ADVERTISEMENT

Bengaluru Tech Summit 2025 | ಡೀಪ್‌ ಟೆಕ್‌: ₹400 ಕೋಟಿ ನೆರವು

ಚಿಂತನ–ಮಂಥನಗಳೊಂದಿಗೆ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ತೆರೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 0:30 IST
Last Updated 21 ನವೆಂಬರ್ 2025, 0:30 IST
<div class="paragraphs"><p>ರಾಷ್ಟ್ರೀಯ ಬಾಹ್ಯಾಕಾಶ ಸೊಸೈಟಿ (ಎನ್‌ಎಸ್‌ಎಸ್) ಬಾಹ್ಯಾಕಾಶ ವಸಾಹತು ವಿನ್ಯಾಸ ಸ್ಪರ್ಧೆಯ&nbsp;ಎಂಟನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಕಲಬುರಗಿಯ ಎಸ್.ಆರ್.ಎನ್. ಮೆಹ್ತಾ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳನ್ನು ಶುಭಾಂಶು ಶುಕ್ಲಾ&nbsp; ಗೌರವಿಸಿದರು. ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದಾರು. </p></div>

ರಾಷ್ಟ್ರೀಯ ಬಾಹ್ಯಾಕಾಶ ಸೊಸೈಟಿ (ಎನ್‌ಎಸ್‌ಎಸ್) ಬಾಹ್ಯಾಕಾಶ ವಸಾಹತು ವಿನ್ಯಾಸ ಸ್ಪರ್ಧೆಯ ಎಂಟನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಕಲಬುರಗಿಯ ಎಸ್.ಆರ್.ಎನ್. ಮೆಹ್ತಾ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳನ್ನು ಶುಭಾಂಶು ಶುಕ್ಲಾ  ಗೌರವಿಸಿದರು. ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದಾರು.

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ತಂತ್ರಜ್ಞಾನ ಜಗತ್ತಿನ ಭವಿಷ್ಯ ದಿಕ್ಕುಗಳಿಗೆ ನಿರ್ಣಾಯಕವಾಗಿರುವ ಡೀಪ್‌ ಟೆಕ್‌ ನವೋದ್ಯಮಗಳಿಗೆ ₹400 ಕೋಟಿ ಸಹಾಯಾನುದಾನ ಒದಗಿಸುವುದರೊಂದಿಗೆ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಗುರುವಾರ ತೆರೆಬಿದ್ದಿತು.

ADVERTISEMENT

ತಂತ್ರಜ್ಞಾನ ಶೃಂಗಸಭೆಯ ಸಮಾರೋಪದ ಭಾಗವಾಗಿ ನಡೆದ ‘ಭವಿಷ್ಯ ರೂಪಿಸುವವರ ಸಮಾವೇಶ’ದಲ್ಲಿ ಈ ಸಹಾಯಾನುದಾನವನ್ನು ಘೋಷಿಸಲಾಯಿತು. ರಾಜ್ಯ ಸರ್ಕಾರ ಮತ್ತು ನವೋದ್ಯಮಗಳ ಆರಂಭಕ್ಕೆ ಬಂಡವಾಳ ಒದಗಿಸುವವರು (ವೆಂಚರ್‌ ಕ್ಯಾಪಿಟಲಿಸ್ಟ್ಸ್‌) ಸೇರಿ ರೂಪಿಸಿರುವ ನಿಧಿಯಿಂದ ಈ ನೆರವನ್ನು ಘೋಷಿಸಲಾಯಿತು.

ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ‘ಮುಂದಿನ ದಶಕವು ವೈಜ್ಞಾನಿಕ ನಾವೀನ್ಯವನ್ನು ಆಧರಿಸಿದ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್‌, ಕ್ವಾಂಟಂ ಕಂಪ್ಯೂಟಿಂಗ್‌ ಮತ್ತು ಜೈವಿಕ ತಂತ್ರಜ್ಞಾನಗಳ ಯುಗವಾಗಿರಲಿದೆ. ಬೆಂಗಳೂರು ತಂತ್ರಜ್ಞಾನ ಶೃಂಗವು ಅದಕ್ಕೆ ಮುನ್ನುಡಿ ಬರೆದಿದೆ’ ಎಂದರು.

