ADVERTISEMENT

ಬೆಂಗಳೂರು: ಟ್ರ್ಯಾಕ್ಟರ್‌ ಕಳವು; ರೌಡಿಶೀಟರ್ ಸೇರಿ ಮೂವರ ಸೆರೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 16:15 IST
Last Updated 10 ಫೆಬ್ರುವರಿ 2026, 16:15 IST
ಸತೀಶ್ ಕುಮಾರ್
ಸತೀಶ್ ಕುಮಾರ್   

ಬೆಂಗಳೂರು: ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಹಾಗೂ ಟ್ರಾಲಿಯನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ರೌಡಿಶೀಟರ್ ಸೇರಿ ಮೂವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊತ್ತನೂರು ನಿವಾಸಿ, ರೌಡಿ ಶೀಟರ್ ಸತೀಶ್ ಕುಮಾರ್, ರಾಯಚೂರು ಜಿಲ್ಲೆಯ ಉಮಾಲೂಟಿ ಗ್ರಾಮದ ರವಿಚಂದ್ರ ಹಾಗೂ ಕಾಚೋಹಳ್ಳಿ ನಿವಾಸಿ ಮಗನ್ ಎಚ್‌.ಪಟೇಲ್ ಎಂಬುವವರನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ. ಬಂಧಿತರಿಂದ ₹8 ಲಕ್ಷ ಮೌಲ್ಯದ ಟ್ರ್ಯಾಕ್ಟರ್, ಟ್ರಾಲಿ ಮತ್ತು ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕೆಂಗೇರಿ ಉಪನಗರ ವಳೆಗೇರಹಳ್ಳಿ ಪೆಟ್ರೋಲ್ ಬಂಕ್ ಎದುರು ಖಾಲಿ ಜಾಗದಲ್ಲಿ ಜನವರಿ 29ರಂದು ರಾತ್ರಿ 8 ಗಂಟೆಗೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಹಾಗೂ ಟ್ರಾಲಿ ಕಳವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡರು. ಸಿ.ಸಿ.ಟಿ.ವಿ. ಕ್ಯಾಮೆರಾಗಳ ಪರಿಶೀಲನೆ ಬಳಿಕ ದೊರೆತ ಸುಳಿವಿನ ಮೇರೆಗೆ ಮೂವರನ್ನು ಬಂಧಿಸಿ, ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡರು.

ADVERTISEMENT

ತಲೆಮರೆಸಿಕೊಂಡಿರುವ ಡ್ಯಾನಿಯಲ್ ಹಾಗೂ ಮಂಜುನಾಥ್ ಅವರೊಂದಿಗೆ ಸೇರಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕೋಣನಕುಂಟೆ ಪೊಲೀಸ್ ಠಾಣೆಯ ರೌಡಿಶೀಟರ್‌ ಸತೀಶ್ ಕುಮಾರ್ ವಿರುದ್ಧ ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆಗೆ ಯತ್ನ, ಅತ್ಯಾಚಾರ, ಸುಲಿಗೆ ಸೇರಿ 11ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರವಿಚಂದ್ರ ವಿರುದ್ಧ ನಗರದ ವರ್ತೂರು ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ, ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ರಾಜಸ್ಥಾನದ ಮಗನ್ ಎಚ್‌ ಪಟೇಲ್ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ನಕಲಿ ನೋಟು ಚಲಾವಣೆ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ರವಿಚಂದ್ರ
ಮಗನ್ ಪಟೇಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.