ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಬೆಂಗಳೂರು: ಉತ್ತರಹಳ್ಳಿ ಮುಖ್ಯ ರಸ್ತೆಯ ಅಪಾರ್ಟ್‍ಮೆಂಟ್‍ನ ಏಳನೇ ಮಹಡಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಬಿದ್ದು ಮೃತಪಟ್ಟಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕೇರಳದ ಜಾಕೂಬ್ ಜಾನ್ ಎಂಬುವರ ಪುತ್ರ ರಿಯಾನ್ ಜಾಕೂಬ್ (15) ಮೃತಪಟ್ಟ ಬಾಲಕ.
ಜಾಕೂಬ್ ಜಾನ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಉತ್ತರಹಳ್ಳಿ ಮುಖ್ಯರಸ್ತೆಯ ಅಪಾರ್ಟ್‍ಮೆಂಟ್‍ನಲ್ಲಿ ನೆಲಸಿದ್ದಾರೆ ಎಂದು ಪೊಲೀಸರು ಹೇಳಿದರು.
ಖಾಸಗಿ ಶಾಲೆಯಲ್ಲಿ ರಿಯಾನ್ ಜಾಕೂಬ್ ಎಸ್ಸೆಸ್ಸೆಲ್ಸಿ ಓದುತ್ತಿದ್ದ. ಶಾಲೆಯಲ್ಲಿ ಜ.31ರಂದು ಕಾರ್ಯಕ್ರಮ ಇತ್ತು. ಆ ಕಾರ್ಯಕ್ರಮಕ್ಕೆ ರಿಯಾನ್ ಜಾಕೂಬ್ ತೆರಳಿದ್ದ. ಕಾರ್ಯಕ್ರಮ ಮುಕ್ತಾಯವಾದ ಮೇಲೆ ಸ್ನೇಹಿತರ ಜತೆಗೆ ಪಬ್‌ಗೆ ತೆರಳಿದ್ದ. ರಾಜರಾಜೇಶ್ವರಿ ನಗರದ ಪಬ್‍ಗೆ ಹೋಗಿ ಸ್ನೇಹಿತರೆಲ್ಲರೂ ಮದ್ಯಪಾನ ಮಾಡಿದ್ದರು. ನಂತರ ರಿಯಾನ್, ಸ್ನೇಹಿತರನ್ನು ಪಬ್‍ನಿಂದ ಕಳುಹಿಸಿ, ಅಪಾರ್ಟ್‍ಮೆಂಟ್‍ಗೆ ಹಿಂದಿರುಗಿದ್ದ ಎಂದು ಪೊಲೀಸರು ಹೇಳಿದರು.
ಅಪಾರ್ಟ್‍ಮೆಂಟ್‍ನ 7ನೇ ಮಹಡಿಯಲ್ಲಿ ಜಾಕೂಬ್ ಜಾನ್ ಅವರ ಫ್ಲ್ಯಾಟ್ ಇದೆ. ಅಲ್ಲಿಗೆ ಲಿಫ್ಟ್‌ನಲ್ಲಿ ತೆರಳಿದ್ದ ವಿದ್ಯಾರ್ಥಿ, ಅಲ್ಲಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.
‘ಮದ್ಯದ ನಶೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರಿಯಾನ್ ಶಾಲೆಯಲ್ಲಿ ಪರೀಕ್ಷೆಯಿತ್ತು. ಪರೀಕ್ಷೆಯ ಭಯದಿಂದ ಏನಾದರೂ ಈ ರೀತಿ ಮಾಡಿಕೊಂಡಿದ್ದಾನೆಯೇ ಎಂಬ ಆಯಾಮದಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಪಬ್ ವಿರುದ್ಧ ಎಫ್‌ಐಆರ್: ಮದ್ಯಪಾನ ಮಾಡಲು ಅವಕಾಶ ನೀಡಿದ್ದ ಪಬ್ ಮಾಲೀಕರ ವಿರುದ್ಧ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ರನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ವಿದ್ಯಾರ್ಥಿಯ ತಂದೆ, ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ವಿದ್ಯಾರ್ಥಿ ಪಬ್‌ವೊಂದರಲ್ಲಿ ಸ್ನೇಹಿತರೊಂದಿಗೆ ಮದ್ಯಪಾನ ಹಾಗೂ ಧೂಮಪಾನ ಮಾಡಿರುವುದನ್ನು ಪತ್ತೆಹಚ್ಚಿದ್ದಾರೆ.
ಬಾಲಕನಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಪಬ್ ಮಾಲೀಕರು ಹಾಗೂ ಸಿಬ್ಬಂದಿಯ ವಿರುದ್ಧ ಬಾಲ ನ್ಯಾಯ ಕಾಯ್ದೆ ಹಾಗೂ ಅಬಕಾರಿ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.