
‘ನಾಯಕತ್ವದಲ್ಲಿ ಮಹಿಳೆಯರು’ ಗೋಷ್ಠಿಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಮಾತನಾಡಿದರು. ಇಂಕ್ ಟಾಕ್ಸ್ ಸಂಸ್ಥಾಪಕಿ ಲಕ್ಷ್ಮಿ ಪ್ರತುರಿ, ಅಕ್ಸೆಂಚರ್ ಹ್ಯೂಮನ್ ರಿಸೋರ್ಸ್ ವ್ಯವಸ್ಥಾಪಕ ನಿರ್ದೇಶಕಿ ಹೇಮ್ ಕನ್ವರ್ ಮತ್ತು ಆರಿತಾಬಿ ಆರ್ಗ್ ವ್ಯವಸ್ಥಾಪಕ ನಿರ್ದೇಶಕಿ ಶ್ರೇಯಾ ಕೃಷನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ದೈಹಿಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿಯೂ ವೈಕಲ್ಯ ಇರುವವರಿಗೆ ನೆರವಾಗಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆಯಾಗಬೇಕು. ಅಂಥ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕು.
‘ಅವಿಭಾಜ್ಯ ಅಂಗವಾಗಿ ಒಳಗೊಳ್ಳುವಿಕೆ: ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಕಾರ್ಯಪಡೆ ಮೂಲಕ ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಮತ್ತು ಎಐ ಬಳಕೆ’ ಗೋಷ್ಠಿಯಲ್ಲಿ ಮೂಡಿಬಂದ ಅಭಿಪ್ರಾಯವಿದು.
ಕಣ್ಣಿಗೆ ಕಾಣುವ ವೈಕಲ್ಯವಷ್ಟೇ ಅಲ್ಲ, ಕಣ್ಣಿಗೆ ಕಾಣದ ವೈಕಲ್ಯಗಳ ಬಗ್ಗೆಯೂ ಗಮನಹರಿಸಬೇಕು. ಅಂಗವೈಕಲ್ಯವು ಕಾಣುತ್ತದೆ. ಆದರೆ, ಮಿದುಳಿಗೆ ಸಂಬಂಧಿಸಿದ ಸಮಸ್ಯೆ ಗೊತ್ತಾಗುವುದಿಲ್ಲ. ಇಂಥ ಸಮಸ್ಯೆಗಳನ್ನು ಹೊಂದಿರುವವರನ್ನು ಸಬಲೀಕರಣಗೊಳಿಸುವುದು ಹೇಗೆ ಎಂದು ಮೊದಲು ಚಿಂತನೆ ನಡೆಸಬೇಕು. ಜೊತೆಗೆ ಅವರಲ್ಲಿರುವ ಪ್ರತಿಭೆಗಳು ಅರಳಲು ಯಾವ ರೀತಿಯ ತಾಂತ್ರಿಕ ಪ್ರೋತ್ಸಾಹ ಅಗತ್ಯ ಎಂಬುದನ್ನು ಕಂಡುಕೊಳ್ಳಬೇಕು ಎಂದು ತಜ್ಞರು ತಿಳಿಸಿದರು.
ಒಳಗೊಳ್ಳುವಿಕೆಯ ಅರ್ಥ ಇನ್ನಷ್ಟು ವಿಸ್ತಾರಗೊಳ್ಳಬೇಕು. ಅಂಗವಿಕಲರೂ ಸೇರಿದಂತೆ ಯಾರೂ ಆಧುನಿಕ ಜಗತ್ತಿನ ಸೌಲಭ್ಯಗಳಿಂದ, ಅವಕಾಶಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾದ ರಾಹುಲ್ ಶಾ, ಜಿಗರ್ ಜೋಬನ್‌ಪುತ್ರ, ಸೌಮಿತ ಬಸು, ಅಮಿತ್ ಪ್ರಕಾಶ್, ರವಿ ನಾರಾಯಣ್, ಜವಾಹರ್ ಬೀಕೆ ಸಂವಾದದಲ್ಲಿ ಪಾಲ್ಗೊಂಡರು.