‘ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶ ಹಾಗೂ ಮಾರುಕಟ್ಟೆ ಸೃಷ್ಟಿಸುವಲ್ಲಿ ಡೀಪ್‌ ಟೆಕ್‌ ಆವಿಷ್ಕಾರಗಳ ಮಹತ್ವವನ್ನು ಈ ಶೃಂಗಸಭೆ ಮನದಟ್ಟು ಮಾಡಿದೆ. ಮಾರುಕಟ್ಟೆಯ ಮಹತ್ವವನ್ನೂ ಸಾರಿದೆ. ಡೀಪ್‌ ಟೆಕ್‌ನ ಪ್ರಯೋಜನ ಕರ್ನಾಟಕ ಅಥವಾ ಭಾರತಕ್ಕೆ ಸೀಮಿತವಾಗಿರದೆ, ಇಡೀ ವಿಶ್ವಕ್ಕೆ ದೊರೆಯಲಿದೆ’ ಎಂದರು.

ಮುಕ್ತಾಯ: ಶೃಂಗಸಭೆಯು ಭವಿಷ್ಯ ರೂಪಿಸುವವರ ಸಮಾವೇಶದೊಂದಿಗೆ (ಎಫ್ಎಂಸಿ) ಮುಕ್ತಾಯಗೊಂಡಿತು. ಸುಹಾನಿ ಶಾ ಅವರಿಂದ ಸಿಂಫೊನಿ ಆಫ್ ಸೌಂಡ್ ಆ್ಯಂಡ್ ಮೈಂಡ್ ಪ್ರದರ್ಶನ, ಗಗನಯಾತ್ರಿ ಶುಭಾಂಶು ಶುಕ್ಲಾ, ಲೇಖಕ ಅಂಕುರ್ ವಾರಿಕೂ ಅವರ ಭಾಷಣಗಳು, ಕ್ವಿಕ್ ಕಾಮರ್ಸ್ ಜೆಪ್ಟೊ ಸಹ ಸ್ಥಾಪಕ ಕೈವಲ್ಯ ವೋಹ್ರಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಭಾರತದ ಮಹಿಳಾ ಕ್ರಿಕೆಟ್ ತಾರೆ ರಿಚಾ ಘೋಷ್ ಅವರ ಜೊತೆಗಿನ ಸಂವಾದ ಕಾರ್ಯಕ್ರಮಗಳು ಯುವಸಮುದಾಯಕ್ಕೆ ಸ್ಪೂರ್ತಿ ತುಂಬಿದವು.

ಅಮೆರಿಕದ ನಾಸಾ -ಏಮ್ಸ್ ರಾಷ್ಟ್ರೀಯ ಬಾಹ್ಯಾಕಾಶ ಸೊಸೈಟಿ (ಎನ್‌ಎಸ್‌ಎಸ್‌) ನಡೆಸಿದ ಬಾಹ್ಯಾಕಾಶ ವಸಾಹತು ವಿನ್ಯಾಸ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿರುವ ಕಲಬುರಗಿಯ ಎಸ್ಆರ್‌ಎನ್ ಮೆಹತಾ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳು ಶುಭಾಂಶು ಶುಕ್ಲಾ ಅವರ ಜೊತೆ ಸಮೂಹ ಚಿತ್ರ ತೆಗೆದುಕೊಂಡು ಸಂಭ್ರಮಿಸಿದರು.

