ADVERTISEMENT

ಬೆಂಗಳೂರು | ‘ಲೆಫ್ಟ್‌ ಫ್ರೀ’ಯಾದರೆ ದಟ್ಟಣೆ ನಿಯಂತ್ರಣ: ಇನ್ಫ್ರಾ ಕೈಜೆನ್ ವರದಿ

ಸಿಗ್ನಲ್‌ಗಳನ್ನು ಪ್ರದಕ್ಷಿಣಾಕಾರವಾಗಿ ಮಾಡಿದರೆ ಶೇ 20ರಷ್ಟು ಸಮಸ್ಯೆ ಕಡಿಮೆ

ಬಾಲಕೃಷ್ಣ ಪಿ.ಎಚ್‌
Published 22 ಫೆಬ್ರುವರಿ 2026, 23:36 IST
Last Updated 22 ಫೆಬ್ರುವರಿ 2026, 23:36 IST
   

ಬೆಂಗಳೂರು: ಬಹುತೇಕ ಸಿಗ್ನಲ್‌ಗಳಲ್ಲಿ ‘ಲೆಫ್ಟ್‌ ಫ್ರೀ’ ಕೆಲಸ ಮಾಡುತ್ತಿಲ್ಲ. ಸಿಗ್ನಲ್‌ಗಳು ಪ್ರದಕ್ಷಿಣಾಕಾರವಾಗಿ ಕಾರ್ಯನಿರ್ವಹಿಸಿದರೆ ಎಡಬದಿಗೆ ತಿರುವು ಪಡೆದು ವಾಹನ ಸಂಚರಿಸುವುದು ಸರಾಗವಾದರೆ ಶೇಕಡ 20ರಷ್ಟು ವಾಹನದಟ್ಟಣೆ ಕಡಿಮೆಯಾಗಲಿದೆ. ಆದರೆ, ಎಡ ತಿರುವಿಗೆ ಅವಕಾಶವಿಲ್ಲದಂತೆ ಸಿಗ್ನಲ್‌ಗಳು ಕಾರ್ಯನಿರ್ವಹಿಸುತ್ತಿವೆ. 

‘ಇನ್ಫ್ರಾ ಕೈಜೆನ್’ ಸರ್ಕಾರೇತರ ಸಂಸ್ಥೆಯು ನಗರದಲ್ಲಿ ಹಲವು ಸಿಗ್ನಲ್‌ಗಳನ್ನು ಅಧ್ಯಯನ ಮಾಡಿ ಈ ವರದಿಯನ್ನು ಸಿದ್ದಪಡಿಸಿದ್ದು, ಪೊಲೀಸ್‌ ಇಲಾಖೆಗೂ ಸಲ್ಲಿಸಿದೆ.

‘ನಗರದ ಟ್ರಾಫಿಕ್ ಸಮಸ್ಯೆಗೆ ನೂರಾರು ಕೋಟಿ ರೂಪಾಯಿ ವೆಚ್ಚದ ಎತ್ತರಿಸಿದ ಮಾರ್ಗಗಳು ಇಲ್ಲವೇ ಸುರಂಗ ರಸ್ತೆಗಳು ಪರಿಹಾರ ಎಂದು ಬಿಂಬಿಸಲಾಗುತ್ತದೆ. ವಾಹನ ದಟ್ಟಣೆಗೆ ರಸ್ತೆಗಳ ಕೊರತೆಯಷ್ಟೇ ಕಾರಣವಲ್ಲ, ಸಿಗ್ನಲ್‌ಗಳಲ್ಲಿನ ಸಣ್ಣ ತಾಂತ್ರಿಕ ತಪ್ಪು ಕೂಡ ಕಾರಣ. ಸಿಗ್ನಲ್‌ಗಳ ದಿಕ್ಕು ಬದಲಾಯಿಸಿದರೆ ಶೇ 20ರಿಂದ ಶೇ 30ರಷ್ಟು ದಟ್ಟಣೆ ಕಡಿಮೆಯಾಗಲಿದೆ’ ಎಂದು ‘ಇನ್ಫ್ರಾ ಕೈಜೆನ್’ ಹೇಳಿದೆ.

ADVERTISEMENT

‘ಆಂಟಿ-ಕ್ಲಾಕ್‌ವೈಸ್’ ಎಡವಟ್ಟು:

ದೇಶದಲ್ಲಿ ವಾಹನಗಳು ಎಡಬದಿಯಲ್ಲಿ ಸಂಚರಿಸುವ ನಿಯಮ ಜಾರಿಯಲ್ಲಿದೆ. ಸಂಚಾರ ಸುಗಮ ಆಗಬೇಕಿದ್ದರೆ ಸಿಗ್ನಲ್‌ಗಳು ಅದಕ್ಕೆ ಸರಿಯಾಗಿ ಒಂದಾದ ಮೇಲೆ ಒಂದು ಬದಲಾಗಬೇಕು. ಉದಾಹರಣೆಗೆ ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ನಾಲ್ಕು ಕಡೆಗೆ ಸಿಗ್ನಲ್‌ ಲೈಟ್‌ಗಳು ಇರುತ್ತವೆ. ಅವು ಒಂದು ಕಡೆ ವಾಹನ ಸಂಚಾರಕ್ಕೆ ಹಸಿರು ಸೂಚನೆ ನೀಡಿದ ಬಳಿಕ ಅದರ ಎಡ ಬದಿಗೆ ಇರುವ ರಸ್ತೆಯ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಬೇಕು. ಆ ನಂತರ ಅದರ ಎಡಬದಿಯ ರಸ್ತೆಯ ವಾಹನಗಳಿಗೆ ಹೀಗೆ ಪ್ರದಕ್ಷಿಣಾಕಾರವಾಗಿ ಸಂಚಾರ ತೆರೆದುಕೊಳ್ಳಬೇಕು. ಆದರೆ, ಅಪ್ರದಕ್ಷಿಣಾಕಾರವಾಗಿ (ಆಂಟಿ ಕ್ಲಾಕ್‌ವೈಸ್‌) ತೆರೆದುಕೊಳ್ಳುತ್ತಿರುವುದರಿಂದ ಎಡ ತಿರುವು ಪಡೆಯಬೇಕಿರುವ ವಾಹನಗಳೂ ಕನಿಷ್ಠ ಒಂದು ನಿಮಿಷ ಹೆಚ್ಚುವರಿಯಾಗಿ ನಿಲ್ಲುವಂತಾಗಿದೆ ಎಂದು ವಿವರಿಸಿದೆ.

ಇನ್ಫ್ರಾ ಕೈಜೆನ್ ತಂಡದ ಸಮೀಕ್ಷೆಯ ಪ್ರಕಾರ ಬೆಂಗಳೂರಿನ 32 ಪ್ರಮುಖ ಸಿಗ್ನಲ್‌ಗಳಲ್ಲಿ ಶೇ 31ರಷ್ಟು ಸಿಗ್ನಲ್‌ಗಳು ವಿರುದ್ಧ ದಿಕ್ಕಿನಿಂದ ಕೆಲಸ ಮಾಡುತ್ತಿವೆ. ಇದರಿಂದಾಗಿ ‘ಫ್ರೀ ಲೆಫ್ಟ್’ ಸಿಗಬೇಕಾದ ಜಾಗದಲ್ಲಿ ವಾಹನಗಳು ಸಿಕ್ಕಿಹಾಕಿಕೊಳ್ಳುತ್ತಿವೆ.

