ADVERTISEMENT

ಬೆಂಗಳೂರು: ₹2 ಕೋಟಿ ಮೌಲ್ಯದ ಕೈಗಡಿಯಾರಗಳ ಕಳವು

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 19:05 IST
Last Updated 7 ಜನವರಿ 2022, 19:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಂಗಡಿಯೊಂದರ ಬಾಗಿಲು ಮುರಿದ ದುಷ್ಕರ್ಮಿಗಳು ಅದರಲ್ಲಿಟ್ಟಿದ್ದ ₹2 ಕೋಟಿ ಮೌಲ್ಯದ ಕೈಗಡಿಯಾರಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಫ್ರೇಜರ್‌ ಟೌನ್ ನಿವಾಸಿಯಾಗಿರುವ ಶಾಮೋಯಿಲ್‌ ಎಂಬುವರು 100 ಅಡಿ ರಸ್ತೆಯ ಬದಿಯಲ್ಲಿ ಜಿಮ್ಸನ್‌ ಟೈಮ್ಸ್‌ ಹೆಸರಿನ ಅಂಗಡಿಯೊಂದನ್ನು ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಅವರು ಅಂಗಡಿ ಬಾಗಿಲು ಹಾಕಿ ಮನೆಗೆ ಹೋಗಿದ್ದರು. ಈ ವೇಳೆ ಬಾಗಿಲು ಮುರಿದು ಒಳಗೆ ನುಗ್ಗಿರುವ ದುಷ್ಕರ್ಮಿಗಳು 129 ರ‍್ಯಾಡೊ, 29 ಲಾಂಗಿನೆಸ್‌ ಮತ್ತು 13 ಓಮೆಗಾ ವಾಚ್‌ಗಳನ್ನು ಕದ್ದೊಯ್ದಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ನಾನು ಬಾಡಿಗೆ ಕಟ್ಟಡವೊಂದರಲ್ಲಿ ಅಂಗಡಿ ನಡೆಸುತ್ತಿದ್ದೆ. ಕಟ್ಟಡದ ಮಾಲೀಕರು ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕೆಳಗೆ ಬಂದು ನೋಡಿದಾಗ ಬಾಗಿಲು ಮುರಿದಿರುವುದು ಗೊತ್ತಾಗಿದೆ. ಕೂಡಲೇ ಅವರು ನನಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ನೋಡಿದಾಗ ದುಬಾರಿ ಬೆಲೆಯ ಕೈಗಡಿಯಾರಗಳು ಕಳವಾಗಿದ್ದವು ಎಂದುಶಾಮೋಯಿಲ್‌ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಶ್ವಾನ ದಳದ ಸಿಬ್ಬಂದಿ ಅಂಗಡಿ ಸುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಪರಿಶೀಲಿಸಿದ್ದು ಅವರಿಗೆ ಕಳ್ಳರ ಕೆಲ ಕುರುಹುಗಳು ಸಿಕ್ಕಿವೆ. ಅಂಗಡಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.