ಕಡಿಮೆ ಇದ್ದರೆ ನಿಗದಿಯಾದ ತಾತ್ಕಾಲಿಕ ಸಮಯ ಮುಗಿದ ಬಳಿಕ ರದ್ದು ಮಾಡುವ, ಜಾಸ್ತಿ ಇದ್ದರೆ ಸಾಮಾನ್ಯ ರೈಲುಗಳಾಗಿ ಪರಿವರ್ತಿಸುವ ಪದ್ಧತಿ ರೈಲ್ವೆಯಲ್ಲಿ ಇತ್ತು. ಆದರೆ, ಕೋವಿಡ್–19 ನಂತರ ವಿಶೇಷ ರೈಲುಗಳನ್ನು ಸಾಮಾನ್ಯ ರೈಲುಗಳಾಗಿ ಪರಿವರ್ತಿಸುವ ಕ್ರಮವನ್ನೇ ಮರೆತುಬಿಟ್ಟಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಯಶವಂತಪುರ–ವಿಜಯಪುರ, ಮಂಗಳೂರು–ವಿಜಯಪುರ ಸಹಿತ ಹಲವು ವಿಶೇಷ ರೈಲುಗಳು ಆರಂಭವಾಗಿದ್ದವು. ಆ ನಂತರ ರೈಲ್ವೆ ಸಚಿವರಾದವರು ಈ ರೈಲುಗಳ ಬಗ್ಗೆ ಗಮನಹರಿಸಿಲ್ಲ. ಅಧಿಕಾರಿಗಳು ಕೂಡ ವಿಶೇಷ ರೈಲಿನ ಅವಧಿಯನ್ನು ವಿಸ್ತರಿಸುತ್ತಾ ಬಂದರೇ ವಿನಃ ಸಾಮಾನ್ಯ ರೈಲಾಗಿ ಪರಿವರ್ತಿಸಲಿಲ್ಲ. ಕರಾವಳಿ ಭಾಗದ ಸಂಸದರ ಒತ್ತಡದಿಂದಾಗಿ ಮಂಗಳೂರು–ವಿಜಯಪುರ ವಿಶೇಷ ರೈಲು ಆರು ವರ್ಷಗಳ ಬಳಿಕ ಸಾಮಾನ್ಯ ರೈಲಾಗಿ ಈ ತಿಂಗಳ ಆರಂಭದಲ್ಲಿ ಪರಿವರ್ತನೆಗೊಂಡಿತು. ಉಳಿದ ಪ್ರದೇಶಗಳ ಜನಪ್ರತಿನಿಧಿಗಳು ಈ ರೀತಿ ಒತ್ತಡ ಹಾಕದೇ ಇರುವುದರಿಂದ ಹಾಗೇ ಉಳಿದಿವೆ ಎಂದು ರೈಲ್ವೆ ಹೋರಾಟಗಾರ ಕೆ.ಎನ್. ಕೃಷ್ಣಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
20 ವಿಶೇಷ ರೈಲು: ನೈರುತ್ಯ ರೈಲ್ವೆಯ ಬೆಂಗಳೂರು, ಹುಬ್ಬಳ್ಳಿ, ಮೈಸೂರು ವಿಭಾಗಗಳಲ್ಲಿ ಸಾರಿಗೆ-ಆಧಾರಿತ ಅಭಿವೃದ್ಧಿ (ಟಿಒಡಿ) ಆಧಾರದಲ್ಲಿ ಸುಮಾರು 20 ವಿಶೇಷ ರೈಲುಗಳು ಸಂಚರಿಸುತ್ತಿವೆ. ‘0’ (ಸೊನ್ನೆ) ಯಿಂದ ಆರಂಭವಾಗುವ ಸಂಖ್ಯೆಯನ್ನು ಹೊಂದಿರುವ ಎಲ್ಲ ರೈಲುಗಳು ವಿಶೇಷ ರೈಲುಗಳಾಗಿವೆ.
‘ಟಿಒಡಿ ರೈಲುಗಳನ್ನು ಪರಿವರ್ತಿಸುವ ಬಗ್ಗೆ ವಿಭಾಗ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳುವಂತಿಲ್ಲ. ರೈಲ್ವೆ ಮಂಡಳಿಯಲ್ಲೇ ನಿರ್ಧಾರ ಕೈಗೊಳ್ಳಬೇಕು. ರೈಲ್ವೆ ಮಂಡಳಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ರೈಲ್ವೆ ಮಂಡಳಿ ಸಭೆಗಳಲ್ಲಿ, ಐಆರ್‌ಸಿಟಿಸಿ ಸಭೆಗಳಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಒಂದೊಂದೇ ರೈಲು ಪರಿವರ್ತನೆಯಾಗುತ್ತಿದೆ’ ಎಂದು ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮರಡಿ ತಿಳಿಸಿದರು.
ಅಧಿಕ ದರ ಪಾವತಿ
ಬೆಂಗಳೂರಿನಿಂದ ಹುಬ್ಬಳ್ಳಿಗೆ ರಾಣಿ ಚನ್ನಮ್ಮ ರೈಲಿನಲ್ಲಿ 3 ಟೈರ್ ಎಸಿಯಲ್ಲಿ ಸಂಚರಿಸಿದರೆ ₹765 ಟಿಕೆಟ್ ದರವಿದೆ. ಬೆಳಗಾವಿ ಸೂಪರ್ ಫಾಸ್ಟ್‌ನಲ್ಲಿ ಸಂಚರಿಸಿದರೆ ₹800 ಇದೆ. ಅದೇ ವಿಶೇಷ ರೈಲಿನಲ್ಲಿ ಸಂಚರಿಸಬೇಕಿದ್ದರೆ ₹1055 ನೀಡಬೇಕಾಗುತ್ತದೆ. ಇದೇ ರೀತಿ ಸಾಮಾನ್ಯ ಬೋಗಿಯಿಂದ ಹಿಡಿದು ಎಲ್ಲದಕ್ಕೂ ಶೇ 30ರಷ್ಟು ಹೆಚ್ಚು ಪಾವತಿಸಿ ಪ್ರಯಾಣಿಸಬೇಕಾಗುತ್ತದೆ. ವಿಜಯಪುರ ಬಾಗಲಕೋಟೆ ಸಹಿತ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಂದ ಕಾರ್ಮಿಕರು ಬೆಂಗಳೂರಿಗೆ ಬರುತ್ತಾರೆ.
ಸಾಮಾನ್ಯ ರೈಲುಗಳಾದರೆ ಅವರಿಗೆ ಸ್ವಲ್ಪ ಹಣ ಉಳಿತಾಯವಾಗುತ್ತದೆ. ಟಿಒಡಿ ರೈಲುಗಳನ್ನು ಸಾಮಾನ್ಯ ರೈಲುಗಳನ್ನಾಗಿ ಮಾಡಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವರ ನೈರುತ್ಯ ರೈಲ್ವೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಗಮನಹರಿಸಿ ಸಾಮಾನ್ಯ ರೈಲುಗಳನ್ನಾಗಿ ಪರಿವರ್ತಿಸಬೇಕು ಎಂದು ರೈಲ್ವೆ ಹೋರಾಟಗಾರ ಕೆ.ಎನ್. ಕೃಷ್ಣಪ್ರಸಾದ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.