ತುಮಕೂರು ರಸ್ತೆಯಲ್ಲಿ ಬೆಂಗಳೂರಿನ ಪ್ರವೇಶ ದ್ವಾರದಂತಿರುವ 8ನೇ ಮೈಲಿ ಜಂಕ್ಷನ್, ದಾಸರಹಳ್ಳಿ ಜಂಕ್ಷನ್‌ಗಳಲ್ಲಿ ವಾಹನಗಳು ಕಡಿಮೆ ಇದ್ದಾಗಲೂ ಅಪ್ರದಕ್ಷಿಣೆ ಸಿಗ್ನಲ್‌ಗಳಿಂದಾಗಿ ದಟ್ಟಣೆಯಾಗುತ್ತಿದೆ. ಎಂ.ಜಿ. ರಸ್ತೆ, ಜಕ್ಕೂರು, ವಿಮಾನ ನಿಲ್ದಾಣ ರಸ್ತೆಯ ಹಲವು ಜಂಕ್ಷನ್‌ಗಳು, ಹಲವು ವಾಹನ ನಿಬಿಡ ಕಾರಿಡಾರ್‌ಗಳಲ್ಲೂ ಈ ಸಣ್ಣ ತಪ್ಪು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಪ್ರತಿ ಸಿಗ್ನಲ್‌ಗಳಲ್ಲಿ ಹಸಿರು ದೀಪ ಸೂಚನೆ ಒಂದು ಸುತ್ತು ಮುಗಿಯುವಾಗ ಅರ್ಧ ನಿಮಿಷ ತಡವಾದರೂ ದಟ್ಟಣೆಯ ಅವಧಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದರೆ ಸಂಚಾರ ಸರಾಗವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಸಂಚಾರ ಪೊಲೀಸರಿಗೆ ವಿವರ’
‘ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಎಂ.ಎ. ಸಲೀಂ ಅವರಿಗೆ ಈ ವರದಿಯನ್ನು ಸಲ್ಲಿಸಲಾಗಿದೆ. ನಮ್ಮ ಸಂಚಾರ ಪೊಲೀಸರಿಗೆ ಈ ಬಗ್ಗೆ ವಿವರ ನೀಡಿ. ಅದಕ್ಕಾಗಿ ಒಂದು ದಿನ ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪ್ರದಕ್ಷಿಣಾಕಾರವಾಗಿ ಸಿಗ್ನಲ್‌ ತೆರೆಯುವ ಬಗ್ಗೆ ಅವರು ಹೇಳಿದ ದಿನ ವಿವರಿಸಲಾಗುವುದು. ಪ್ರಾಯೋಗಿಕವಾಗಿಯೂ ತೋರಿಸಲಾಗುವುದು’ ಎಂದು ಇನ್ಫ್ರಾ ಕೈಜೆನ್ ಸಂಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಕೆ.ಎನ್‌. ತಿಳಿಸಿದರು.
ವೇಣುಗೋಪಾಲ್ ಕೆ.ಎನ್‌.
ಜಕ್ಕೂರಿನಲ್ಲಿ ಪ್ರಯೋಗ
‘ನಮ್ಮ ವರದಿಯನ್ನು ಸಂಚಾರ ವಿಭಾಗದ ಎಸಿಪಿ (ಯೋಜನೆ) ಅವರಿಗೆ ಸಲ್ಲಿಸಿದ್ದೇವೆ. ಜಕ್ಕೂರು ಸರ್ಕಲ್‌ನಲ್ಲಿ ಪ್ರಾಯೋಗಿಕವಾಗಿ ತೋರಿಸಿ. ಅಲ್ಲಿನ ಪರಿಣಾಮವನ್ನು ನೋಡಿಕೊಂಡು ಉಳಿದ ಸರ್ಕಲ್‌ಗಳಲ್ಲಿ ಪ್ರದಕ್ಷಿಣೆ ಸಿಗ್ನಲಿಂಗ್ ವ್ಯವಸ್ಥೆ ಮಾಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ’ ಎಂದು ಇನ್ಫ್ರಾ ಕೈಜೆನ್ ಅಧ್ಯಕ್ಷ ಶಿವರಾಜಕುಮಾರ್‌ ಕಮ್ಮಾರ್‌ ತಿಳಿಸಿದರು.
ಶಿವರಾಜಕುಮಾರ್‌ ಕಮ್ಮಾರ್‌
‘ಎಂ.ಜಿ. ರಸ್ತೆಯಲ್ಲಿಯೂ ಇದೆ ಸಮಸ್ಯೆ’
ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಇರುವ ಸಿಗ್ನಲ್‌ನಲ್ಲಿಯೂ ಈ ಸಮಸ್ಯೆ ಇದೆ. ಕುಂ‌ಬ್ಳೆ ಸರ್ಕಲ್‌ ಕಡೆಯಿಂದ ಬಂದ ವಾಹನಗಳು ಕಾಮರಾಜ್‌ ರಸ್ತೆ ಕಡೆಗೆ ಟ್ರಿನಿಟಿ ನಿಲ್ದಾಣದ ಕಡೆಗೆ ಹಾಗೂ ಬ್ರಿಗೇಡ್‌ ರಸ್ತೆ ಕಡೆಗೆ ಸಾಗುತ್ತವೆ. ಕೆಂಪು ಸಿಗ್ನಲ್ ಬಂದ ಕೂಡಲೇ ಈ ಮೂರು ಕಡೆ ಸಾಗುವ ವಾಹನಗಳು ನಿಲುಗಡೆಗೊಳ್ಳುತ್ತವೆ. ಆ ನಂತರ ಕಾಮರಾಜ್‌ ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಹಸಿರು ಸೂಚನೆ ಸಿಕ್ಕಿದರೆ ಆ ಕಡೆಯಿಂದ ಬರುವ ವಾಹನಗಳು ಮುಂದಕ್ಕೆ ಸಾಗುವುದರ ಜೊತೆಗೆ ಕುಂಬ್ಳೆ ಸರ್ಕಲ್‌ ಕಡೆಯಿಂದ ಬರುವ ಕಾಮರಾಜ್‌ ರಸ್ತೆ ಕಡೆಗೆ ಕಾಮರಾಜ್‌ ರಸ್ತೆಯಿಂದ ಟ್ರಿನಿಟಿ ರಸ್ತೆ ಕಡೆಗೆ ಟ್ರಿನಿಟಿ ಕಡೆಯಿಂದ ಬ್ರಿಗೇಡ್‌ ಕಡೆಗೆ ಎಡ ತಿರುವು ಪಡೆದು ವಾಹನಗಳು ಸರಾಗವಾಗಿ ಸಾಗಲು ಸಾಧ್ಯ. ಆದರೆ ಇಲ್ಲಿ ಕುಂಬ್ಳೆ ಸರ್ಕಲ್‌ ಕಡೆಯ ವಾಹನಗಳಿಗೆ ಹಸಿರು ಸೂಚನೆ ಸಿಕ್ಕಿದ ಬಳಿಕ ಕಾಮರಾಜ್‌ ರಸ್ತೆ ಕಡೆಯ ವಾಹನಗಳಿಗೆ ಹಸಿರು ಸೂಚನೆ ನೀಡುವ ಬದಲು ಬ್ರಿಗೇಡ್‌ ರಸ್ತೆಯ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಇನ್ಫ್ರಾ ಕೈಜೆನ್ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.