ನಾಲ್ಕೈದು ದಿನ ಹಸಿವೇ ಆಗಿರಲಿಲ್ಲ: ಶುಭಾಂಶು ಶುಕ್ಲಾ

‘ಭಾರತದ ಮಹಾತ್ವಾಕಾಂಕ್ಷಿ ಗಗನಯಾನ ಯೋಜನೆಯ ಭಾಗವಾಗಿ ಇತ್ತೀಚೆಗೆ ಬಾಹ್ಯಾಕಾಶಕ್ಕೆ ತೆರಳಿದಾಗ ನನಗೆ ನಾಲ್ಕೈದು ದಿನ ಹಸಿವೇ ಆಗಿರಲಿಲ್ಲ’ ಎಂದು ಗಗನಯಾನಿ ಶುಭಾಂಶು ಶುಕ್ಲಾ ತಿಳಿಸಿದರು. ಬಾಹ್ಯಾಕಾಶ ಯಾನದ ಅನುಭವವನ್ನು ಶೃಂಗಸಭೆಯಲ್ಲಿ ಬಿಚ್ಚಿಟ್ಟ ಅವರು ‘ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದ ಕಾರಣ ಹಸಿವು ಆಗುತ್ತಿರಲಿಲ್ಲ. 20 ದಿನಗಳಲ್ಲಿ ದೇಹದ ತೂಕ 5 ಕೆ.ಜಿ. ಕಡಿಮೆಯಾಗಿತ್ತು. ಗಗನಕ್ಕೇರುವಾಗ ಎದೆ ಮೇಲೆ ಬೈಕ್‌ ಇಟ್ಟಷ್ಟು ಭಾರವಾಗಿತ್ತು. ಉಸಿರಾಡುವುದೇ ಕಷ್ಟವಾಗಿತ್ತು’ ಎಂದು ವಿವರಿಸಿದರು. ‘ಮುಂಬರುವ ವರ್ಷಗಳಲ್ಲಿ ಭಾರತವು ಬಾಹ್ಯಾಂತರಿಕ್ಷ ಕಾರ್ಯಕ್ರಮಗಳಲ್ಲಿ ಗಮನಾರ್ಹವಾಗಿ ತೊಡಗಿಕೊಳ್ಳಲಿದೆ. ಈ ಕ್ಷೇತ್ರದಲ್ಲಿ ಭಾರತದ ಭವಿಷ್ಯ ಪ್ರಖರವಾಗಿದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಗಗನಯಾನ ಕೈಗೊಳ್ಳಲಿದ್ದಾರೆ. ಈ ಕ್ಷೇತ್ರದಲ್ಲಿನ ನವೋದ್ಯಮಗಳಿಗೆ ಉಜ್ವಲ ಭವಿಷ್ಯ ಇದೆ’ ಎಂದು ಹೇಳಿದರು. ‘ದೇಶದ 300 ನವೋದ್ಯಮಗಳು ಈಗಾಗಲೇ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮುಂಬರುವ ವರ್ಷಗಳಲ್ಲಿ ಇಂತಹ ನವೋದ್ಯಮಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಗಲ ವಿಸ್ತರಿಸಲಿದೆ ನವೋದ್ಯಮ

ನವೋದ್ಯಮಗಳನ್ನು ರಾಜ್ಯದ ಮೂಲೆ ಮೂಲೆಗಳಿಗೆ ವಿಸ್ತರಿಸಲು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ನಿರ್ಧರಿಸಿದೆ. 1000ಕ್ಕೂ ಅಧಿಕ ನವೋದ್ಯಮಿಗಳಿಗೆ ನೆರವಾಗಲು ಯೋಜನೆ ರೂಪಿಸಿದೆ. ಅದಕ್ಕೆ ಪೂರಕವಾಗಿ ₹ 250 ಕೋಟಿಯಲ್ಲಿ ಯೋಜನೆ ರೂಪಿಸಲಾಗಿದೆ ಎನ್ನುತ್ತದೆ ‘ಬಿಯಾಂಡ್‌ ಬೆಂಗಳೂರು’ ವರದಿ. ಮೈಸೂರು ಹುಬ್ಬಳ್ಳಿ - ಧಾರವಾಡ ಹಾಗೂ ಮಂಗಳೂರಿನ ಐಟಿ ಕ್ಲಸ್ಟರ್‌ಗಳ ಕೊಡುಗೆ ಪ್ರಗತಿಯ ಬಗ್ಗೆ ವರದಿಯಲ್ಲಿ ವಿವರಿಸಲಾಗಿದೆ. 2025ರಲ್ಲಿ ₹15 ಸಾವಿರ ಕೋಟಿ ಬಂಡವಾಳವನ್ನು ನವೋದ್ಯಮಗಳು ಆಕರ್ಷಿಸಿವೆ ಎನ್ನುತ್ತದೆ ವರದಿ.