‘ಇ.ವಿಗೂ ಬರಲಿದೆ ಎಐ’
ವಿದ್ಯುತ್ ಚಾಲಿತ ವಾಹನಗಳು (ಇವಿ) ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ವಾಹನಗಳೂ ಆಗಿರಲಿವೆ. ತಂತ್ರಜ್ಞಾನದ ವೇಗ ನೋಡಿದರೆ ಇದಕ್ಕೆ ಬಹಳ ಸಮಯ ಹಿಡಿಯಲಾರದು ಎಂಬುದು ‘ಎಲೆಕ್ಟ್ರಿಕ್ ಮೊಬಿಲಿಟಿ’ ಗೋಷ್ಠಿಯ ಒಟ್ಟಾರೆ ಅಭಿಪ್ರಾಯವಾಗಿ ಮೂಡಿಬಂತು. ವಿದ್ಯುತ್ ಚಾಲಿತ ವಾಹನಗಳೇ ಮುಂದಿನ ಸಾರಿಗೆಯಾಗಿದೆ. ಈಗ ಹೇಗೆ ಪೆಟ್ರೋಲ್ ಬಂಕ್‌ಗಳು ಕಿಲೋಮೀಟರ್‌ಗೊಂದರಂತೆ ಇವೆಯೋ ಅದೇ ರೀತಿ ಚಾರ್ಜಿಂಗ್ ಪಾಯಿಂಟ್‌ಗಳು ಕೂಡ ಕಿಲೋಮೀಟರ್‌ಗೊಂದು ದೊರೆತಾಗ ಎಲ್ಲರಲ್ಲೂ ಇ.ವಿಗಳಿರಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟರು.
ಒನ್‌ಟ್ಯಾಕ್ ಸರ್ಕೀಟ್‌ಗೆ ಚಾಲನೆ
ಅನುಭವ ಆರ್ಥಿಕತೆಗಾಗಿ ಭಾರತದ ಪ್ರಮುಖ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವಾದ ಒನ್‌ಟ್ಯಾಕ್‌ಗೆ (ಪ್ರವಾಸೋದ್ಯಮ ಕಲೆ ಮತ್ತು ಸಂಸ್ಕೃತಿ) ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಬುಧವಾರ ಚಾಲನೆ ನೀಡಲಾಯಿತು. ಉಡುಪಿಯಲ್ಲಿ ತನ್ನ ಮೊದಲ ಅನುಭವ ಸರ್ಕೀಟ್ ಅನ್ನು ಪ್ರಾರಂಭಿಸಿತು. ಕರ್ನಾಟಕ ವಿಷನ್ ಗ್ರೂಪ್ ಆನ್ ಸ್ಟಾರ್ಟ್ ಅಪ್‌ಗಳ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಕಾರ್ಯದರ್ಶಿ ತ್ರಿಲೋಕ ಚಂದ್ರ ಚಾಲನೆ ನೀಡಿದರು. ಭವಿಷ್ಯೋದ್ಯಮಿಗಳ ನೆರವಿಗೆ ಸ್ಟಾರ್ಟ್‌ಅಪ್ ಸ್ಕೂಲ್ ಸ್ಟಾರ್ಟ್ ಅಪ್ ಮೂಲಕ ಭವಿಷ್ಯದಲ್ಲಿ ನವೋದ್ಯಮವನ್ನು ಆರಂಭಿಸುವವರಿಗೆ ನೆರವಾಗಲು ಸ್ಟಾರ್ಟ್ ಅಪ್ ಸ್ಕೂಲ್ ತಯಾರಾಗಿದೆ. ಐಕ್ವ್ ವೆಂಚರ್ಸ್ ಸಂಸ್ಥೆಯು ಸಹಯೋಗದಲ್ಲಿ ರೂಪಿಸಿ ಅಭಿವೃದ್ಧಿಪಡಿಸಿರುವ ಸ್ಟಾರ್ಟ್‌ಅಪ್ ಪಾರ್ಕ್ (ಸ್ಕೂಲ್) ಭಾರತದ ಮೊದಲ ಸಮಗ್ರ ಸ್ಟಾರ್ಟ್‌ಅಪ್ ಇನೋವೇಶನ್ ಹಬ್ ಆಗಿದ್ದು ಇಂಕ್ಯುಬೇಷನ್ ಮೆಂಟರ್‌ಶಿಪ್ ಹೂಡಿಕೆದಾರರ ಸಂಪರ್ಕ ಮತ್ತು ಅಂತರರಾಷ್ಟ್ರೀಯ ನೆಟ್‌ವರ್ಕಿಂಗ್ ಸೇರಿದಂತೆ ನಾನಾ ಸಹಾಯ ಮೂಲಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ. ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಇದಕ್ಕೆ ಚಾಲನೆ ದೊರೆತಿದ್ದು ಮಡಿವಾಳದಲ್ಲಿ ಕಾರ್ಯನಿರ್ವಹಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.