ಪೊಲೀಸ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ನಗರದ ಹಲಸೂರು ಕೆರೆ ಸಮೀಪದ ಗುರು ಸಿಂಗ್ ಸಭಾ ಸಿಖ್ ಗುರುದ್ವಾರಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದು, ತಪಾಸಣೆ ಬಳಿಕ ಹುಸಿ ಕರೆ ಎಂಬುದು ಗೊತ್ತಾಗಿದೆ.
ಹಲಸೂರು ಗುರುದ್ವಾರದ ಮುಖ್ಯರಸ್ತೆಯಲ್ಲಿರುವ ಗುರುದ್ವಾರದ ಅಧಿಕೃತ ವಿಳಾಸಕ್ಕೆ ದುಷ್ಕರ್ಮಿಗಳು ಆಗಸ್ಟ್ 24ರ ಮಧ್ಯಾಹ್ನ 1.54ರ ಸುಮಾರಿಗೆ ಇ-ಮೇಲ್ ಸಂದೇಶ ಕಳುಹಿಸಿ, ಮಂದಿರವನ್ನು ಆರ್‌ಡಿಎಕ್ಸ್ ಬಾಂಬ್‌ನಿಂದ ಸ್ಫೋಟಗೊಳಿಸುವ ಬೆದರಿಕೆ ಹಾಕಿದ್ದಾರೆ. ಇ-ಮೇಲ್ ಸಂದೇಶ ಗಮನಿಸಿದ ಗುರುದ್ವಾರದ ಸಿಬ್ಬಂದಿ ತಕ್ಷಣ ಹಲಸೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶ್ವಾನದಳ, ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ಬಂದು ಮಂದಿರದ ಆವರಣ, ಶೌಚಗೃಹ ಪರಿಶೀಲನೆ ನಡೆಸಿದ್ದಾರೆ. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಪೊಲೀಸರು ಹೇಳಿದ್ದಾರೆ.
ಸಂದೇಶದಲ್ಲೇನಿದೆ?: ರಾಜ್‌ಗಿರಿ ಎಂಬುವವರ ಇ-ಮೇಲ್‌ನಿಂದ ಸಂದೇಶ ಕಳುಹಿಸಲಾಗಿದೆ. ಮಂದಿರದ ಶೌಚ ಗೃಹದಲ್ಲಿ ಆರ್‌ಡಿಎಕ್ಸ್ ಹಾಗೂ 4 ಐಇಡಿ ಬಾಂಬ್‌ಗಳನ್ನು ಇಡಲಾಗಿದೆ. 8 ಗಂಟೆ ಒಳಗೆ ದೇವಸ್ಥಾನ ಖಾಲಿ ಮಾಡಬೇಕು. ಇಲ್ಲದಿದ್ದರೆ ಬಾಂಬ್‌ಗಳು ಸ್ಫೋಟಗೊಳ್ಳಲಿವೆ ಎಂದು ಉಲ್ಲೇಖಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.