ಮೈಸೂರು ಕ್ಲಸ್ಟರ್‌: 2023-24ನೇ ಸಾಲಿನಲ್ಲಿ ₹5700 ಕೋಟಿ ಮೊತ್ತ ರಫ್ತು ವಹಿವಾಟು ನಡೆಸಿದೆ. ಈ ಮೂಲಕ ರಾಜ್ಯದ ಎರಡನೇ ಅತಿದೊಡ್ಡ ಐಟಿ ರಫ್ತು ಕ್ಲಸ್ಟರ್ ಆಗಿ ಗುರುತಿಸಿಕೊಂಡಿದೆ. ಆಂತರಿಕ ವ್ಯಾಪಾರ ಮತ್ತು ಉದ್ದಿಮೆ ಉತ್ತೇಜನಾ ಇಲಾಖೆಯಿಂದ ಮಾನ್ಯತೆ ಪಡೆದಿರುವ ತಂತ್ರಜ್ಞಾನ ಆರೋಗ್ಯ ರಕ್ಷಣೆ ಶಿಕ್ಷಣ ಪ್ರವಾಸೋದ್ಯಮ ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ 440 ನವೋದ್ಯಮಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮಂಗಳೂರು ಕ್ಲಸ್ಟರ್: 200 ನವೋದ್ಯಮಗಳು ಸೇರಿ 250ಕ್ಕೂ ಹೆಚ್ಚು ತಂತ್ರಜ್ಞಾನ ಕಂಪನಿಗಳನ್ನು ಹೊಂದಿದ್ದು ₹4.500 ಕೋಟಿ ಮೊತ್ತದ ಐಟಿ ರಫ್ತು ದಾಖಲಿಸಿದೆ. ಎಐ ಡೀಪ್‌ ಟೆಕ್‌ ಸಾಗರ ತಂತ್ರಜ್ಞಾನ ಮತ್ತು ಹಣಕಾಸು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. 

ಹುಬ್ಬಳ್ಳಿ-ಧಾರವಾಡ- ಬೆಳಗಾವಿ ಕ್ಲಸ್ಟರ್: ₹3500 ಕೋಟಿ ಐಟಿ ರಫ್ತು ವಹಿವಾಟು ನಡೆಸಿದೆ. ಬೆಳಗಾವಿಯು ವೈಮಾಂತರಿಕ್ಷ ತಯಾರಿಕಾ ವಲಯದಲ್ಲಿ ಮುಂಚೂಣಿಯಲ್ಲಿದೆ. ಡೀಪ್‌ ಟೆಕ್ ಸಾಫ್ಟವೇರ್ ಇಎಸ್‌ಡಿಎಂ ಕೃಷಿ ತಂತ್ರಜ್ಞಾನ ಮತ್ತು ತಯಾರಿಕಾ ವಲಯಗಳಲ್ಲಿ 400ಕ್ಕೂ ಹೆಚ್ಚು ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ನವೋದ್ಯಮಗಳು ವ್ಯಾಪಕವಾಗಿ ಬೆಳೆಯುತ್ತಿದ್ದು ಉದ್ಯಮಶೀಲತೆಗೆ ಉತ್ತೇಜನ ನೀಡುತ್ತಿವೆ. ಬಾಗಲಕೋಟೆ ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಕೃಷಿ ತಂತ್ರಜ್ಞಾನ ಮತ್ತು ಆಹಾರ ತಂತ್ರಜ್ಞಾನ ಕೇಂದ್ರಗಳಲ್ಲಿ 22 ಸಾವಿರಕ್ಕೂ ಹೆಚ್ಚು ‘ಎಸ್‌ಎಂಇ’ಗಳು ಕಾರ್ಯನಿರ್ವಹಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.