ಪಿಟಿಐ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ವಿಚಾರಣಾಧಿಕಾರಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಶುಕ್ರವಾರ ಪ್ರತ್ಯಕ್ಷದರ್ಶಿಗಳು ಹಾಗೂ ಸಾರ್ವಜನಿಕರ ಹೇಳಿಕೆಯನ್ನು ದಾಖಲಿಸಿಕೊಂಡರು.
ಕಾಲ್ತುಳಿತ ಘಟನೆ ನೋಡಿದ್ದ ಕೆಲವರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿಶೇಷ ನ್ಯಾಯಾಲಯಕ್ಕೆ ಬಂದು, ಲಿಖಿತ ಹೇಳಿಕೆ ನೀಡಿದರು. ಕ್ರೀಡಾಂಗಣ ಸೇರಿದಂತೆ ವಿವಿಧ ಕಡೆ ಬಂದೋಬಸ್ತ್ ಕೈಗೊಂಡಿದ್ದ ಕಬ್ಬನ್ ಪಾರ್ಕ್ ಟ್ರಾಫಿಕ್ ಇನ್‍ಸ್ಪೆಕ್ಟರ್ ಬಿ.ರವಿ ಅವರು ಹೇಳಿಕೆ ದಾಖಲಿಸಿದರು.
ಆರ್‌ಸಿಬಿ ವಿಜಯೋತ್ಸವ ವೇಳೆ ಎಷ್ಟು ಸಿಬ್ಬಂದಿ ನಿಯೋಜಿಸಲಾಗಿತ್ತು? ಯಾವ ವೃತ್ತ, ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂಬ ಬಗ್ಗೆ ಗುರುತಿಸಲಾಗಿತ್ತು? ಎಂದು ಪ್ರಶ್ನಿಸಲಾಯಿತು.
ಜಿಲ್ಲಾಧಿಕಾರಿ ಜಿ.ಜಗದೀಶ್ ಶುಕ್ರವಾರ ಮತ್ತೆ ಡಿಎನ್‍ಎ ಎಂಟರ್‌ಟೈನ್ಮೆಂಟ್ ಸಂಸ್ಥೆಯ ಭದ್ರತಾ ವಿಭಾಗದ ವ್ಯವಸ್ಥಾಪಕ ಸತೀಶ್ ಅವರನ್ನು ಒಂದು ತಾಸಿಗೂ ಹೆಚ್ಚು ವಿಚಾರಣೆ ನಡೆಸಿದರು.
‘ಕ್ರೀಡಾಂಗಣದ ಬಳಿ 585 ಡಿಎನ್‍ಎ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಪೊಲೀಸರು, ಬಂದೋಬಸ್ತ್ ನಡೆಸಿದ್ದ ಕ್ರೀಡಾಂಗಣದ ಹೊರಗಿನ ಗೇಟ್‍ಗಳಲ್ಲಿ ಘಟನೆ ನಡೆದಿದೆ‘ ಎಂದು ಸತೀಶ್ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಡಿಎನ್‍ಎ ಕಂಪನಿಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವಿಚಾರಣೆ ಬಹುತೇಕ ಮುಗಿದಿದೆ. ಈವರೆಗೆ ತನಿಖಾಧಿಕಾರಿಗಳು ನೀಡಿರುವ ಎಲ್ಲ ನೋಟಿಸ್‍ಗೆ ಹಾಜರಾಗಿ ಹೇಳಿಕೆ ದಾಖಲಿಸಲಾಗಿದೆ’ ಎಂದು ಡಿಎನ್‍ಎ ಪರ ವಕೀಲರಾದ ನಿಮಿಷಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.