ಎಫ್‌ಐಆರ್
ಬೆಂಗಳೂರು: ವಿದ್ಯಾರ್ಥಿಗೆ ಪಿವಿಸಿ ಪೈಪ್‌ನಿಂದ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ್ದ ಆರೋಪದ ಅಡಿ ಸುಂಕದಕಟ್ಟೆಯ ಹೊಯ್ಸಳ ನಗರದ ಪೈಪ್‌ಲೈನ್ ರಸ್ತೆಯ ಸೇಂಟ್ ಮೇರೀಸ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ, ಪ್ರಿನ್ಸಿಪಾಲ್ ಹಾಗೂ ಶಾಲಾ ಶಿಕ್ಷಕಿಯ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹೊಯ್ಸಳನಗರದ ಪೋಷಕರೊಬ್ಬರು ನೀಡಿದ ದೂರು ಆಧರಿಸಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ ಸೆಕ್ಷನ್ 75 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 118(1), 351 (2), 3(5) ಅಡಿ ಶಾಲೆಯ ಪ್ರಿನ್ಸಿಪಾಲ್ ರಾಕೇಶ್‌ಕುಮಾರ್, ಶಿಕ್ಷಕಿ ಚಂದ್ರಿಕಾ ಹಾಗೂ ಕಾರ್ಯದರ್ಶಿ ವಿಜಯ್‌ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಪುತ್ರನಿಗೆ ಒಂಬತ್ತು ವರ್ಷ. ಮೂರು ವರ್ಷದಿಂದ ಸೇಂಟ್ ಮೇರೀಸ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಾನೆ. ಸಕಾಲದಲ್ಲಿ ಶುಲ್ಕವನ್ನೂ ಪಾವತಿಸುತ್ತಿದ್ದೇವೆ. ಅ.14ರ ಸಂಜೆ 4ರಿಂದ 5 ಗಂಟೆಯ ಸಮಯದಲ್ಲಿ ಮಗನಿಗೆ ಪ್ರಿನ್ಸಿಪಾಲ್ ರಾಕೇಶ್‌ಕುಮಾರ್ ಅವರು ಪಿವಿಸಿ ಪೈಪ್‌ನಿಂದ ಮನಸೋ ಇಚ್ಛೆ ರಕ್ತ ಹೆಪ್ಪುಗಟ್ಟುವಂತೆ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕಿ ಚಂದ್ರಿಕಾ ಹಾಗೂ ಕಾರ್ಯದರ್ಶಿ ವಿಜಯಕುಮಾರ್ ಅವರು ಸ್ಥಳದಲ್ಲೇ ಇದ್ದರೂ ತಡೆದಿಲ್ಲ. ಚಿತ್ರಹಿಂಸೆ ನೀಡಿದ್ದನ್ನು ಪ್ರಶ್ನಿಸಿದಾಗ, ನಮ್ಮ ಶಾಲೆಯಲ್ಲಿ ಇದೇ ರೀತಿ ಟ್ರೀಟ್‌ಮೆಂಟ್ ಕೊಡುವುದು. ಜಾಸ್ತಿ ಮಾತನಾಡಿದರೆ ನಿಮಗೂ ಒಂದು ಗತಿಕಾಣಿಸುತ್ತೇವೆ. ಬೇಕಿದ್ದರೆ ವರ್ಗಾವಣೆ ಪತ್ರ (ಟಿ.ಸಿ) ತೆಗೆದುಕೊಂಡು ಹೋಗಿ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಪೋಷಕರೊಬ್ಬರು ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.