ಬೆಂಗಳೂರು: ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ತಾಲ್ಲೂಕಿನ ಕೊಮ್ಮಸಂದ್ರದ ವೆಂಕಟೇಶ್ ಅಲಿಯಾಸ್ ಜಾಕಿ (45) ಬಂಧಿತ.
ಆರೋಪಿಯಿಂದ ₹10 ಲಕ್ಷ ಮೌಲ್ಯದ 23 ಗ್ರಾಂ ಚಿನ್ನಾಭರಣ, 2 ಕೆ.ಜಿ 600 ಗ್ರಾಂ ಬೆಳ್ಳಿಯ ವಸ್ತು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು
ಸಿಂಗಸಂದ್ರದ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಅರ್ಚಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು.
‘ಸಿಂಗಸಂದ್ರದ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಒಳಕ್ಕೆ ನುಗ್ಗಿದ್ದ ಆರೋಪಿ, ಗರ್ಭಗುಡಿಯಲ್ಲಿದ್ದ ಹುಂಡಿಯ ಹಣ ಹಾಗೂ ದೇವರ ವಿಗ್ರಹದಲ್ಲಿದ್ದ ಚಿನ್ನವನ್ನು ಕಳ್ಳತನ ಮಾಡಿದ್ದ. ಕದ್ದ ಚಿನ್ನವನ್ನು ಪರಿಚಯವಿದ್ದ ವ್ಯಕ್ತಿಯೊಬ್ಬರ ಮನೆಯಲ್ಲಿ ಇಟ್ಟಿದ್ದ’ ಎಂದು ಪೊಲೀಸರು ಹೇಳಿದರು.
ಆರೋಪಿಯ ಬಂಧನದಿಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.