ಮೂವರು ಅಂತರರಾಜ್ಯ ಕಳ್ಳರ ಸೆರೆ
ಬೆಂಗಳೂರು: ದೇವಸ್ಥಾನಗಳಿಗೆ ನುಗ್ಗಿ ವಿಗ್ರಹಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಅಂತರ ರಾಜ್ಯ ಕಳ್ಳರನ್ನು ಕಾಡುಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೋಲ್ಕತ್ತದ ಮೊಹಮ್ಮದ್ ಯೂಸಫ್ (20), ಮೊಹಮ್ಮದ್ ರಬ್ಬಿ (22), ಮೊಹಮ್ಮದ್ ಬಾಬು (21) ಬಂಧಿತರು.
ಬಂಧಿತರಿಂದ ₹6.50 ಲಕ್ಷ ಮೌಲ್ಯದ ದೇವರ 22 ವಿಗ್ರಹಗಳು, ಕೃತ್ಯಕ್ಕೆ ಬಳಸಿದ್ದ ಆಟೊ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಕಾಡುಗೋಡಿಯ ಖಾಜಿಸೊನ್ನೇನಹಳ್ಳಿಯ ಮುನೇಶ್ವರಸ್ವಾಮಿ ದೇವಸ್ಥಾನದ ಉಸ್ತುವಾರಿ ಎಂ.ಕೃಷ್ಣಪ್ಪ ಅವರು ನೀಡಿದ ದೂರು ಆಧರಿಸಿ, ಆರೋಪಿಗಳನ್ನು ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.
ಜುಲೈ 30ರಂದು ದೇವಸ್ಥಾನಕ್ಕೆ ತೆರಳಿ ನೋಡಿದಾಗ ಬಾಗಿಲು ಒಡೆದು ದೇವರ ವಿಗ್ರಹಗಳು ಹಾಗೂ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿರುವುದು ಗೊತ್ತಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಕನ್ನಮಂಗಲ ಮುಖ್ಯರಸ್ತೆಯಲ್ಲಿ ಗಸ್ತು ನಡೆಸುತ್ತಿರುವಾಗ ಮೂವರು ವ್ಯಕ್ತಿಗಳು ಅನುಮಾನಸ್ಪದವಾಗಿ ಓಡಾಟ ನಡೆಸುತ್ತಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬ್ಯಾಗ್ ಪರಿಶೀಲಿಸಲಾಯಿತು. ಬ್ಯಾಗ್‌ನಲ್ಲಿ ಆ್ಯಕ್ಸೆಲ್ ಬ್ಲೇಡ್ ಹಾಗೂ ಕಬ್ಬಿಣದ ರಾಡುಗಳು ಪತ್ತೆ ಆಗಿದ್ದವು. ಹೆಚ್ಚಿನ ವಿಚಾರಣೆ ನಡೆಸಿದಾಗ ಮುನೇಶ್ವರ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಹಾಗೂ ಹಣ ಕಳ್ಳತನ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
‘ಪಶ್ಚಿಮ ಬಂಗಾಳದಿಂದ ನಗರಕ್ಕೆ ಬಂದಿದ್ದ ಆರೋಪಿಗಳು, ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ನೆಲಸಿದ್ದರು. ಕಾರು ವಾಷಿಂಗ್ ಕೆಲಸವನ್ನು ಆರೋಪಿಗಳು ಮಾಡುತ್ತಿದ್ದರು. ಹಗಲು ದೇವಸ್ಥಾನಗಳನ್ನು ಗುರುತಿಸುತ್ತಿದ್ದರು. ರಾತ್ರಿ ವೇಳೆ ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಮಾಡುತ್ತಿದ್ದರು. ಮೂವರು ಆರೋಪಿಗಳಾಗಿದ್ದು, ಕಾಡುಗೋಡಿ, ಹೊಸಕೋಟೆ, ಸೂಲಿಬೆಲೆ, ಆವಲಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ದೇವಸ್ಥಾನಗಳಿಗೆ ನುಗ್ಗಿ ಕಳ್ಳತನ ಮಾಡಿದ್ದರು. ಇವರ ಬಂಧನದಿಂದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.